IPL 2018: ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜು

First Published May 17, 2018, 3:21 PM IST
Highlights

ಸನ್‌ರೈಸರ್ಸ್‌ನ ಬಲಿಷ್ಠ ಬೌಲಿಂಗ್ ಪಡೆಯನ್ನು ಮೆಟ್ಟಿ ನಿಲ್ಲಬೇಕಿದ್ದರೆ ಕೊಹ್ಲಿ, ಡಿವಿಲಿಯರ್ಸ್‌ ಸಿಡಿಯಲೇಬೇಕು. ಇಬ್ಬರ ಮೇಲೆ ಆರ್‌ಸಿಬಿ ಹೆಚ್ಚು ಅವಲಂಬಿತಗೊಂಡಿದೆ.

ಬೆಂಗಳೂರು[ಮೇ.17]: ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿ, ಇಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್‌ರೈಸರ್ಸ್‌ಗೆ ಸವಾಲೆಸೆಯಲಿದೆ.ಪ್ಲೇ-ಆಫ್‌ಗೇರಲು ಆರ್‌ಸಿಬಿಗಿದು ಗೆಲ್ಲಲೇಬೇಕಾದ ಪಂದ್ಯವಾಗಿದೆ.
ಡೆಲ್ಲಿ ಹಾಗೂ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಆರ್'ಸಿಬಿ, ಅಂತಿಮ 2 ಪಂದ್ಯಗಳಲ್ಲೂ ಇದೇ ಲಯ ಮುಂದುವರಿಸಲು ಕಾತರಿಸುತ್ತಿದೆ. ಮತ್ತೊಂದೆಡೆ ಆಡಿರುವ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದಿರುವ ಸನ್‌ರೈಸರ್ಸ್‌, ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡುವುದು ಖಚಿತ. ಸನ್‌ರೈಸರ್ಸ್‌ನ ಬಲಿಷ್ಠ ಬೌಲಿಂಗ್ ಪಡೆಯನ್ನು ಮೆಟ್ಟಿ ನಿಲ್ಲಬೇಕಿದ್ದರೆ ಕೊಹ್ಲಿ, ಡಿವಿಲಿಯರ್ಸ್‌ ಸಿಡಿಯಲೇಬೇಕು. ಇಬ್ಬರ ಮೇಲೆ ಆರ್‌ಸಿಬಿ ಹೆಚ್ಚು ಅವಲಂಬಿತಗೊಂಡಿದೆ. ಉಮೇಶ್ ಯಾದವ್ ಆಕರ್ಷಕ ಪ್ರದರ್ಶನ ತೋರುತ್ತಿದ್ದು, ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಅತ್ತ ಸನ್‌ರೈಸರ್ಸ್‌ ಕೂಡ ತನ್ನ ಪ್ರಮುಖ ಬ್ಯಾಟ್ಸ್'ಮನ್‌ಗಳಾದ ಧವನ್, ವಿಲಿಯಮ್ಸನ್ ಮೇಲೆ ಹೆಚ್ಚು ನಿರೀಕ್ಷೆ ಇರಿಸಿದೆ. ಮಧ್ಯಮ ಕ್ರಮಾಂಕ ಸ್ಥಿರತೆ ಕಾಯ್ದುಕೊಳ್ಳದೆ ಇರುವುದು ರೈಸರ್ಸ್‌ನ ಅತಿದೊಡ್ಡ ದೌರ್ಬಲ್ಯ. ಭುವನೇಶ್ವರ್, ಚಿನ್ನಸ್ವಾಮಿಯ ಸ್ವಿಂಗ್ ಸ್ನೇಹಿ ವಾತಾವರಣದ ಲಾಭ ಪಡೆಯಲು ಎದುರು ನೋಡುತ್ತಿದ್ದು ಅವರಿಗೆ ಸಿದ್ಧಾರ್ಥ್ ಕೌಲ್ ಹಾಗೂ ಸಂದೀಪ್ ಶರ್ಮಾ ಬೆಂಬಲ ನೀಡಲಿದ್ದಾರೆ. ಲೆಗ್ ಸ್ಪಿನ್ನರ್ ರಶೀದ್ ಖಾನ್'ರನ್ನು ಸಮರ್ಥವಾಗಿ ಎದುರಿಸುವುದು ಆರ್‌ಸಿಬಿ ಮುಂದಿರುವ ಅತಿದೊಡ್ಡ ಸವಾಲಾಗಿದೆ. 
ಐಪಿಎಲ್‌ನಲ್ಲಿ ಯಾವ ಸಾಧ್ಯತೆಗಳನ್ನೂ ತಳ್ಳಿಹಾಕಲು ಸಾಧ್ಯವಿಲ್ಲದ ಕಾರಣ, ಆರ್‌ಸಿಬಿ ಈ ಪಂದ್ಯ ಜಯಿಸಿ ಪ್ಲೇ-ಆಫ್ ರೇಸ್‌ನಲ್ಲಿ ಫೇವರಿಟ್ ಅನಿಸಬಹುದು. ಇಲ್ಲಾ, ಸನ್‌ರೈಸರ್ಸ್‌ ತನ್ನ ಪ್ರಾಬಲ್ಯ ಮುಂದುವರಿಸಿ ವಿರಾಟ್ ಪಡೆಯ ‘ಕಪ್ ನಮ್ದೇ’ ಅಭಿಯಾನಕ್ಕೆ ತೆರೆ ಎಳೆದರೂ ಆಶ್ಚರ್ಯವಿಲ್ಲ. 

click me!