ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತಷ್ಟು ಪದಕ ಸಾಧನೆ ಮಾಡಿದೆ. ಪ್ಯಾರಾ ಅಥ್ಲೆಟಿಕ್ಸ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ದಿಲೀಪ್ ಗಾವಿತ್ ಚಿನ್ನ, ಮೊಹಮ್ಮದ್ ಬಾಸಿಲ್ ಬೆಳ್ಳಿ ಪದಕ ಗೆದ್ದರೆ, ಪುರುಷರ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು. ಇದರೊಂದಿಗೆ ದೇಶದ ಪದಕ ಗಳಿಕೆ ಈಗ 15ಕ್ಕೆ ಏರಿಕೆಯಾಗಿದೆ. ಭಾರತದ ಬಳಿ ಈಗ 3 ಚಿನ್ನ, 9 ಬೆಳ್ಳಿ, 3 ಕಂಚಿನ ಪದಕಗಳಿವೆ.
ಪುರುಷರ 100 ಮೀ. ಟಿ47 ವಿಭಾಗದಲ್ಲಿ ದಿಲೀಪ್ 10.71 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಗೇಮ್ಸ್ ದಾಖಲೆಯೊಂದಿಗೆ ಚಾಂಪಿಯನ್ ಆದರು. ಇದು ಗೇಮ್ಸ್‌ನ ಇತಿಹಾಸದಲ್ಲೇ ಪುರುಷರ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನ. ಒಟ್ಟಾರೆ ಈ ಬಾರಿ ಗೇಮ್ಸ್‌ನಲ್ಲಿ ಭಾರತ 3ನೇ ಬಂಗಾರ ಗೆದ್ದಿತು. ಇದೇ ವೇಳೆ, ಈ ಋತುವಿನ ತಮ್ಮ ಶ್ರೇಷ್ಠ ಪ್ರದರ್ಶನ ದಾಖಲಿಸಿದ ಬಾಸಿಲ್ 10.83 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನಿಯಾದರು. ಇಂಗ್ಲೆಂಡ್‌ನ ಕೆವಿನ್ ಸ್ಯಾಂಟೊಸ್(10.85 ಸೆಕೆಂಡ್) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಪ್ಯಾರಾ 100 ಮೀ. ರೇಸ್‌ನ ಚಿನ್ನ ವಿಜೇತ ದಿಲೀಪ್ ಮಹಾರಾಷ್ಟ್ರದ ನಾಸಿಕ್ ಬಳಿಯ ತಾರನ್ ಡೋಂಗರಿಯ ರೈತ ಕುಟುಂಬದ ಕುಡಿ. ತಮ್ಮ 6ನೇ ವಯಸ್ಸಿನಲ್ಲಿ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ಆದರೆ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದಾಗಿ ದಿಲೀಪ್‌ರ ಒಂದು ಕೈಯನ್ನು ಕತ್ತರಿಸಬೇಕಾಗಿತ್ತು. ಬಳಿಕ ಸ್ಥಳೀಯ ಶಾಲಾ ಸ್ಪರ್ಧೆಯೊಂದರಲ್ಲಿ ದಿಲೀಪ್ ಓಡುವುದನ್ನು ನೋಡಿದ್ದ ವೈಜನಾಥ್ ದಯಾನಂದ್ ಕಾಳೆ ಎಂಬವರು, ದಿಲೀಪ್‌ರನ್ನು ತಮ್ಮ ಬಳಿ ಸೇರಿಸಿಕೊಂಡರು. ಅವರ ಪೋಷಕರ ಜೊತೆ ಮಾತನಾಡಿ ದಿಲೀಪ್‌ರನ್ನು ‘ದತ್ತು’ ಪಡೆದು ತಮ್ಮ ಮನೆಯಲ್ಲೇ ಬೆಳೆಸಿದರು. ಆ ಬಳಿಕ ದಿಲೀಪ್ ಬದುಕು ಬದಲಾಯಿತು.
ಈ ಬಗ್ಗೆ ಪದಕ ಗೆದ್ದ ಬಳಿಕ ಮಾತನಾಡಿದ ದಿಲೀಪ್, ತಮ್ಮ ಗೆಲುವನ್ನು ಗುರು ವೈಜನಾಥ್‌ಗೆ ಅರ್ಪಿಸಿದ್ದಾರೆ. ‘ನನ್ನ ಖರ್ಚು ಸೇರಿ ಎಲ್ಲವನ್ನೂ ನೋಡಿಕೊಂಡಿದ್ದು ನನ್ನ ಕೋಚ್ ವೈಜನಾಥ್. ಇಂದು ಗುರುಪೂರ್ಣಿಮೆ. ಹೀಗಾಗಿ ಈ ಚಿನ್ನದ ಪದಕ ನನ್ನ ಗುರುವಿಗೆ ನಾನು ನೀಡುತ್ತಿರುವ ವಿಶೇಷ ಕಾಣಿಕೆ’ ಎಂದಿದ್ದಾರೆ. ದಿಲೀಪ್‌ರ ಸಾಧನೆ ಬಗ್ಗೆ ಕೊಂಡಾಡಿದ ವೈಜನಾಥ್, ‘ಆತ ನನ್ನ ಬಳಿಯೇ ಇದ್ದು ಬೆಳೆದವನು. ಅವನು ನನ್ನ ಮಗ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗ್ಲಾಸ್ಗೋದಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಮುರಳಿ ಶ್ರೀಶಂಕರ್, ತಮ್ಮ ಮೇಲಿದ್ದ ನಿರೀಕ್ಷೆ ಹುಸಿಗೊಳಿಸಲಿಲ್ಲ. 2022ರಲ್ಲಿ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು, ಈ ಬಾರಿಯೂ 2ನೇ ಸ್ಥಾನಿಯಾದರು. ಅಲ್ಲದೆ, ಗೇಮ್ಸ್‌ನ ಇತಿಹಾಸದಲ್ಲೇ ಲಾಂಗ್‌ಜಂಪ್‌ನಲ್ಲಿ ಸತತ ಪದಕ ಗೆದ್ದ ಭಾರತದ ಮೊದಲಿಗ ಎನಿಸಿಕೊಂಡರು. ಅವರು 8.09 ಮೀ. ದೂರಕ್ಕೆ ನೆಗೆದರು. ಮಾಜಿ ವಿಶ್ವ ಚಾಂಪಿಯನ್, ಜಮೈಕಾದ ತಜಯ್ ಗೇಲ್ 8.15 ಮೀ. ದೂರಕ್ಕೆ ನೆಗೆದು ಚಿನ್ನ ಗೆದ್ದರೆ, ಸ್ಕಾಟ್ಲೆಂಡ್‌ನ ಸ್ಟೀಫನ್ ಮೆಕೆನ್ಜೀ(8.08 ಮೀ.) ಕಂಚು ತಮ್ಮದಾಗಿಸಿಕೊಂಡರು. ಭಾರತದ ಮತ್ತೋರ್ವ ಸ್ಪರ್ಧಿ, ಕರ್ನಾಟಕದ ಲೋಕೇಶ್ ಸತ್ಯನಾಥನ್(7.97 ಮೀ.) 5ನೇ ಸ್ಥಾನಿಯಾಗಿ ಪದಕ ತಪ್ಪಿಸಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.