ಇಂಗ್ಲೆಂಡ್ ಸಂಕಷ್ಟ ಹೆಚ್ಚಿಸಿದ ಕೊಹ್ಲಿ, ಅಶ್ವಿನ್

Published : Nov 19, 2016, 02:29 PM ISTUpdated : Apr 11, 2018, 01:04 PM IST
ಇಂಗ್ಲೆಂಡ್ ಸಂಕಷ್ಟ ಹೆಚ್ಚಿಸಿದ ಕೊಹ್ಲಿ, ಅಶ್ವಿನ್

ಸಾರಾಂಶ

ಇದೇ ಮೊದಲ ಬಾರಿಗೆ ಆಂಗ್ಲರ ವಿರುದ್ಧ 5 ವಿಕೆಟ್‌ಗಳ ಸಾಧನೆ ಮಾಡಿದ ಅಶ್ವಿನ್ ಹಾಗೂ ದಿನದಾಟದ ಕೊನೆಯ ಅವಧಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ವಿರಾಟ್ ಕೊಹ್ಲಿ ಮೂರನೇ ದಿನದಾಟದಲ್ಲಿಯೂ ಭಾರತ ಪಾರಮ್ಯ ಮೆರೆಯಲು ಕಾರಣರಾದರು.

ವಿಶಾಖಪಟ್ಟಣ(ನ.19): ಆತಿಥೇಯ ತಂಡದ ಪ್ರಮುಖ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಸ್ಪಿನ್'ಗೆ ಗಿರಕಿ ಹೊಡೆದ ಪ್ರವಾಸಿ ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರೀ ಹಿನ್ನಡೆ ಅನುಭವಿಸಿದರೆ, ಇತ್ತ ವಿರಾಟ್ ಕೊಹ್ಲಿ ಪಡೆ ಆಂಗ್ಲರ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದು, ಇದರೊಂದಿಗೆ ಸರಣಿಯಲ್ಲಿ ಮೊದಲ ಜಯದ ಕನಸು ಹೊತ್ತಿದೆ.

ಇಲ್ಲಿನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ವಿರುದ್ಧ 298 ರನ್‌ಗಳ ಭರ್ಜರಿ ಮುನ್ನಡೆ ಪಡೆದಿರುವ ಭಾರತ, ಗೆಲುವಿನ ಹಾದಿಯನ್ನು ನಿರ್ಮಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಆಂಗ್ಲರ ವಿರುದ್ಧ 5 ವಿಕೆಟ್‌ಗಳ ಸಾಧನೆ ಮಾಡಿದ ಅಶ್ವಿನ್ ಹಾಗೂ ದಿನದಾಟದ ಕೊನೆಯ ಅವಧಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ವಿರಾಟ್ ಕೊಹ್ಲಿ ಮೂರನೇ ದಿನದಾಟದಲ್ಲಿಯೂ ಭಾರತ ಪಾರಮ್ಯ ಮೆರೆಯಲು ಕಾರಣರಾದರು.

ದಿನದಾಟ ನಿಂತಾಗ ವಿರಾಟ್ ಕೊಹ್ಲಿ (56: 70 ಎಸೆತ, 6 ಬೌಂಡರಿ) ಮತ್ತು ಅಜಿಂಕ್ಯ ರಹಾನೆ (22: 54 ಎಸೆತ, 2 ಬೌಂಡರಿ) ನಾಲ್ಕನೇ ವಿಕೆಟ್‌ಗೆ 58 ರನ್‌ಗಳ ಜತೆಯಾಟವಾಡಿದ್ದು ಆಂಗ್ಲರ ಮುಂದೆ ಬಹುದೊಡ್ಡ ಸವಾಲನ್ನೇ ತಂದಿರಿಸಿದೆ. ನಾಲ್ಕನೇ ದಿನದಾಟದಂದು ಭಾರತ ಮತ್ತಷ್ಟು ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಇಂಗಿತದಲ್ಲಿದ್ದು, ಮೊದಲ ಅವಧಿಯಲ್ಲೇ ಇಂಗ್ಲೆಂಡ್ ವಿಕೆಟ್ ಪಡೆಯುವ ಸವಾಲಿಗೆ ಗುರಿಯಾಗಿದೆ. ಏತನ್ಮಧ್ಯೆ ವೇಗಿ ಸ್ಟುವರ್ಟ್ ಬ್ರಾಡ್ ಗಾಯಗೊಂಡಿರುವುದು ಕೂಡ ಕುಕ್ ಪಡೆಯನ್ನು ಹೈರಾಣಾಗಿಸಿದೆ.

ಫಾಲೋ ಆನ್ ಹೇರದ ಭಾರತ

ಇಂಗ್ಲೆಂಡ್‌'ನ ಮೊದಲ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದ ಬಳಿಕ 200 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದರೂ, ಫಾಲೋ ಆನ್ ಹೇರದ ಭಾರತ, ಎರಡನೇ ಇನ್ನಿಂಗ್ಸ್‌ಗೆ ಮುಂದಾಯಿತು. ಆದರೆ, ಅಂದುಕೊಂಡಂತೆ ಭಾರತ ಉತ್ತಮ ಆರಂಭ ಪಡೆಯದೆ ತತ್ತರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ವೈಫಲ್ಯತೆ ಅನುಭವಿಸಿದ್ದ ಆರಂಭಿಕ ಮುರಳಿ ವಿಜಯ್ (3) ಮತ್ತು ಕೆ.ಎಲ್. ರಾಹುಲ್ (10) ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಲು ವಿಫಲವಾದರು. ವೇಗಿ ಸ್ಟುವರ್ಟ್ ಬ್ರಾಡ್ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ ಮುರಳಿ ವಿಜಯ್ ವಿಕೆಟ್ ಪಡೆದರೆ, 11ನೇ ಓವರ್‌ನ ಮೊದಲ ಎಸೆತದಲ್ಲಿಯೇ ರಾಹುಲ್‌'ಗೆ ಪೆವಿಲಿಯನ್ ದಾರಿ ತೋರಿದರು. ಹೀಗಾಗಿ ಕೇವಲ 17 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಭಾರತ, ಆನಂತರದಲ್ಲಿ ಚೇತೇಶ್ವರ ಪೂಜಾರ (1) ಅವರನ್ನೂ ಕಳೆದುಕೊಂಡು ದಿಗಿಲುಗೊಂಡಿತು.

ಕೊಹ್ಲಿ ಮನೋಜ್ಞ ಬ್ಯಾಟಿಂಗ್

ಮೇಲಿನ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಕ್ಷುಲ್ಲಕವಾಗಿ ವಿಕೆಟ್ ಒಪ್ಪಿಸಿದ ನಂತರ ತಂಡಕ್ಕೆ ಆಸರೆಯಾದದ್ದು ನಾಯಕ ಕೊಹ್ಲಿ. ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಮೋಘ ಆಟದಿಂದ ತಂಡದ ಮೊತ್ತವನ್ನು ಸವಾಲಿನದ್ದಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ, ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಾ ಸಾಗಿದ ಅವರನ್ನು ಔಟ್ ಮಾಡಲು ಇಂಗ್ಲೆಂಡ್ ಬೌಲರ್‌ಗಳು ದಿನದ ಕೊನೆಯವರೆಗೂ ಪ್ರಯತ್ನಿಸಿದರೂ, ಅದು ಕೈಗೂಡಲಿಲ್ಲ. ಇನ್ನು ಎಚ್ಚರಿಕೆಯಿಂದಲೇ ನಾಯಕನಿಗೆ ಸಾಥ್ ನೀಡಿದ ಅಜಿಂಕ್ಯ ರಹಾನೆ ಕೂಡ ಆಂಗ್ಲರ ಪ್ರತಿರೋಧಕ್ಕೆ ತಡೆಯಾದರು.

ಅಶ್ವಿನ್‌'ಗೆ 5ರ ಗೊಂಚಲು

ರಾಜ್‌'ಕೋಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣಲು ವಿಫಲವಾದ ಆರ್. ಅಶ್ವಿನ್ ಈ ಬಾರಿ ಮಾತ್ರ ಆಂಗ್ಲರಿಗೆ ಕಂಟಕರಾದರು. 5 ವಿಕೆಟ್‌ಗೆ 103 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಒಂದು ಹಂತದಲ್ಲಿ ಸರಿದಿಸೆಯಲ್ಲಿಯೇ ಹೆಜ್ಜೆ ಇಟ್ಟಿತ್ತು. ತಲಾ ಹನ್ನೆರಡು ರನ್‌'ಗಳೊಂದಿಗೆ ಹೋರಾಟ ಮುಂದುವರೆಸಿದ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೇರ್‌ಸ್ಟೋ ಭಾರತದ ಬೌಲಿಂಗ್ ದಾಳಿಗೆ ಸಮರ್ಥ ಉತ್ತರ ನೀಡುವ ಮುನ್ಸೂಚನೆ ನೀಡಿದರು. ಅದಕ್ಕೆ ತಕ್ಕಂತೆ ಮೊದಲ ಅವಧಿಯಲ್ಲಿ ಈರ್ವರೂ ಅತ್ಯದ್ಭುತ ಪ್ರದರ್ಶನವನ್ನೇ ನೀಡಿದರು. ಆದರೆ, ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳಿವೆ ಎನ್ನುವಾಗ ವೇಗಿ ಉಮೇಶ್ ಯಾದವ್ ದಾಳಿಯಲ್ಲಿ ವಿಕೆಟ್‌'ಕೀಪರ್ ಜಾನಿ ಬೇರ್‌ಸ್ಟೋ (53: 152 ಎಸೆತ, 5 ಬೌಂಡರಿ) ವಿಕೆಟ್ ಎಗರಿಸಿ ಇಂಗ್ಲೆಂಡ್‌ನ ಹೋರಾಟದ ಹಾದಿಯನ್ನು ಮಂಕಾಗಿಸಿದರು. ಹೀಗೆ 6ನೇ ವಿಕೆಟ್‌ಗೆ 110 ರನ್‌ಗಳ ಭರ್ಜರಿ ಜತೆಯಾಟ ನೀಡಿದ ಈ ಜೋಡಿಯನ್ನು ಉಮೇಶ್ ಬೇರ್ಪಡಿಸಿದ ಬಳಿಕ ಇಂಗ್ಲೆಂಡ್ ಅನ್ನು ಹಣಿಯುವ ಕೆಲಸಕ್ಕೆ ಅಶ್ವಿನ್ ಮುಂದಾದರು. ಬೇರ್‌'ಸ್ಟೋ ನಿರ್ಗಮನದ ಬಳಿಕ ಕ್ರೀಸ್‌'ಗಿಳಿದ ಅದಿಲ್ ರಶೀದ್ (32: 73 ಎಸೆತ, 6 ಬೌಂಡರಿ) ಒಬ್ಬರನ್ನು ಬಿಟ್ಟರೆ, ಸ್ಟುವರ್ಟ್ ಬ್ರಾಡ್ (13) ಮತ್ತು ಜೇಮ್ಸ್ ಆ್ಯಂಡರ್ಸನ್ (0) ಅಶ್ವಿನ್ ಮಾಯಾ ಜಾಲಕ್ಕೆ ಸಿಲುಕಿ ಕ್ರೀಸ್ ತೊರೆದರು. ಇನ್ನು ಬೇರ್‌ಸ್ಟೋ ಜತೆಗೆ ಭಾರತವನ್ನು ಕಾಡಿದ ಬೆನ್ ಸ್ಟೋಕ್ಸ್ (70: 157 ಎಸೆತ, 11 ಬೌಂಡರಿ) ಅವರನ್ನೂ ಅಶ್ವಿನ್ ಎಲ್‌ಬಿ ಬಲೆಗೆ ಬೀಳಿಸಿದರು.

ಸ್ಕೋರ್ ವಿವರ

ಭಾರತ ಮೊದಲ ಇನ್ನಿಂಗ್ಸ್: 455/10

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 255/10

ಭಾರತ ಎರಡನೇ ಇನ್ನಿಂಗ್ಸ್

34 ಓವರ್‌ಗಳಲ್ಲಿ 3 ವಿಕೆಟ್‌ಗೆ 98

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!