
ಮೈಸೂರು(ಅ.17): ಇಲ್ಲಿ ಮಂಗಳವಾರ ಮುಕ್ತಾಯವಾದ ದಸರಾ ಸಿ.ಎಂ. ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ ರನ್ನರ್ ಅಪ್ ಆಗಿದೆ. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ರೀನಾ ಜಾಜ್‌ರ್ ಮತ್ತು ಪುರುಷರ ವಿಭಾಗದಲ್ಲಿ ಬೆಂಗಳೂರಿನ ಶಶಿಕಾಂತ್ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾದರು.
ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪುರುಷರ ಹ್ಯಾಮರ್ ಥ್ರೋ ಸ್ಫರ್ಧೆಯಲ್ಲಿ ದ.ಕನ್ನಡದ ಸುದೀರ್ ಸಿರಾದೊನೆ 56.17 ಮೀ., ಯಮನೂರಪ್ಪ 47.97 ಮೀ., ರಾಹುಲ್ ರಾಮ 46.41 ಮೀ. ದೂರ ಎಸೆದು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದರು. ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ಮೈಸೂರಿನ ಹರ್ಷಿತಾ (47.98 ಮೀ.), ದ.ಕನ್ನಡದ ಅಮ್ರೀನ್ (45.62 ಮೀ.), ವೀಕ್ಷಾ (35.51 ಮೀ.) ದೂರ ಎಸೆಯುವ ಚಿನ್ನ, ಬೆಳ್ಳಿ, ಕಂಚು ಜಯಿಸಿದರು.
ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ದ.ಕನ್ನಡದ ಪ್ರದ್ಯುಮ್ನ ಬೋಪಯ್ಯ 56.2 ಸೆ., ಅಜಿತ್ 56.5 ಸೆ., ಕೃಷ್ಣಾ 57.3 ಸೆ.ಗಳಲ್ಲಿ ಗುರಿ ತಲುಪಿ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು. ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಬೆಂಗಳೂರಿನ ಬಿಬಿಶಾ (1:03.7ಸೆ.), ಉಡುಪಿಯ ಪ್ರಜ್ಞಾ (1:04.4ಸೆ.), ದ. ಕನ್ನಡದ ಸಿಂಧು (1:07.3ಸೆ.) ಗುರಿ ತಲುಪಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಪುರುಷರ ಟ್ರಿಪಲ್ ಜಂಪ್‌ನಲ್ಲಿ ದ. ಕನ್ನಡದ ಸಂದೀಪ್ ಶೆಟ್ಟಿ(15.14 ಮೀ.) ಜಿಗಿದು ಚಿನ್ನ ಗೆದ್ದರೆ, ರವಿಮಠ್ (14.40 ಮೀ.) ಜಿಗಿದು ಕಂಚು ಪಡೆದರು. ಬೆಂಗಳೂರು ಗ್ರಾಮಾಂತರದ ನವೀನ್ (14.51 ಮೀ.) ದೂರ ಜಿಗಿದು ಬೆಳ್ಳಿ ಗೆದ್ದರು.
ಮಹಿಳೆಯರ 100 ಮೀ. ಓಟದಲ್ಲಿ ಮೈಸೂರಿನ ರೀನಾ ಜಾಜ್‌ರ್ (11.5.0 ಸೆ.), ಬೆಂಗಳೂರಿನ ದಾನೇಶ್ವರಿ (11.8.0 ಸೆ.), ಪದ್ಮಿನಿ (11.8.0 ಸೆ.) ಗಳಲ್ಲಿ ಗುರಿ ಕ್ರಮಿಸಿ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಜಯಿಸಿದರು.
ಪುರುಷರ 100 ಮೀ. ಓಟದಲ್ಲಿ ಬೆಂಗಳೂರಿನ ಶಶಿಕಾಂತ್ (10.5.0 ಸೆ.), ಕುಶಾಲ್ ಆಂಬೋರೆ (10.7.0ಸೆ.) ಮತ್ತು ಮೈಸೂರಿನ ಸುಹಾಸ್ ಗೌಡ (10.7.0 ಸೆ.) ಗಳಲ್ಲಿ ಗುರಿ ತಲುಪಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
ಮಹಿಳೆಯರ 1500 ಮೀ. ಓಟದಲ್ಲಿ ಬೆಂಗಳೂರಿನ ಉಷಾ (5.20.7ಸೆ.), ಹಾಸನದ ಸಹನಾ (5.22.0ಸೆ.), ದ. ಕನ್ನಡದ ದೀಕ್ಷಾ (5.22.4 ಸೆ.) ಗುರಿ ಮುಟ್ಟಿಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.
ಈ ಬಾರಿ ತರಾತುರಿಯಲ್ಲಿ ದಸರಾ ಕೂಟ: ಜಿಟಿಡಿ
ಈ ಬಾರಿ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ತರಾತುರಿಯಲ್ಲಿ ಆಯೋಜಿಸಲಾಯಿತು. ಮುಂದಿನ ಬಾರಿ ಗ್ರಾಮೀಣ ಕ್ರೀಡಾಕೂಟ ಸೇರಿದಂತೆ ದೇಶದಲ್ಲಿಯೇ ಮಾದರಿಯಾದ ಕೂಟ ಆಯೋಜಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ‘ಈ ಬಾರಿ ದಸರಾ ಕೂಟವನ್ನು ಕಡಿಮೆ ಸಮಯವಕಾಶದಲ್ಲಿ ನಡೆಸಲಾಯಿತಾದರೂ ಅಚ್ಚುಕಟ್ಟಾಗಿ ನಡೆದಿದೆ. ಮುಂದಿನ ವರ್ಷದಿಂದ ಗ್ರಾಮೀಣ ಕೂಟ ಸೇರಿದಂತೆ ಎಲ್ಲಾ ಮಾದರಿಯ ಕ್ರೀಡೆಯನ್ನು ದೊಡ್ಡ ಮಟ್ಟದಲ್ಲಿ ನಡೆಸುವ ಯೋಜನೆ ಇದೆ. ಈ ಕ್ರೀಡಾಕೂಟಕ್ಕೆ ಬಜೆಟ್‌ನಲ್ಲಿ .7 ಕೋಟಿ ಮಂಜೂರಾಗಿತ್ತು’ ಎಂದರು.
ದಸರಾ ಕೂಟವನ್ನು ಮತ್ತಷ್ಟುಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಮುಂದಿನ ವರ್ಷದಿಂದ ದಕ್ಷಿಣ ವಲಯ ಕ್ರೀಡಾಕೂಟವನ್ನು ನಡೆಸುವ ಮೂಲಕ ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಚಿಂತನೆ ಇದೆ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು ಹೇಳಿದ್ದಾರೆ. ಹಾಗೆ ವಿಜೇತ ಕ್ರೀಡಾಪಟುಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ದ್ವಿಗುಣಗೊಳಿಸುವ ಇಚ್ಛೆ ಇದೆ ಎಂದರು. ಈ ಬಾರಿಯ ಕೂಟದಲ್ಲಿ ಪದಕ ಗೆದ್ದ ಸ್ಪರ್ಧಿಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ಆದ್ಯತೆ ಸಿಗುತ್ತದೆ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದೆ ಎಂದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.