ಫಿಫಾ ವಿಶ್ವಕಪ್ 2018: ಪನಾಮ ವಿರುದ್ಧ 6 ಗೋಲು ಸಿಡಿಸಿ ದಾಖಲೆ ಬರೆದ ಇಂಗ್ಲೆಂಡ್

First Published Jun 24, 2018, 8:31 PM IST
Highlights

ಪನಾಮ ವಿರುದ್ಧದ ಫಿಫಾ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ದಾಖಲೆ ಬರೆದಿದೆ. ಬೆಲ್ಜಿಯಂ ಸಿಡಿಸಿದ 5 ಗೋಲಿಗೆ ಅಭಿಮಾನಿಗಳು ಸಂತುಷ್ಠರಾಗಿದ್ದರೆ, ಇದೀಗ ಇಂಗ್ಲೆಂಡ್ 6 ಗೋಲು ಸಿಡಿಸೋ ಮೂಲಕ ಫುಟ್ಬಾಲ್ ಪ್ರೀಯರನ್ನ ರಂಜಿಸಿದರು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ರಷ್ಯಾ(ಜೂ.24): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ದಾಖಲೆ ಬರೆದಿದೆ. ಪನಾಮ ವಿರುದ್ಧ 6 ಗೋಲು ಸಿಡಿಸಿ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್, ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಗೋಲು ಸಿಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲಾರ್ಧದಲ್ಲೇ ಇಂಗ್ಲೆಂಡ್ ಆಕ್ರಮಣಕಾರಿ ಆಟಕ್ಕೆ ಪನಾಮ ಸುಸ್ತಾಯಿತು. 8ನೇ ನಿಮಿಷದಲ್ಲಿ ಜಾನ್ ಸ್ಟೋನ್ಸ್ ಗೋಲು ಬಾರಿಸಿ ಖಾತೆ ಆರಂಭಿಸಿದರು. ಬಳಿಕ ಹ್ಯಾರಿ ಕೇನ್ ಆರ್ಭಟ ಶುರುವಾಯಿತು. 22ನೇ ನಿಮಿಷದಲ್ಲಿ ಕೇನ್ ಮೊದಲ ಗೋಲು ಸಿಡಿಸಿದರು.

2-0 ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್ ತಂಡಕ್ಕೆ 40ನೇ ನಿಮಿಷದ್ಲಿ ಜಾನ್ ಸ್ಟೋನ್ಸ್ ಬಾರಿಸಿದ ಗೋಲಿನಿಂದ 3-0 ಅಂತರ ಕಾಯ್ದುಕೊಂಡಿತು. 36ನೇ ನಿಮಿಷದಲ್ಲಿ ಜೆಸ್ಸಿ ಲಿಂಗಾರ್ಡ್ ಗೋಲು ಬಾರಿಸಿದರು. ಮೊದಲಾರ್ಧದ ಅಂತ್ಯದಲ್ಲಿ ಹ್ಯಾರಿ ಕೇನ್ ಮತ್ತೊಂದು ಗೋಲು ಬಾರಿಸಿ ಇಂಗ್ಲೆಂಡ್ ತಂಡಕ್ಕೆ 5-0 ಮುನ್ನಡೆ ತಂದುಕೊಟ್ಟರು. 

ಇಂಗ್ಲೆಂಡ್ 5 ಗೋಲು ಸಿಡಿಸಿ ಮುನ್ನಡೆ ಪಡೆದರೂ, ಪನಾಮ್ ಗೋಲಿಲ್ಲದೇ ಪರದಾಡಿತು. 62ನೇ ನಿಮಿಷದಲ್ಲಿ ಮತ್ತೆ ಮೋಡಿ ಮಾಡಿದ ಹ್ಯಾರಿ ಕೇನ್ 3ನೇ ಗೋಲು ಬಾರಿಸಿದರು. ಈ ಮೂಲಕ  ಹ್ಯಾಟ್ರಿಕ್ ಸಾಧನೆ ಮಾಡಿದರು. ಇಂಗ್ಲೆಂಡ್ ಗೋಲಿನ ಮೇಲೆ ಗೋಲು ಸಿಡಿಸುತ್ತಿದ್ದರೆ, ಪನಾಮ 78ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿತು. ಫಿಲಿಪ್ ಬಲೋಯ್ ಬಾರಿಸಿದ ಗೋಲಿನಿಂದ ಪನಾಮ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳೋ ಸೂಚನೆ ನೀಡಿತು.

ಪನಾಮ ಕೇವಲ ಒಂದು ಗೋಲಿಗೆ ತೃಪ್ತಿಪಟ್ಟುಕೊಂಡಿತು. ಸಂಪೂರ್ಣ ಮೇಲುಗೈ ಸಾಧಿಸಿದ ಇಂಗ್ಲೆಂಡ್ 6-1 ಅಂತರದ ಗೆಲುವು ಸಾಧಿಸಿ ದಾಖಲೆ ಬರೆಯಿತು. ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ 6 ಗೋಲು ಸಿಡಿಸಿದ ಸಾಧನೆ ಮಾಡಿತು.

click me!