
ನವದೆಹಲಿ(ಏ.15): ಬ್ಯಾಟಿಂಗ್-ಬೌಲಿಂಗ್'ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಿಂಗ್ಸ್ ಇಲೆವನ್ ಪಂಜಾಬ್ ಎದುರು 51ರನ್'ಗಳ ಅಂತರದ ಜಯ ದಾಖಲಿಸಿತು.
ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಮೊಲು ಬ್ಯಾಟಿಂಗ್ ಆಯ್ದುಕೊಂಡಿತು. ಡೆಲ್ಲಿ ನಾಯಕ ಜಹೀರ್ ಖಾನ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಅರ್ಧಶತಕದ ಜತೆಯಾಟವಾಡಿತು. ಕಳೆದ ಪಂದ್ಯದ ಹೀರೂ ಸ್ಯಾಮ್ಸನ್ 19ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಆಡಲಿಳಿದ ಕನ್ನಡಿಗ ಕರುಣ್ ನಾಯರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಸ್ಯಾಮ್ ಬಿಲ್ಲಿಂಗ್ಸ್ ಎರಡನೇ ಅರ್ಧಶತಕ ಸಿಡಿಸಿ ಮಿಂಚಿದರು. ಕೆಳಕ್ರಮಾಂಕದಲ್ಲಿ ಕೋರಿ ಆ್ಯಂಡರ್'ಸನ್ 22 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್'ಗಳ ನೆರವಿನಿಂದ 39ರನ್ ಸಿಡಿಸಿದರು. ಅಂತಿಮವಾಗಿ ಡೇರ್'ಡೆವಿಲ್ಸ್ ಪಡೆ ಆರು ವಿಕೆಟ್ ನಷ್ಟಕ್ಕೆ 188ರನ್'ಗಳ ಬೃಹತ್ ಮೊತ್ತ ದಾಖಲಿಸಿತು.
ಡೆಲ್ಲಿ ನೀಡಿದ ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ಆರಂಭದಲ್ಲೆ ಆಘಾತ ಎದುರಿಸಿತು. ಆರಂಭಿಕ ಮನನ್ ವೊಹ್ರಾ ಕೇವಲ ಮೂರು ರನ್'ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ವೃದ್ದಿಮಾನ್ ಸಾಹಾ ಕೂಡ ನದೀಮ್'ಗೆ ಎರಡನೇ ಬಲಿಯಾಗುವ ಮೂಲಕ ಪೆವಿಲಿಯನ್ ಸೇರಿದರು. ಇಲ್ಲಿಂದ ಡೆಲ್ಲಿ ಬೌಲರ್'ಗಳ ದಾಳಿಗೆ ನಿರುತ್ತರರಾದ ಕಿಂಗ್ಸ್ ಪಡೆ 86ರನ್ ಬಾರಿಸುವಷ್ಟರಲ್ಲಿ ಪ್ರಮುಖ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಕ್ಷಣದಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಮತ್ತೊಂದು ಕಡೆ ಅವರಿಗೆ ಸರಿಯಾದ ಸಾಥ್ ದೊರೆಯಲಿಲ್ಲ. ಪಟೇಲ್ 44 ರನ್ ಬಾರಿಸಿ ಕೊನೆಯವರಾಗಿ ಕ್ರಿಸ್ ಮೋರಿಸ್'ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕಿಂಗ್ಸ್ ಇಲೆವನ್ ಪಂಜಾಬ್ ಒಂಬತ್ತು ವಿಕೆಟ್ ನಷ್ಟಕ್ಕೆ ಕೇವಲ 137ರನ್ ಗಳಿಸಲಷ್ಟೇ ಶಕ್ತವಾಯಿತು.
ಡೆಲ್ಲಿ ಪರ ಕ್ರಿಸ್ ಮೋರಿಸ್ ಮೂರು ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್, ಹಾಗೂ ಶಹಬಾಜ್ ನದೀಮ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.