
ಪ್ಯಾರಿಸ್: ಮುಂದಿನ ಒಂದು ದಶಕ ಕಾಲ ಟೆನಿಸ್ ಲೋಕವನ್ನು ಆಳುವ ಭರವಸೆ ಮೂಡಿಸಿರುವ ಇಬ್ಬರು ಅದ್ಭುತ ಟೆನಿಸ್ ಪ್ರತಿಭೆಗಳ ನಡುವೆ ನಡೆದ ಫ್ರೆಂಚ್ ಓಪನ್ ಗ್ಯಾನ್‌ಸ್ಲಾಂ ಫೈನಲ್, ವಿಶ್ವದಾದ್ಯಂತ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿತು.ವಿಶ್ವ ನಂ.1 ಇಟಲಿಯ ಯಾನ್ನಿಕ್ ಸಿನ್ನರ್‌ರನ್ನು 4-6, 6-7(4/7), 6-4, 7-6(7/3), 7-6(10/2) ಸೆಟ್‌ಗಳಲ್ಲಿ ಸೋಲಿಸಿದ ಹಾಲಿ ಚಾಂಪಿಯನ್, ವಿಶ್ವ ನಂ.2 ಸ್ಪೇನ್‌ನ ಕಾರ್ಲೋಸ್ ಆಲ್ಕರಜ್, ಸತತ 2ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟರು.
ಬರೋಬ್ಬರಿ 5 ಗಂಟೆ 29 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಆಲ್ಕರಜ್ ತಾಳ್ಮೆ, ಛಲ, ಹೋರಾಟಕ್ಕೆ ಜಯ ದೊರೆಯಿತು. ಇದು ಫ್ರೆಂಚ್ ಓಪನ್ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ನಡೆದ ಫೈನಲ್ ಪಂದ್ಯ ಎನಿಸಿತು. ಈ ಹಿಂದೆ ಇದ್ದ 4 ಗಂಟೆ 42 ನಿಮಿಷಗಳ ದಾಖಲೆಯನ್ನು ಈ ಇಬ್ಬರು ಮುರಿದರು. ಮೊದಲೆರಡು ಸೆಟ್‌ಗಳನ್ನು ಸೋತಿದ್ದ ಆಲ್ಕರಜ್, 3ನೇ ಸೆಟ್ ಗೆದ್ದು ಪುಟಿದೆದ್ದರು. ಬಳಿಕ 4ನೇ ಸೆಟ್‌ನಲ್ಲಿ 3-5 ಗೇಮ್‌ಗಳಿಂದ ಹಿಂದಿದ್ದ ಸ್ಟೇನ್ ಆಟಗಾರ ಪಂದ್ಯ ಸೋಲುವ ಭೀತಿಯಲ್ಲಿದರು. 3 ಚಾಂಪಿಯನ್‌ಶಿಪ್ ಅಂಕಗಳನ್ನು ಹೊಂದಿದ್ದ ಸಿನ್ನರ್, ಇನ್ನೇನು ಚೊಚ್ಚಲ ಫ್ರೆಂಚ್ ಓಪನ್ ಗೆಲ್ಲಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆಲ್ಕರಜ್ ಹೋರಾಟ ಬಿಡದೆ, 4ನೇ ಸೆಟ್ ಗೆದ್ದು ಪಂದ್ಯವನ್ನು 5ನೇ ಸೆಟ್‌ಗೆ ಕೊಂಡೊಯ್ದರು. ಕೊನೆಯ ಸೆಟ್‌ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್‌ನಲ್ಲಿ ನಿರಾಯಾಸವಾಗಿ ಗೆದ್ದ ಆಲ್ಕರಜ್ ತಮ್ಮ ವೃತ್ತಿಬದುಕಿನ 2ನೇ ಫ್ರೆಂಚ್ ಓಪನ್, ಒಟ್ಟಾರೆ 5ನೇ ಗ್ಯಾನ್‌ಸ್ಲಾಂ ಪ್ರಶಸ್ತಿ ಪಡೆದರು.
25 ಕೋಟಿ ಬಹುಮಾನ: ಫ್ರೆಂಚ್ ಓಪನ್ ಗೆದ್ದ ಕೊಕೊ ಆಲ್ಕರಾಜ್ 25 ಕೋಟಿ ರು. ಬಹುಮಾನ ಪಡೆದರು.
12.5 ಕೋಟಿ ಬಹುಮಾನ: ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಆದ ಸಿನರ್‌ಗೆ 12.5 ಕೋಟಿ ದೊರೆಯಿತು.
5 ಗಂಟೆಗೂ ಹೆಚ್ಚು ಕಾಲ ನಡೆದ ಮೊದಲ ಫೈನಲ್!
ಫ್ರೆಂಚ್ ಓಪನ್ ಇತಿಹಾಸದಲ್ಲೇ 5 ಗಂಟೆಗೂ ಅಧಿಕ ಕಾಲ ನಡೆದ ಮೊದಲ ಫೈನಲ್ ಪಂದ್ಯವಿದು. ಈ ಮೊದಲು 1982ರ ಫೈನಲ್‌ನಲ್ಲಿ ಸ್ವೀಡನ್‌ನ ಮ್ಯಾಟ್ಸ್ ವಿಲಾಂಡರ್ ಅರ್ಜೆಂಟೀನಾದ ಗ್ಗುಲೆರ್ಮೊ ವಿಲಸ್ ವಿರುದ್ದ 4 ಗಂಟೆ 42 ನಿಮಿಷಸೆಣಸಿ ಚಾಂಪಿಯನ್ ಆಗಿದ್ದರು. ಅಲ್ಲದೇ ಆಲ್ಕರಜ್-ಸಿನ್ನರ್ ನಡುವಿನ ಫೈನಲ್, ಗ್ಯಾನ್ ಸ್ಲಾಂ ಇತಿಹಾಸದಲ್ಲೇ 2ನೇ ಸುದೀರ್ಘ ಫೈನಲ್. ಜೋಕೋವಿಕ್ ಹಾಗೂ ನಡಾಲ್ ನಡುವೆ 2012ರ ಆಸ್ಟ್ರೇಲಿಯನ್ ಓಪನ್ ಫೈನಲ್ 5 ಗಂಟೆ 53 ನಿಮಿಷ ನಡೆದಿತ್ತು.
ತೈವಾನ್ ಓಪನ್ ಅಥ್ಲೆಟಿಕ್ಸ್: ಭಾರತ ತಂಡಕ್ಕೆ ಮತ್ತೆ ಆರು ಚಿನ್ನ
ತೈಪೆ ಸಿಟಿ: ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2ನೇ ಹಾಗೂ ಕೊನೆಯ ದಿನವಾದ ಭಾನುವಾರ ಭಾರತ ಮತ್ತೆ 6 ಚಿನ್ನದ ಪದಕಗಳೊಂದಿಗೆ 9 ಪದಕಗಳನ್ನು ಜಯಿಸಿತು. ಕೂಟದ ಮೊದಲ ದಿನವೂ ಭಾರತ 6 ಚಿನ್ನದ ಪದಕ ಜಯಿಸಿತು.
ಭಾನುವಾರ ಮಹಿಳೆಯರ 400 ಮೀ. ಹರ್ಡಲ್ಸ್ ಓಟದಲ್ಲಿ ವಿದ್ಯಾ ರಾಮರಾಜ್, ಪುರುಷರ ಜಾವೆಲಿನ್ ಫೋನಲ್ಲಿ ರೋಹಿತ್ ಯಾದವ್, ಮಹಿಳೆಯರ 800 ಮೀ.ಓಟದಲ್ಲಿ ಪೂಜಾ, ಪುರುಷರ 800 ಮೀ. ಓಟದಲ್ಲಿ ಕೃಷನ್ ಕುಮಾರ್, ಮಹಿಳೆಯರ ಜಾವೆಲಿನ್ ಫೋನಲ್ಲಿ ಅನ್ನು ರಾಣಿ ಚಿನ್ನ ಗೆದ್ದರು. ಸಂತೋಷ್, ವಿಶಾಲ್, ಧರಮ್ ವೀರ್ ಹಾಗೂ ಮನು ಅವನ್ನೊಳಗೊಂಡ ಪುರುಷರ 4*400 ಮೀ. ರಿಲೇ ತಂಡ ಚಿನ್ನ ಜಯಿಸಿತು. ಕರ್ನಾಟಕದ ಯಶಸ್ ಪಾಲಾಕ್ಷ ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ 42.22 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. ಮಹಿಳೆಯರ ಲಾಂಗ್ ಜಂಪ್ ನಲ್ಲಿ ಶೈಲಿ ಸಿಂಗ್ ಹಾಗೂ ಆನ್ಸಿ ಸೋಜನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.