ಕ್ರಿಕೆಟ್ ಸೀಕ್ರೇಟ್ಸ್: ಜೂನ್ 24 ಇಂದು ವೇಗಿಗಳ ಜನ್ಮದಿನ..!

First Published Jun 24, 2018, 4:26 PM IST
Highlights

ಜೂನ್ 24 ಎರಡು ಪ್ರಮುಖ ವೇಗಿಗಳ ಜನ್ಮದಿನವಾಗಿದೆ. 

ಬೆಂಗಳೂರು[ಜೂ.24]: ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ...

ಜೂನ್ 24 ಎರಡು ಪ್ರಮುಖ ವೇಗಿಗಳ ಜನ್ಮದಿನವಾಗಿದೆ. 

ಸ್ಟುವರ್ಟ್ ಬ್ರಾಡ್: 1986- ಜೂನ್ 24


ಹಾಲಿ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಪುತ್ರ ಸ್ಟುವರ್ಟ್ ಬ್ರಾಡ್’ಗಿಂದು 32ನೇ ಹುಟ್ಟುಹಬ್ಬದ ಸಂಭ್ರಮ. ಇಂಗ್ಲೆಂಡ್ ತಂಡದ ವೇಗದ ಬೌಲರ್ ಬ್ರಾಡ್ ಕೇವಲ 118 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ ಕಬಳಿಸುವ ಮೂಲಕ ಆಂಗ್ಲ ತಂಡ ಯಶಸ್ವಿ ಬೌಲರ್’ಗಳಲ್ಲಿ ಒಬ್ಬರು ಎನಿಸಿದ್ದಾರೆ.

ಇಂಗ್ಲೆಂಡ್’ನಲ್ಲಿ 2014ರಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ವರುಣ್ ಆ್ಯರೋನ್ ಬೌನ್ಸರ್ ಎಸೆತ ಬ್ರಾಡ್ ಮೂಗಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಮಾತ್ರವಲ್ಲದೇ ತಿಂಗಳುಗಳ ಕಾಲ ಕ್ರಿಕೆಟ್’ನಿಂದ ದೂರ ಉಳಿದಿದ್ದರು.

2015ರ ಆಷಸ್ ಟೂರ್ನಿಯ ಟ್ರೆಂಟ್ ಬ್ರಿಡ್ಜ್’ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ   ಬ್ರಾಡ್ 15 ರನ್ ನೀಡಿ 8 ವಿಕೆಟ್ ಕಬಳಿಸಿದ್ದು ಬ್ರಾಡ್ ಸ್ಮರಣೀಯ ಇನ್ನಿಂಗ್ಸ್’ಗಳಲ್ಲಿ ಒಂದು. ಇನ್ನು ಬ್ರಾಡ್ ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳಂತೂ ಮರೆಯಲು ಸಾಧ್ಯವಿಲ್ಲ. 2007ರ ಟಿ20 ವಿಶ್ವಕಪ್’ನಲ್ಲಿ ಯುವರಾಜ್ ಸಿಂಗ್ ಇದೇ ಬ್ರಾಡ್’ಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು.

ವೆರ್ನಾನ್ ಫಿಲಾಂಡರ್: 24 ಜೂನ್ 1985

ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ವೆರ್ನಾನ್ ಫಿಲಾಂಡರ್’ಗಿಂದು 33ನೇ ಹುಟ್ಟುಹಬ್ಬದ ಸಂಭ್ರಮ. ತನ್ನ 22ನೇ ಹುಟ್ಟುಹಬ್ಬದಂದೇ ಐರ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಫಿಲಾಂಡರ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. 

ಇನ್ನು 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಫಿಲಾಂಡರ್ ಆ ಪಂದ್ಯದಲ್ಲೂ ತಮ್ಮ ಕೈಚಳಕ ತೋರಿಸಿದ್ದರು. ಎರಡನೇ ಇನ್ನಿಂಗ್ಸ್’ನಲ್ಲಿ 15 ರನ್ ನೀಡಿ 5 ವಿಕೆಟ್ ಕಬಳಿಸುವುದರೊಂದಿಗೆ ಆಸ್ಟ್ರೇಲಿಯಾ ತಂಡ ಕೇವಲ 47ರನ್ ಗಳಿಗೆ ಅಲೌಟ್ ಮಾಡುವಲ್ಲಿ ಪ್ರಮುಖ ಪಾತ್ರಹಿಸಿದ್ದರು. ಇದು 1902ರ ಬಳಿಕ ಆಸ್ಟ್ರೇಲಿಯಾ ಕಲೆಹಾಕಿದ ಕನಿಷ್ಟ ಸ್ಕೋರ್ ಆಗಿದೆ. ಇದರ ಜತೆಗೆ ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.

ಇನ್ನು 2018ರಲ್ಲಿ ಜೋಹಾನ್ಸ್’ಬರ್ಗ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 51 ರನ್ ನೀಡಿ 9 ವಿಕೆಟ್ ಕಬಳಿಸಿರುವುದು ವೈಯುಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಫಿಲಾಂಡರ್ ಟೆಸ್ಟ್’ನಲ್ಲಿ 204, ಏಕದಿನ ಕ್ರಿಕೆಟ್’ನಲ್ಲಿ 41 ಹಾಗೂ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 514 ವಿಕೆಟ್ ಕಬಳಿಸಿದ್ದಾರೆ
 

click me!