ಫಿಫಾ ವಿಶ್ವಕಪ್ ಫೈನಲ್ ಹೋರಾಟ: ಫ್ರಾನ್ಸ್-ಕ್ರೊವೆಷಿಯಾ ಮುಖಾಮುಖಿ

By Suvarna News  |  First Published Jul 15, 2018, 11:01 AM IST

ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬಕ್ಕೆ ತೆರೆಬೀಳಲಿದೆ. ಆದರೆ ಸದ್ಯ ಕುತೂಹಲ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ? ಫ್ರಾನ್ಸ್ ಹಾಗೂ ಕ್ರೊವೆಷಿಯಾ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟದ ವಿಶೇಷತೆ ಏನು? ಯಾರಿಗಿದೆ ಪ್ರಶಸ್ತಿ ಗೆಲ್ಲೋ ಚಾನ್ಸ್? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.


ರಷ್ಯಾ(ಜು.15):  ಒಂದು ತಿಂಗಳು, 63 ಪಂದ್ಯಗಳ ಬಳಿಕ 2018ರ ಫಿಫಾ ಫುಟ್ಬಾಲ್ ವಿಶ್ವಕಪ್  ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಭಾನುವಾರ ಕಾಲ್ಚೆಂಡಿನ ಮಹಾಸಮರದ  ಫೈನಲ್ ಪಂದ್ಯ ನಡೆಯಲಿದ್ದು, ಯುವ ಫ್ರಾನ್ಸ್ ಪಡೆಗೆ ಅನುಭವಿಗಳಿಂದ ತುಂಬಿರುವ ಕ್ರೊವೇಷಿಯಾ ಸವಾಲೊಡ್ಡಲಿದೆ. 

1998ರ ಚಾಂಪಿಯನ್ ಫ್ರಾನ್ಸ್ 2ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ವಿಶ್ವಕಪ್ ಫೈನಲ್‌ಗೇರಿರುವ ಅತಿ ಸಣ್ಣ ರಾಷ್ಟ್ರ ಎನ್ನುವ ಹೆಗ್ಗಳಿಕೆ ಹೊಂದಿರುವ ಕ್ರೊವೇಷಿಯಾ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಕನಸು ಕಾಣುತ್ತಿದೆ. 4 ವಾರಗಳ ಹಿಂದೆ ಟೂರ್ನಿ ಆರಂಭಗೊಂಡಾಗ, ಈ ಎರಡು ತಂಡಗಳು ಫೈನಲ್‌ಗೇರಲಿವೆ ಎಂದು ಕೆಲವೇ ಕೆಲ ಮಂದಿ ಮಾತ್ರ ನಿರೀಕ್ಷಿಸಿರಬಹುದು.

Latest Videos

undefined

ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ನೇಯ್ಮರ್‌ರಂತಹ ಘಟಾನುಘಟಿಗಳು ನಿರೀಕ್ಷೆಗೂ ಮೊದಲೇ ಮನೆ ಸೇರಿಕೊಂಡರು. ಸಾಂಪ್ರದಾಯಿಕ ದೈತ್ಯ ತಂಡಗಳಾದ ಜರ್ಮನಿ, ಬ್ರೆಜಿಲ್ ಹಾಗೂ ಅರ್ಜೆಂಟೀನಾ ಕನಿಷ್ಠ ಸೆಮೀಸ್‌ಗೂ ಬರಲಿಲ್ಲ. ಬದಲಿಗೆ ಕಿಲಿಯನ್ ಎಂಬಾಪೆಯಂತಹ ಮಿಂಚಿನ ವೇಗದ ಆಟಗಾರರನ್ನು ಹೊಂದಿರುವ, ಟೂರ್ನಿಯ 2ನೇ ಅತಿ ಕಿರಿಯ ತಂಡ ಎನ್ನುವ ಖ್ಯಾತಿ ಪಡೆದಿರುವ ಫ್ರಾನ್ಸ್ ಹಾಗೂ ಲೂಕಾ ಮೋಡ್ರಿಚ್‌ರಂತಹ ಮಿಡ್‌ಫೀಲ್ಡ್ ಮಾಂತ್ರಿಕನನ್ನು ಹೊಂದಿರುವ ಕ್ರೊವೇಷಿಯಾ ಪ್ರಶಸ್ತಿ ಹೊಸ್ತಿಲಿಗೆ ಬಂದು ನಿಂತಿವೆ. 

ವಿಶ್ವಕಪ್ ಫೈನಲ್ ಎರಡು ಅತ್ಯಂತ ಅರ್ಹ ತಂಡಗಳ ನಡುವೆ ನಡೆಯಲಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಲು ಕಾರಣವಾಗಿದೆ. 2006ರ ವಿಶ್ವಕಪ್ ಫೈನಲ್‌ನಲ್ಲಿ ಇಟಲಿಗೆ ತಲೆಬಾಗಿದ್ದ ಫ್ರಾನ್ಸ್, 2016ರ ಯುರೋ ಕಪ್ ಫೈನಲ್‌ನಲ್ಲಿ ಪೋರ್ಚುಗಲ್‌ಗೆ ಶರಣಾಗಿತ್ತು. ಈ ಎರಡು ಕಹಿ ನೆನಪುಗಳನ್ನು ಮರೆಮಾಚಲು ತಂಡ ಕಾಯುತ್ತಿದೆ.

‘ಆ ಎರಡು ಸೋಲು ನಮಗೆ ಪಾಠವಿದ್ದಂತೆ. ಫೈನಲ್ ನಲ್ಲಿ ಆಡಲು ಏನೇಲ್ಲಾ ಗುಣಗಳು ಬೇಕು ಎನ್ನುವುದನ್ನು ಆ ಎರಡು ಸೋಲುಗಳನ್ನು ನೋಡಿ ಕಲಿತಿದ್ದೇವೆ’ ಎಂದು ಫ್ರಾನ್ಸ್‌ನ ಮಿಡ್‌ಫೀಲ್ಡರ್ ಬ್ಲೈಸೆ ಮಟುಡಿ ಹೇಳಿದ್ದಾರೆ. ಆಸ್ಟ್ರೇಲಿಯಾ, ಪೆರು ವಿರುದ್ಧ ಗೆಲ್ಲುವ ಮೂಲಕ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದ ಫ್ರಾನ್ಸ್, ಡೆನ್ಮಾರ್ಕ್ ವಿರುದ್ಧ ಗೋಲು ರಹಿತ ಡ್ರಾ ಮಾಡಿಕೊಂಡಿತ್ತು. ಟೂರ್ನಿಯಲ್ಲಿ ದಾಖಲಾದ ಏಕೈಕ ಗೋಲು ರಹಿತ ಡ್ರಾ ಅದು. ಬಳಿಕ ಪ್ರಿ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ, ಕ್ವಾರ್ಟರ್‌ನಲ್ಲಿ ಉರುಗ್ವೆ ಹಾಗೂ ಸೆಮೀಸ್‌ನಲ್ಲಿ ಬೆಲ್ಜಿಯಂ ಹೀಗೆ ಮೂರು ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಫ್ರಾನ್ಸ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಮತ್ತೊಂದೆಡೆ ಕ್ರೊವೇಷಿಯಾ, ಗುಂಪು ಹಂತದಲ್ಲಿ ಅರ್ಜೆಂಟೀನಾವನ್ನು 3-0 ಅಂತರದಲ್ಲಿ ಸೋಲಿಸಿದ್ದಲ್ಲದೆ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಬಳಿಕ ಪ್ರಿ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್ ಹಾಗೂ ಕ್ವಾರ್ಟರ್ ನಲ್ಲಿ ರಷ್ಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಜಯಿಸಿದ್ದ ಕ್ರೊವೇಷಿಯಾ, ಸೆಮೀಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಗೆದ್ದು ಬೀಗಿತ್ತು. 

ಲಾಟೋ ದಲಿಚ್ ಮಾರ್ಗದರ್ಶನದ ತಂಡ ಈ ವಿಶ್ವಕಪ್‌ನಲ್ಲಿ ಮೈದಾನದಲ್ಲಿ ಅತಿಹೆಚ್ಚು ಸಮಯ ಕಳೆದಿರುವ ತಂಡ. ನಾಕೌಟ್ ಉದ್ದಕ್ಕೂ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿರುವ ಕ್ರೊವೇಷಿಯಾಗೆ ಫೈನಲ್‌ನ ಒತ್ತಡವನ್ನೂ ಮೆಟ್ಟಿ ನಿಲ್ಲುವ ವಿಶ್ವಾಸವಿದೆ. ‘ನಾವು ಕಠಿಣ ಹಾದಿ ಹಿಡಿದೆವು. ಬಹುಶಃ ಈ ವಿಶ್ವಕಪ್‌ನಲ್ಲಿ ೮8ಪಂದ್ಯಗಳಿಗಾಗುವಷ್ಟು ಸಮಯವನ್ನು ಮೈದಾನದಲ್ಲಿ ಕಳೆದಿರುವುದು ನಾವೊಬ್ಬರೆ ಅನಿಸುತ್ತದೆ’ ಎಂದು ದಲಿಚ್ ಫೈನಲ್‌ಗೂ ಮುನ್ನ ಹೇಳಿದ್ದಾರೆ. 

ಫ್ರಾನ್ಸ್ ವೇಗ  ಕ್ರೊವೇಷಿಯಾ ಡಿಫೆನ್ಸ್:
ಕಿಲಿಯನ್ ಎಂಬಾಪೆ, ಆ್ಯಂಟೋನಿ ಗ್ರೀಜ್‌ಮನ್, ಆಲಿವರ್ ಗಿರೋಡ್, ಪೌಲ್ ಪೋಗ್ಬಾ ಹೀಗೆ ಅತ್ಯಂತ ವೇಗದ ಆಟಗಾರರ ಬಲ ಫ್ರಾನ್ಸ್‌ಗಿದೆ. ಮತ್ತೊಂದೆಡೆ ಸದ್ಯ ವಿಶ್ವದ ಶ್ರೇಷ್ಠ ಮಿಡ್‌ಫೀಲ್ಡರ್‌ಗಳೆನಿಸಿರುವ ಲೂಕಾ ಮೋಡ್ರಿಚ್, ಇವಾನ್ ರಕಿಟಿಚ್ ಸೇರಿದಂತೆ ಅತ್ಯಂತ ಕೌಶಲಯುಕ್ತ ರಕ್ಷಣಾ ಪಡೆಯನ್ನು ಕ್ರೊವೇಷಿಯಾ ಹೊಂದಿದೆ.  

ಮಾರಿಯೋ ಮಂಡ್ಜೊಕಿಚ್, ಪೆರಿಸಿಚ್‌ರಂತಹ ಪ್ರಬಲ ಆಟಗಾರರೂ ಸಹ ಇದ್ದಾರೆ. ಫ್ರಾನ್ಸ್‌ನ ಗೋಲ್ ಕೀಪರ್ ಲಾರಿಸ್ ಹಾಗೂ ಕ್ರೊವೇಷಿಯಾದ ಗೋಲ್‌ಕೀಪರ್ ಸುಬಾಸಿಚ್ ನಡುವೆ ಸಹ ಭಾರೀ ಪೈಪೋಟಿ ಏರ್ಪಡಲಿದೆ.

ಚಾಂಪಿಯನ್ ತಂಡಕ್ಕೆ 260 ಕೋಟಿ:
ವಿಶ್ವಕಪ್ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ 38 ಮಿಲಿಯನ್ ಡಾಲರ್ (ಅಂದಾಜು ₹260 ಕೋಟಿ) ಬಹುಮಾನ ಮೊತ್ತ ಸಿಗಲಿದೆ. ರನ್ನರ್-ಅಪ್ ಆಗುವ ತಂಡ 28 ಮಿಲಿಯನ್ ಡಾಲರ್ (ಅಂದಾಜು ₹191) ಕೋಟಿ ಬಹುಮಾನ ಮೊತ್ತ ಪಡೆಯಲಿದೆ.

click me!