ಶ್ರೀಮಂತ ಕ್ರೀಡೆಗಳಲ್ಲಿದ್ದ ಜಿಪಿಎಸ್ ಇದೀಗ ಕಬಡ್ಡಿಗೂ ಎಂಟ್ರಿ!

By Web DeskFirst Published Nov 28, 2018, 9:57 AM IST
Highlights

ಕಬಡ್ಡಿ ಆಟಗಾರರಿಗೂ  ಜಿಪಿಎಸ್‌ ಬಂದಿದೆ. ಫುಟ್ಬಾಲ್ ಸೇರಿದಂತೆ ಶ್ರೀಮಂತ ಕ್ರೀಡೆಗಳಲ್ಲಿದ್ದ ಜಿಪಿಎಸ್ ಇದೀಗ ಪ್ರೊ ಕಬಡ್ಡಿಯಲ್ಲಿ ಮೊದಲ ಬಾರಿ ಬಳಕೆ ಮಾಡಲಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಪುಣೆ(ನ.28):  ಕಬಡ್ಡಿ ಇಂದು ಕೇವಲ ದೇಸಿ ಕ್ರೀಡೆಯಾಗಿ ಉಳಿದಿಲ್ಲ. ಪ್ರೊ ಕಬಡ್ಡಿಯಲ್ಲಿ ಆವೃತ್ತಿಯಿಂದ ಆವೃತ್ತಿಗೆ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ವಿಶ್ವದ ಇತರ ಕ್ರೀಡೆಗಳ ಜತೆ ಪೈಪೋಟಿ ಶುರುವಾಗಿದೆ. ಕಬಡ್ಡಿಯಲ್ಲೂ ಶ್ರೀಮಂತ ಹಾಗೂ ಜನಪ್ರಿಯ ಕ್ರೀಡೆಗಳಾದ ಫುಟ್ಬಾಲ್‌, ಟೆನಿಸ್‌, ಹಾಕಿಗೆ ಸರಿಸಮಾನದ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಫುಟ್ಬಾಲ್‌, ಕ್ರಿಕೆಟ್‌ ಸೇರಿ ಹಲವು ಕ್ರೀಡೆಗಳಲ್ಲಿ ಆಟಗಾರರ ಪ್ರದರ್ಶನ ಗುಣಮಟ್ಟದ ಸಂಪೂರ್ಣ ಮಾಹಿತಿ ಕಲೆಹಾಕಲು ಬಳಸಲಾಗುವ ಜಿಪಿಎಸ್‌ ತಂತ್ರಜ್ಞಾನವನ್ನು ಈಗ ಮೊದಲ ಬಾರಿಗೆ ಪ್ರೊ ಕಬಡ್ಡಿಯಲ್ಲೂ ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು ಬುಲ್ಸ್ ತಂಡದ ಕಾಶಿಲಿಂಗ್ ಈಗ ಆಲ್ರೌಂಡರ್!

‘ಆಫ್ಟಿಮೈ’ ಹೆಸರಿನ ಸಾಧನದ ಪ್ರಯೋಜನವನ್ನು ಪ್ರೊ ಕಬಡ್ಡಿಯಲ್ಲಿ ಆಡುತ್ತಿರುವ 12 ತಂಡಗಳು ಪಡೆದುಕೊಳ್ಳುತ್ತಿವೆ. ಬೆಂಕಿಪೊಟ್ಟಣದ ಗಾತ್ರದ ಸಾಧನವನ್ನು ಆಟಗಾರರ ಎದೆಯ ಭಾಗಕ್ಕೆ ಹಾಕಲಾಗುವುದು. ಪಂದ್ಯದ ವೇಳೆ ಆಟಗಾರರ ಚಲನ ವಲನ, ವೇಗವರ್ಧನೆ, ಚುರುಕುತನ, ಬಲ ಎಲ್ಲದರ ನೈಜ ಸಮಯದ ಅಂಕಿ-ಅಂಶಗಳನ್ನು ಫಿಸಿಯೋ ಹಾಗೂ ಟ್ರೈನರ್‌ಗಳಿಗೆ ಕುಳಿತಲಿಯೇ ಸಿಗಲಿದೆ. ಲ್ಯಾಪ್‌ಟಾಪ್‌ ಇಲ್ಲವೇ ಐಪ್ಯಾಡ್‌ನಲ್ಲಿ ಅಂಕಿ-ಅಂಶಗಳು ಲಭ್ಯವಾಗಲಿವೆ.

ಇದನ್ನೂ ಓದಿ: ಯುವಕರ ಐಕಾನ್ ಕಬಡ್ಡಿ ಪಟು ಬೆಂಗಳೂರು ಬುಲ್ಸ್ ತಂಡದ ಪವನ್!

ಹೇಗೆ ಕೆಲಸ ಮಾಡುತ್ತೆ?: ಒಂದು ತಂಡದಲ್ಲಿ ಆಡುವ 7 ಆಟಗಾರರ ಪೈಕಿ, ಪ್ರಮುಖ ನಾಲ್ವರಿಗೆ ಈ ಸಾಧವನ್ನು ಅಳವಡಿಸಲಾಗುತ್ತದೆ. ಆಟಗಾರನ ಎದೆಯ ಭಾಗದಲ್ಲಿ ಒಳ ಉಡುಪಿನ ಮಾದರಿಯಲ್ಲಿ ಈ ಸಾಧವನ್ನು ಹಾಕಲಾಗುತ್ತದೆ. ಇದರಲ್ಲಿ 2 ಚಿಪ್‌ಗಳು ಇರಲಿವೆ. ಒಂದನ್ನು ಕ್ಯಾಟಿಪಲ್‌ ಕ್ಲೌಡ್‌ ಎಂದು ಹೇಳಲಾಗುತ್ತೆ. ಇದು ಆಟಗಾರನ ಚಲನ-ವಲನ, ಚುರುಕುತನ ಹೀಗೆ ಹಲವು ಮಾಹಿತಿಗಳನ್ನು ಸ್ಯಾಟಿಲೈಟ್‌ ಮುಖಾಂತರ ಪ್ರಮುಖ ಸಾಧನಕ್ಕೆ ಸಂದೇಶ ರವಾನಿಸುತ್ತದೆ. ಇನ್ನೊಂದು ಚಿಪ್‌ ಆಟಗಾರನ ಹೃದಯ ಬಡಿತದಲ್ಲಿ ಆಗುವ ಏರು-ಪೇರಿನ ಕುರಿತು ನಿರಂತರವಾಗಿ ಮಾಹಿತಿ ಸಂಗ್ರಹಿಸಲಿದೆ.

ಇದರ ಸಹಾಯದಿಂದಲೇ ಪಂದ್ಯ ನಡುವೆ ಆಗಾಗ ಆಟಗಾರರ ಹೃದಯ ಬಡಿತ ಎಷ್ಟಿದೆ ಎನ್ನುವುದರ ಮಾಹಿತಿಯನ್ನು ಟೀವಿ ಪರದೆ ಮೇಲೆ ತೋರಿಸಲು ಸಾಧ್ಯ. ಅದೇ ರೀತಿ ಆಟಗಾರನ ಕುತ್ತಿಗೆ ಭಾಗದಲ್ಲಿ ಆ್ಯಕ್ಸೆಲರ್‌ ಮೀಟರ್‌ ಎನ್ನುವ ಸಾಧನ ಹಾಕಲಾಗುತ್ತದೆ. ಆಟಗಾರನ ಎದೆ ಭಾಗಕ್ಕೆ ಅಳವಡಿಸಿದ 2 ಚಿಪ್‌ಗಳು ಆ್ಯಕ್ಸೆಲರ್‌ ಮೀಟರ್‌ ಮುಖಾಂತರ ಸ್ಯಾಟಲೈಟ್‌ನಿಂದ ಜಿಪಿಎಸ್‌ಗೆ ಮಾಹಿತಿ ನೀಡುತ್ತೆ. ಈ ಎಲ್ಲಾ ಮಾಹಿತಿಗಳು ರೇಡಿಯೋ ಫ್ರಿಕ್ವೆನ್ಸರ್‌ ಮುಖೇನ ಡೇಟಾ ರೂಪದಲ್ಲಿ ಸಂಗ್ರಹವಾಗುತ್ತದೆ. ಇದನ್ನು ಬೇರ್ಪಡಿಸಿ ಪ್ರತಿ ತಂಡಗಳಿಗೆ ವಾರದ ಕೊನೆಯಲ್ಲಿ ವರದಿ ನೀಡಲಾಗುತ್ತದೆ.

ಲಾಭವೇನು?: 3 ತಿಂಗಳುಗಳ ಕಾಲ ನಡೆಯುವ ಪ್ರೊ ಕಬಡ್ಡಿಯಲ್ಲಿ ಆಟಗಾರರಿಗೆ ಫಿಟ್ನೆಸ್‌ ಬಹಳ ಮುಖ್ಯ. ಪಂದ್ಯಗಳು ಮಾತ್ರವಲ್ಲ, ಅಭ್ಯಾಸದಲ್ಲಿ ಆಟಗಾರರು ಹೆಚ್ಚು ಹೊತ್ತು ಕಳೆಯುತ್ತಾರೆ. ಸುದೀರ್ಘ ಪಂದ್ಯಾವಳಿಯಲ್ಲಿ ಆಟಗಾರರು ಗಾಯಗೊಳ್ಳುವುದು, ದಣಿಯುವುದು ಸಾಮಾನ್ಯ. ಒಬ್ಬೊಬ್ಬ ಆಟಗಾರನಿಗೆ ಒಂದೊಂದು ರೀತಿಯ ದೈಹಿಕ ತರಬೇತಿಯ ಅಗತ್ಯವಿರುತ್ತದೆ. 

ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷ ಕೌಶಲ್ಯವಿರುತ್ತದೆ. ಒಬ್ಬ ಆಟಗಾರನ ದೈಹಿಕ ಸಾಮರ್ಥ್ಯ ಹೆಚ್ಚಿದ್ದರೆ, ಮತ್ತೊಬ್ಬನ ವೇಗ ಹೆಚ್ಚಿರುತ್ತದೆ. ಇನ್ನೊಬ್ಬ ಆಟಗಾರ ಎಲ್ಲರಿಗಿಂತ ಚುರುಕಾಗಿ ಅಂಕಣದಲ್ಲಿ ಚಲಿಸಬಲ್ಲ. ಹೀಗೆ ಪ್ರತಿ ಆಟಗಾರನ ಕೌಶಲ್ಯದ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಲು ಈ ಸಾಧನ ನೆರವಾಗಲಿದೆ. ಜತೆಗೆ ಪಂದ್ಯದ ವೇಳೆ ಆಟಗಾರರಲ್ಲಿ ಇನ್ನೂ ಎಷ್ಟುಸಾಮರ್ಥ್ಯ ಬಾಕಿ ಇದೆ ಎನ್ನುವ ಮಾಹಿತಿಯನ್ನೂ ಫಿಸಿಯೋ, ಕೋಚ್‌ಗಳು ಕೂತಲ್ಲೇ ಕಲೆಹಾಕಬಹುದು. ಇದರಿಂದ ಪರಿಸ್ಥಿತಿಗೆ ತಕ್ಕ ನಿರ್ಧಾರ, ಆಟಗಾರರಿಗೆ ಅಗತ್ಯ ಸಲಹೆ, ಸೂಚನೆ, ತರಬೇತಿ ನೀಡಲು ಸಾಧ್ಯವಾಗಲಿದೆ.

ಸಾಧನ ಅಳವಡಿಸುವ ತಂಡದಲ್ಲಿ ಕನ್ನಡಿಗ
ಈ ಜಿಪಿಎಸ್‌ ಸಾಧನವನ್ನು ಪ್ರೊ ಕಬಡ್ಡಿ ಆಟಗಾರರಿಗೆ ಅಳವಡಿಸುವ ತಂಡದಲ್ಲಿ ಕನ್ನಡಿಗ ತೇಜಸ್‌ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ದೊಡ್ಡಬಳ್ಳಾಪುರದವರು. ವಿಡಿಯೋ ವಿಶ್ಲೇಷಕರಾಗಿದ್ದ ಇವರು, ಈಗ ಈ ಸಾಧನದ ನಿರ್ವಹಣೆ ನಡೆಸುತ್ತಿದ್ದು, ಕಬಡ್ಡಿಗೂ ತಂತ್ರಜ್ಞಾನದ ನೆರವು ನೀಡುತ್ತಿದ್ದಾರೆ. ಫುಟ್ಬಾಲ್‌ ಆಟಗಾರರಾಗಿರುವ ಇವರು, ರಾಜ್ಯ ತಂಡದಲ್ಲೂ ಆಡಿದ್ದರು.

ಜಿಪಿಎಸ್‌ ಸಾಧನವನ್ನು ಆಟಗಾರನಿಗೆ ಅಳವಡಿಸುವುದರಿಂದ ಆತನ ಪ್ರದರ್ಶನವನ್ನು ಗಮನಿಸಲು ಸಹಕಾರಿಯಾಗುತ್ತದೆ. ಹಾಗೆ ಫಿಟ್ನೆಸ್‌ ಕಾಯ್ದುಕೊಳ್ಳಲು ನೆರವಾಗಲಿದೆ. ಕ್ರೀಡೆಯ ಭವಿಷ್ಯದ ದೃಷ್ಟಿಯಿಂದ ಇಂತಹ ತಂತ್ರಜ್ಞಾನದ ಬಳಕೆ ಅವಶ್ಯಕ  ಎಂದು ಬೆಂಗಳೂರು ಬುಲ್ಸ್‌ ಕೋಚ್‌ ಬಿ.ಸಿ. ರಮೇಶ್‌ ಹೇಳಿದ್ದಾರೆ.

ಆರಂಭದಲ್ಲಿ ಇದನ್ನು ಹಾಕಿಕೊಂಡು ಆಡುವುದಕ್ಕೆ ಇರಿಸು-ಮುರಿಸು ಆಗುತ್ತಿತ್ತು. ಇದರ ಉಪಯೋಗವೇನು ಎಂದು ತಿಳಿದ ಮೇಲೆ ನಿರಂತರವಾಗಿ ಸಾಧನವನ್ನು ಅಳವಡಿಸುವಂತೆ ಕೇಳಿಕೊಂಡಿದ್ದೇನೆ. ಇದರ ಸಹಾಯದಿಂದ ನನ್ನ ಪ್ರದರ್ಶನ ಗುಣಮಟ್ಟಹೆಚ್ಚಿದೆ ಎಂದು ತೆಲುಗು ಟೈಟಾನ್ಸ್‌ ಆಟಗಾರ ರಾಹುಲ್‌ ಚೌಧರಿ ಹೇಳಿದ್ದಾರೆ.

ಧನಂಜಯ ಎಸ್‌.ಹಕಾರಿ
 

click me!