IPL 2018: ಚೆನ್ನೈ-ಡೆಲ್ಲಿ ನಡುವೆ ಔಪಚಾರಿಕ ಕದನ

First Published May 18, 2018, 5:12 PM IST
Highlights

ಇಂದು ಇಲ್ಲಿ ನಡೆಯಲಿರುವ ಔಪಚಾರಿಕ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಧೋನಿ ಪಡೆ ಸೆಣಸಲಿದೆ. 12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಡೆಲ್ಲಿ, ಈಗಾಗಲೇ ಪ್ಲೇ-ಆಫ್ ರೇಸ್'ನಿಂದ ಹೊರಬಿದ್ದಿದೆ.

ನವದೆಹಲಿ[ಮೇ.18]:: ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್, 2 ಪಂದ್ಯ ಬಾಕಿ ಇರುವಂತೆಯೇ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದು ಲಯ ಕಾಪಾಡಿಕೊಂಡು ನಾಕೌಟ್ ಹಂತಕ್ಕೇರುವ ವಿಶ್ವಾಸದಲ್ಲಿದೆ. 
ಇಂದು ಇಲ್ಲಿ ನಡೆಯಲಿರುವ ಔಪಚಾರಿಕ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಧೋನಿ ಪಡೆ ಸೆಣಸಲಿದೆ. 12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಡೆಲ್ಲಿ, ಈಗಾಗಲೇ ಪ್ಲೇ-ಆಫ್ ರೇಸ್'ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಗೆದ್ದರೆ 2ನೇ ಸ್ಥಾನದಲ್ಲಿರುವ ಚೆನ್ನೈ ತಂಡವನ್ನು ಕಳೆಗಿಳಿರುವ ಯಾವ ತಂಡ ಸಹ ಅಂಕಪಟ್ಟಿಯಲ್ಲಿ ಹಿಂದಿಕ್ಕಲು ಸಾಧ್ಯವಿಲ್ಲ. ಆಗ ಸನ್‌ರೈಸರ್ಸ್‌ ಹಾಗೂ ಚೆನ್ನೈ ಅಗ್ರ 2 ಸ್ಥಾನದೊಂದಿಗೆ ಲೀಗ್ ಹಂತ ಮುಕ್ತಾಯಗೊಳಿಸುವುದು ಖಚಿತವಾಗಲಿದೆ. ಮೇ 22ರಂದು ನಡೆಯಲಿರುವ ಪ್ಲೇ-ಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಎರಡು ತಂಡಗಳು ಸೆಣಸಲಿದ್ದು, ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋಲುವ ತಂಡಕ್ಕೆ ಮತ್ತೊಂದು ಅವಕಾಶವಿರಲಿದೆ. ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಚೆನ್ನೈಗಿದು ಉತ್ತಮ ಅವಕಾಶವಾಗಿದೆ.
ಹೆಚ್ಚು ಸೋಲುಗಳನ್ನೇ ಕಂಡಿರುವ ಡೆಲ್ಲಿ ಮಾನಸಿಕವಾಗಿ ಕುಗ್ಗಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಚೆನ್ನೈ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ. ಪ್ಲೇ-ಆಫ್‌ಗೂ ಮುನ್ನ ಕೆಲ ಪ್ರಮುಖ ಆಟಗಾರರಿಗೆ ಅಗತ್ಯವಿರುವ ವಿಶ್ರಾಂತಿ ನೀಡಿ, ಬೆಂಚ್ ಬಲ ಪರೀಕ್ಷಿಸಿಕೊಳ್ಳಲು ಚೆನ್ನೈಗಿದು ಉತ್ತಮ ಸಮಯ. ಮತ್ತೊಂದೆಡೆ ದಿಗ್ಗಜ ರಿಕಿ ಪಾಂಟಿಂಗ್‌ರನ್ನು ಕೋಚ್ ಆಗಿ ನೇಮಿಸಿಕೊಂಡು ಸದೃಢ ತಂಡ ಕಟ್ಟಿದರೂ, ಡೆಲ್ಲಿ ಅದೃಷ್ಟ ಮಾತ್ರ ಬದಲಾಗಲಿಲ್ಲ. ಆದರೆ ಡೆಲ್ಲಿ ಶ್ರೇಯಸ್ ಅಯ್ಯರ್, ರಿಶಭ್ ಪಂತ್, ಪೃಥ್ವಿ ಶಾ, ಅಭಿಷೇಕ್ ಶರ್ಮಾ, ನೇಪಾಳದ ಸಂದೀಪ್ ಲಮಿಚ್ಚಾನೆಯಂತಹ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ತಂಡ ಕೊನೆ 2 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿ, ತಲೆಎತ್ತಿಕೊಂಡು ಈ ಆವೃತ್ತಿಗೆ ವಿದಾಯ ಹೇಳಲು ಎದುರು ನೋಡುತ್ತಿದೆ. 

click me!