ಅಮರಾವತಿಯಲ್ಲಿ F1H2O ವಿಶ್ವ ಗ್ರ್ಯಾಂಡ್ ಪ್ರಿಕ್ಸ್ ರೇಸ್-ಏನಿದರ ವಿಶೇಷತೆ?

By Web DeskFirst Published Nov 2, 2018, 4:51 PM IST
Highlights

F1H2O ವಿಶ್ವ ಗ್ರ್ಯಾಂಡ್ ಪ್ರಿಕ್ಸ್ ರೇಸ್ ಮತ್ತೆ ಭಾರತಕ್ಕೆ ಬರುತ್ತಿದೆ. 14 ವರ್ಷಗಳ ಬಳಿಕ ಭಾರತದಲ್ಲಿ ರೇಸ್ ಆಯೋಜನೆಯಾಗುತ್ತಿದೆ. ಆಂಧ್ರಪ್ರದೇಶದ ಅಮರಾವತಿಯಲ್ಲಿ ಆಯೋಜನೆಯಾಗುತ್ತಿರುವ F1H2O ವಿಶ್ವ ಗ್ರ್ಯಾಂಡ್ ಪ್ರಿಕ್ಸ್ ರೇಸ್ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.
 

ಬೆಂಗಳೂರು(ನ.02): ಬರೋಬ್ಬರಿ 14 ವರ್ಷಗಳ ಬಳಿಕ ಭಾರತದಲ್ಲಿ F1H2O ಗ್ರ್ಯಾಂಡ್ ಪ್ರಿಕ್ಸ್ ರೇಸ್ ಟೂರ್ನಿ ಆಯೋಜನೆಯಾಗುತ್ತಿದೆ. ಆಂಧ್ರಪ್ರದೇಶದ ಅಮರಾವತಿಯಲ್ಲಿ ಕೃಷ್ಣಾ ನದಿಯಲ್ಲಿ ವಿಶ್ವ ವಿಖ್ಯಾತ ರೇಸ್ ಆಯೋಜನೆಗೊಳ್ಳುತ್ತಿದೆ. ನವೆಂಬರ್ 16 ರಿಂದ 18ರ ವರೆಗೆ ನಡೆಯಲಿರುವ ಈ   F1H2O ವಿಶ್ವ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ನಲ್ಲಿ ವಿವಿಧ ದೇಶಗಳ 350ಕ್ಕೂ ಹೆಚ್ಚು ಡ್ರೈವರ್‌ಗಳು ಭಾಗವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಚಾಂಪಿಯನ್‌ಶಿಪ್ 2018ರ ಮೇ ತಿಂಗಳಿನಲ್ಲಿ ಪೋರ್ಚುಗಲ್‌ನಲ್ಲಿ ಆರಂಭವಾಗಿದ್ದು , ಡಿಸೆಂಬರ್ 15ರಂದು ಶಾರ್ಜಾದಲ್ಲಿ ಅಂತ್ಯಗೊಳ್ಳಲಿದೆ. 

ಅಮರಾವತಿಯಲ್ಲಿ ನಡೆಯುವ ರೇಸ್‌ನಲ್ಲಿ ಪೋರ್ಚುಗಲ್, ಇಟಲಿ, ಯುಎಇ, ಫ್ರಾನ್ಸ್ ಜೊತೆಗೆ ಅಮರಾವತಿ ತಂಡಗಳು ಎಫ್1ಹೆಚ್2ಒನಲ್ಲಿ ಪಾಲ್ಗೊಳ್ಳುತ್ತಿದೆ. ವಿಶೇಷ ಅಂದರೆ ಅಬುದಾಬಿ, ಚೀನಾ, ಫ್ರಾನ್ಸ್, ಸೇರಿದಂತೆ ಹಲವು ದೇಶಗಳ ಜೊತೆಗೆ ಭಾರತ ಕೂಡ ಪ್ರತಿನಿಧಿಸುತ್ತಿದೆ.

ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಹಾಗೂ F1H2O ಜಂಟಿಯಾಗಿ ಈ ಟೂರ್ನಿ ಆಯೋ ಜಿಸುತ್ತಿದೆ. ಇದರ  ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಲಾಯಿತು. ವಿಶ್ವದ ಜನಪ್ರಿಯ F1H2O ರೇಸ್ ಕಣ್ತುಂಬಿಕೊಳ್ಳಲು, ಬೆಂಗಳೂರಿನ ಕ್ರೀಡಾಸಕ್ತರನ್ನ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಪ್ರವಾಸೋದ್ಯಮ ವಿಭಾಗದ ಸಿಎಂಒ ಶ್ರೀ ಶ್ರೀನಿವಾಸ ರಾವ್ ಆಹ್ವಾನಿಸಿದರು.

ಕ್ರೀಡಾಸಕ್ತರಿಗೆ ಉಚಿತ ಪ್ರವೇಶ ಇಡಲಾಗಿದೆ. ಇಷ್ಟೇ ಅಲ್ಲ, ಕ್ರೀಡಾ ಚಟುವಟಿಕೆಗೆ ಸಾಕ್ಷಿಯಾಗಲು ಆಗಮಿಸುವ ಎಲ್ಲ ಕ್ರೀಡಾಭಿಮಾನಿಗಳು, ಅತಿಥಿಗಳು, ಪ್ರವಾಸಿಗರು ಮತ್ತು ಕ್ರೀಡಾಪಟುಗಳಿಗೆ ಅತ್ಯದ್ಭುತವಾದ ಆತಿಥ್ಯವನ್ನು ನೀಡುವ ಮೂಲಕ ಈ ಕ್ರೀಡಾ ಚಟುವಟಿಕೆಯನ್ನು ಸುಂದರ ಹಾಗೂ ಸ್ಮರಣೀಯ ಕ್ಷಣವಾಗಿಸಲಿದ್ದೇವೆ ಎಂದು ಶ್ರೀನಿವಾಸ್ ರಾವ್ ಹೇಳಿದರು.

ಚಾಂಪಿಯನ್‍ಷಿಪ್‍ಗಾಗಿ ಕೃಷ್ಣಾ ನದಿಯ 23 ಕಿಲೋಮೀಟರ್ ವ್ಯಾಪ್ತಿನ್ನು ಸಿದ್ಧಗೊಳಿಸಲಾಗಿದ್ದು, ಇಲ್ಲಿ ಕ್ರೀಡೆಯ ಶ್ರೇಷ್ಠತೆಯ ದರ್ಶನವಾಗಲಿದೆ. ಹಾಗೇ ಕ್ರೀಡಾ ಚಟುವಟಿಕೆ ನಡೆಯುವ ದಿನಗಳಂದು ಈ 23 ಕಿಲೋಮೀಟರ್ ವ್ಯಾಪ್ತಿಯು ಅಪ್ಪಟ ಜಾತ್ರೆಯ ರೀತಿ ಕಂಗೊಳಿಸಲಿದ್ದು, ಕ್ರೀಡೆ ವೀಕ್ಷಿಸಲು ಆಗಮಿಸುವ ಪ್ರೇಕ್ಷಕರನ್ನು ರಂಜಿಸಲು ಹಲವು ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಇದರೊಂದಿಗೆ ಕಲಾ ಪ್ರದರ್ಶನ, ಸಂಸ್ಕಂತಿ ಮತ್ತು ಆಂಧ್ರಪ್ರದೇಶದ ರುಚಿಕರವಾದ ತಿನಿಸುಗಳನ್ನು ಸವಿಯುವ ಸದವಕಾಶವೂ ಪ್ರೇಕ್ಷಕರು, ಕ್ರೀಡಾ ಪ್ರೇಮಿಗಳಿಗೆ ದೊರೆಯಲಿದೆ ಎಂದು F1H2O ಲಾಜಿಸ್ಟಿಕ್ಸ್ ವಿಭಾಗದ ನಿರ್ದೇಶಕರಾಗಿರುವ  ಮಾರ್ಕೊ ಪೀಟ್ರಿನಿ ಹೇಳಿದರು.

ಪ್ರತಿಷ್ಠಿತ  F1H2O ಚಾಂಪಿಯನ್‌ಶಿಫ್ ವೀಕ್ಷಣೆಗೆ 3 ಲಕ್ಷಕ್ಕೂ ಅಧಿ ಕ್ರೀಡಾಸಕ್ತರ ನಿರೀಕ್ಷೆಯಲ್ಲಿದ್ದೇವೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. 2004ರಲ್ಲಿ ಮುಂಬೈನಲ್ಲಿ  F1H2O ಆಯೋಜನೆಯಾಗಿತ್ತು. ಬಳಿಕ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ಆಯೋಜನೆಯಾಗುತ್ತಿದೆ. ಹೀಗಾಗಿ ಬೆಂಗಳೂರು ಹಾಗೂ ಕರ್ನಾಟಕದಿಂದ ಹೆಚ್ಚಿನ ಕ್ರೀಡಾಸಕ್ತರ ನಿರೀಕ್ಷೆಯಲ್ಲಿದ್ದೇವೆ ಎಂದು F1H2O ಚಾಂಪಿಯನ್‌ಶಿಪ್ ಆಯೋಜನೆಗೆ ಕೈಜೋಡಿಸಿರುವ ಮಾಲಕ್ಷ್ಮಿ ಗ್ರೂಪ್‍ ಇಂಡಿಯಾ ಎಕ್ಸ್‌ಟ್ರೀಮ್ ಸಿಇಒ ಸಂದೀಪ್ ಹೇಳಿದರು.

ನವೆಂಬರ್ 16ರಂದು ಪವರ್ ಬೋಟ್‍ಗಳು ಮುಕ್ತ ಅಭ್ಯಾಸ ನಡೆಸಲಿವೆ (ಫ್ರೀ ಪ್ರಾಕ್ಟೀಸ್ ಸೆಷನ್). ನವೆಂಬರ್ 17ರಂದು ಶನಿವಾರ ತಂಡಗಳು ಪೂಲ್ ಪೊಸಿಶನ್‌ಗಾಗಿ ಪೈಪೋಟಿ ನಡೆಸಲಿದ್ದು, ಭಾನುವಾರ (ನವೆಂಬರ್ 18) ಮತ್ತೊಂದು ಫ್ರೀ ಪ್ರಾಕ್ಟೀಸ್ ಸೆಷನ್ ಮತ್ತು ಅತ್ಯದ್ಭುತವಾದ ಪರೇಡ್ ಟೂರ್ ನಂತರ ಗ್ರಾಂಡ್ ಪ್ರಿಕ್ಸ್ ಇಂಡಿಯಾ ಆರಂಭವಾಗಲಿದೆ.

click me!