ಜನಪ್ರೀಯ ಕಬಡ್ಡಿ ಕ್ರೀಡೆ ಇದೀಗ ಮತ್ತೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದೇ ಜೂನ್ 22 ರಿಂದ ದುಬೈನಲ್ಲಿ ಮಾಸ್ಟರ್ ಕಬಡ್ಡಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಭಾರತ, ಪಾಕಿಸ್ತಾನ ಸೇರಿದಂತೆ 6 ದೇಶಗಳು ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಈ ಟೂರ್ನಿ ಕುರಿತು ಇನ್ನಷ್ಟು ವಿವರ ಇಲ್ಲಿದೆ.
ದುಬೈ(ಜೂ.14): ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಹಾಗೂ ಸ್ಟಾರ್ ಇಂಡಿಯಾ ಸಹಭಾಗಿತ್ವದಲ್ಲಿ ನೂತನ ಕಬಡ್ಡಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. 6 ದೇಶಗಳನ್ನೊಳಗೊಂಡ ಈ ಮಹತ್ವದ ಟೂರ್ನಿ ಇದೇ ಜೂನ್ 22 ರಿಂದ ದುಬೈನಲ್ಲಿ ಆಯೋಜನೆಗೊಳ್ಳಲಿದೆ.
9 ದಿನಗಳ ಕಾಲ ನಡೆಯಲಿರುವ ರೋಚಕ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ರಿಪಬ್ಲಿಕ್ ಆಫ್ ಕೊರಿಯಾ,ಇರಾನ್, ಅರ್ಜೆಂಟೀನಾ ಹಾಗೂ ಕೀನ್ಯಾ ತಂಡಗಳು ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಕಬಡ್ಡಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಕಬಡ್ಡಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಜನಪ್ರೀಯತೆ ವಿಶ್ವದೆಲ್ಲೆಡೆ ಹಬ್ಬುತ್ತಿದೆ. ಹೀಗಾಗಿ ಇದೀಗ 6 ರಾಷ್ಟ್ರಗಳನ್ನೊಳಗೊಂಡ ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಯನ್ನ ಆಯೋಜಿಸುತಿದ್ದೇವೆ. ನಮ್ಮ ಯೋಜನೆಗೆ ದುಬೈ ಸ್ಪೋರ್ಟ್ಸ್ ಕೌನ್ಸಿಲ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ಕೈಜೋಡಿಸಿದೆ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಅಧ್ಯಕ್ಷ ಜನಾರ್ಧನ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ.
ಬಲಿಷ್ಠ ತಂಡಗಳ ವಿರುದ್ದ ಕಬಡ್ಡಿ ಟೂರ್ನಿ ಆಡೋ ಅವಕಾಶ ಸಿಕ್ಕಿರೋದು ನಮ್ಮ ಸೌಭಾಗ್ಯ. ಕಬಡ್ಡಿ ದುಬೈ ಮಾಸ್ಟರ್ ಟೂರ್ನಿ ಯಶಸ್ವಿಯಾಗಲಿದೆ. ಎಂದು ಭಾರತ ತಂಡದ ಕೋಚ್ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
6 ತಂಡಗಳನ್ನ 2 ಗುಂಪುಗಳಾಗಿ ವಿಂಗಡಿಸಲಾಗುತ್ತೆ. ಪ್ರತಿ ಗಂಪಿನಲ್ಲಿರು ತಂಡಗಳು ಒಂದು ತಂಡದ ವಿರುದ್ಧ 2 ಪಂದ್ಯಗನ್ನಾಡಲಿದೆ. 2 ಗುಂಪಿನಿಂದ ತಲಾ ಎರಡೆರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ಭಾರತ ಎ ಗುಂಪಿನಲ್ಲಿದೆ. ಪಾಕಿಸ್ತಾನ ಹಾಗೂ ಕೀನ್ಯಾ ತಂಡಗಳು ಕೂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ಶೀಘ್ರದಲ್ಲೆ ಕಬಡ್ಡಿ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇನ್ನು ಬಿ ಗುಂಪಿನಲ್ಲಿ ಇರಾನ್, ಕೊರಿಯಾ ಹಾಗೂ ಅರ್ಜೆಂಟೀನಾ ತಂಡಗಳಿವೆ.