
ನವದೆಹಲಿ(ಜೂ.07): ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ತನಿಖೆಯನ್ನು ದೆಹಲಿ ಪೊಲೀಸರು ಚುರುಕುಗೊಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕುಸ್ತಿಪಟುಗಳು ಶನಿವಾರ ಭೇಟಿ ಮಾಡಿದ ಚರ್ಚಿಸಿದ ಬೆನ್ನಲ್ಲೇ ಬ್ರಿಜ್‌ರ ದೆಹಲಿ, ಲಖನೌ ಹಾಗೂ ಗೊಂಡ ನಿವಾಸಗಳಿಗೆ ದೆಹಲಿ ಪೊಲೀಸರು ಭೇಟಿ ನೀಡಿ ಅವರ ಆಪ್ತರು, ಮನೆಗೆಲಸದವರನ್ನು ವಿಚಾರಣೆ ನಡೆಸಿದ್ದಾರೆ.
ಕೆಲಸದವರ ಬಳಿ ಬ್ರಿಜ್‌ರ ವರ್ತನೆ, ನಡತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿಚಾರಣೆಗೆ ಒಳಪಟ್ಟವರ ಮಾಹಿತಿ, ವಿಳಾಸವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮುಂದೆ ಮತ್ತೆ ವಿಚಾರಣೆಗೆ ಕರೆದರೆ ಬರಬೇಕಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕುಸ್ತಿ ಫೆಡರೇಶನ್‌ಗೆ 3-4 ಅಧಿಕಾರಿಗಳನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳಿಂದ ಬ್ರಿಜ್‌ರ ಕೆಲಸದ ಶೈಲಿ, ಕುಸ್ತಿ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ಪಡೆದಿರುವುದಾಗಿ ವರದಿಯಾಗಿದೆ.
ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಿ ಅಪ್ರಾಪ್ತೆ ಸೇರಿ 7 ಕುಸ್ತಿಪಟುಗಳು ನೀಡಿದ್ದ ದೂರಿನ ಸಂಪೂರ್ಣ ವಿವರ ಸದ್ಯ ಬಹಿರಂಗಗೊಂಡಿದೆ. ಏ.28ರಂದು ದೆಹಲಿ ಪೊಲೀಸರು ಬ್ರಿಜ್ ವಿರುದ್ಧ ಪೋಕ್ಸೋ ಸೇರಿ 2 ಪ್ರಕರಣಗಳನ್ನು ದಾಖಲಿಸಿದ್ದರು. ಎಫ್‌ಐಆರ್ ಆದ ಒಂದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.
ಹೋರಾಟ ಕೈಬಿಟ್ಟಿಲ್ಲ: ಕುಸ್ತಿಪಟುಗಳ ಸ್ಪಷ್ಟನೆ
ಕುಸ್ತಿಪಟುಗಳು ಕೆಲಸಕ್ಕೆ ಮರಳುತ್ತಿದ್ದಂತೆ ಕೆಲ ಮಾಧ್ಯಮಗಳಲ್ಲಿ ಬ್ರಿಜ್ ವಿರುದ್ಧದ ಹೋರಾಟ ಕೊನೆಗೊಂಡಿದೆ ಎಂದು ಸುದ್ದಿ ಬಿತ್ತರಿಸಿದ್ದವು. ಇದನ್ನು ಕುಸ್ತಿಪಟುಗಳು ಅಲ್ಲಗಳೆದಿದ್ದಾರೆ. ಈ ಬಗ್ಗೆ ಭಜರಂಗ್, ವಿನೇಶ್ ಹಾಗೂ ಸಾಕ್ಷಿ ಮೂವರೂ ತಮ್ಮ ಟ್ವೀಟರ್ ಖಾತೆಗಳಲ್ಲಿ ಸ್ಪಷ್ಟನೆ ನೀಡಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
Wrestlers Protest: ಕುಸ್ತಿಪಟುಗಳನ್ನು ಬೆಂಬಲಿಸಿ ಮತ್ತೆ ಮಹಾಪಂಚಾಯತ್
‘ನಮ್ಮ ಹೋರಾಟ ಕೈಬಿಟ್ಟಿಲ್ಲ ಮತ್ತು ಹಿಂದೆ ಸರಿದಿಲ್ಲ. ದೂರು ವಾಪಸ್ ಪಡೆಯಲಾಗಿದೆ ಎನ್ನುವ ಸುದ್ದಿಯೂ ಸುಳ್ಳು. ನಮ್ಮ ಹೋರಾಟವನ್ನು ಹತ್ತಿಕ್ಕಲು ಕಾಯುತ್ತಿರುವವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಿದ್ದೇವೆ’ ಎಂದು ಭಜರಂಗ್ ತಿಳಿಸಿದ್ದಾರೆ.
ಶಾ ಭೇಟಿ ಬಗ್ಗೆ ಮಾತನಾಡದಂತೆ ಸರ್ಕಾರ ಸೂಚಿಸಿದೆ: ಭಜರಂಗ್!
ಕಳೆದ ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ರೈಲ್ವೇ ಕೆಲಸಕ್ಕೆ ಮರಳಿದ ಬಗ್ಗೆ ಪ್ರತಿಕ್ರಿಯಿಸಿರುವ ಕುಸ್ತಿಪಟು ಭಜರಂಗ್ ಪೂನಿಯಾ, ‘ಶಾ ಭೇಟಿ ವೇಳೆ ಚರ್ಚೆಯಾದ ವಿಚಾರಗಳ ಬಗ್ಗೆ ಮಾತನಾಡದಂತೆ ಸರ್ಕಾರ ಸೂಚಿಸಿದೆ’ ಎಂದಿದ್ದಾರೆ. ‘ಕಾನೂನು ಎಲ್ಲರಿಗೂ ಒಂದೇ. ಅದು ತನ್ನ ರೀತಿಯಲ್ಲಿ ಕೆಲಸ ಮಾಡಲಿ’ ಎಂದು ಶಾ ಹೇಳಿದರು ಎಂದಷ್ಟೇ ಭಜರಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮಿತ್ ಶಾರನ್ನು ಭೇಟಿಯಾಗಿ, ಬ್ರಿಜ್ರನ್ನು ಬಂಧಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಸತ್ಯಾಗ್ರಹದ ಜೊತೆಗೆ ರೈಲ್ವೇ ಇಲಾಖೆಯಲ್ಲಿ ಕತ್ರ್ಯವ್ಯಕ್ಕೆ ಹಾಜರಾಗುತ್ತಿದ್ದೇನೆ. ನಾವು ಹೋರಾಟದಿಂದ ಹಿಂದೆ ಸರಿದಿಲ್ಲ. ಸುಳ್ಳು ಸುದ್ದಿ ಹರಡಬಾರದು. ನಮ್ಮನ್ನು ಹಿಮ್ಮೆಟ್ಟಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.