ಟೀಂ ಇಂಡಿಯಾ ಎದುರು ಕ್ರಿಕೆಟ್’ಗೆ ಗುಡ್’ಬೈ ಹೇಳಿದ 4 ದಿಗ್ಗಜರಿವರು

By Web DeskFirst Published Sep 6, 2018, 3:49 PM IST
Highlights

ಇಂಗ್ಲೆಂಡ್ ಟೆಸ್ಟ್ ತಂಡದ ಪರ ಗರಿಷ್ಠ ರನ್ ಸಿಡಿಸಿದ ಅಲಿಸ್ಟರ್ ಕುಕ್ ಇದೀಗ ಭಾರತ ವಿರುದ್ಧ ವಿದಾಯದ ಪಂದ್ಯವನ್ನಾಡುತ್ತಿದ್ದಾರೆ. 2006ರಲ್ಲಿ ಭಾರತ ವಿರುದ್ಧವೇ ಪದಾರ್ಪಣಾ ಪಂದ್ಯವನ್ನಾಡಿದ್ದ ಕುಕ್ ಇದೀಗ ಟೀಂ ಇಂಡಿಯಾ ವಿರುದ್ಧವೇ ವಿದಾಯದ ಪಂದ್ಯವನ್ನಾಡುತ್ತಿರುವುದು ವಿಶೇಷ.

ಬೆಂಗಳೂರು[ಸೆ.06]: ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಕ್ರಿಕೆಟ್’ಗೆ ತನ್ನದೇಯಾದ ಮಹತ್ವದ ಸ್ಥಾನವಿದೆ. ಕೌಶಲ್ಯ, ತಾಂತ್ರಿಕತೆ, ತಾಳ್ಮೆಯ ಸಮನ್ವಯತೆಯೇ ಟೆಸ್ಟ್ ಕ್ರಿಕೆಟ್’ನ ನಿಜವಾದ ಬ್ಯೂಟಿ. ಈ ಸಾಂಪ್ರದಾಯಿಕ ಕ್ರಿಕೆಟ್’ನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಟೆಸ್ಟ್ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಅಂತಹ ದಿಗ್ಗಜರ ಪೈಕಿ ಕೆಲವು ಆಟಗಾರರು ಭಾರತ ವಿರುದ್ಧ ವಿದಾಯ ಪಂದ್ಯಗಳನ್ನಾಡಿ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಅದಕ್ಕೀಗ ಹೊಸ ಸೇರ್ಪಡೆ, ಇಂಗ್ಲೆಂಡ್ ಟೆಸ್ಟ್ ತಂಡದ ಪರ ಗರಿಷ್ಠ ರನ್ ಸಿಡಿಸಿದ ಅಲಿಸ್ಟರ್ ಕುಕ್ ಇದೀಗ ಭಾರತ ವಿರುದ್ಧ ವಿದಾಯದ  ಪಂದ್ಯವನ್ನಾಡುತ್ತಿದ್ದಾರೆ. 2006ರಲ್ಲಿ ಭಾರತ ವಿರುದ್ಧವೇ ಪದಾರ್ಪಣಾ ಪಂದ್ಯವನ್ನಾಡಿದ್ದ ಕುಕ್ ಇದೀಗ ಟೀಂ ಇಂಡಿಯಾ ವಿರುದ್ಧವೇ ವಿದಾಯದ
ಪಂದ್ಯವನ್ನಾಡುತ್ತಿರುವುದು ವಿಶೇಷ.

ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ವಿರುದ್ಧವೇ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ನಾಲ್ವರು ದಿಗ್ಗಜರ ಪಟ್ಟಿ ನಿಮ್ಮ ಮುಂದೆ..

4. ಸ್ಟೀವ್ ವಾ:


ಅದ್ಭುತ ಬ್ಯಾಟಿಂಗ್ ಹಾಗೂ ಯಶಸ್ವಿ ನಾಯಕತ್ವದ ಮೂಲಕ ಆಸ್ಟ್ರೇಲಿಯಾ ತಂಡ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡಿದ್ದ ಸ್ಟೀವ್ ವಾ 90ರ ದಶಕದಲ್ಲಿ ರನ್ ಮಷೀನ್ ಆಗಿ ಗುರುತಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್’ನಲ್ಲಿ 10 ಸಾವಿರಕ್ಕೂ ಹೆಚ್ಚು[10,927] ರನ್ ಕಲೆಹಾಕಿದ 12 ಬ್ಯಾಟ್ಸ್’ಮನ್’ಗಳ ಪೈಕಿ ಸ್ಟೀವ್ ವಾ ಕೂಡಾ ಒಬ್ಬರು. 
ಆಸೀಸ್ ಪರ 168 ಟೆಸ್ಟ್ ಪಂದ್ಯಗಳನ್ನಾಡಿದ್ದ ಸ್ಟೀವ್ ವಾ 2004ರಲ್ಲಿ ಭಾರತದ ವಿರುದ್ಧ ವಿದಾಯದ ಪಂದ್ಯವನ್ನಾಡಿದ್ದರು. ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸ್ಟೀವ್ ವಾ ಕ್ರಮವಾಗಿ 40 ಹಾಗೂ 80 ರನ್ ಸಿಡಿಸಿದ್ದರು.

3. ಆ್ಯಡಂ ಗಿಲ್’ಕ್ರಿಸ್ಟ್:


ಟೆಸ್ಟ್ ಕ್ರಿಕೆಟ್ ಕಂಡ ಅತ್ಯದ್ಭುತ ವಿಕೆಟ್’ಕೀಪರ್ ಬ್ಯಾಟ್ಸ್’ಮನ್’ಗಳ ಪೈಕಿ ಆ್ಯಡಂ ಗಿಲ್’ಕ್ರಿಸ್ಟ್ ಕೂಡಾ ಒಬ್ಬರು. ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದ ಗಿಲ್ಲಿ, 96 ಟೆಸ್ಟ್ ಪಂದ್ಯಗಳನ್ನಾಡಿ 5750 ರನ್ ಸಿಡಿಸಿದ್ದರು.
2008ರ ಜನವರಿ 24-28ರ ವರೆಗೆ ಅಡಿಲೇಡ್’ನಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್ ಪಂದ್ಯ ಗಿಲ್ಲಿ ಪಾಲಿಗಿನ ವಿದಾಯದ ಪಂದ್ಯವಾಗಿತ್ತು. ಕೊನೆಯ ಪಂದ್ಯದಲ್ಲಿ ಗಿಲ್’ಕ್ರಿಸ್ಟ್ ಕೇವಲ 14 ರನ್ ಮಾತ್ರ ಬಾರಿಸಿದ್ದರು.

2. ಜ್ಯಾಕ್ ಕಾಲಿಸ್:


ದಕ್ಷಿಣ ಆಫ್ರಿಕಾ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಅಪರೂಪದ ಆಲ್ರೌಂಡರ್ ಎಂದರೆ ಅದು ಜ್ಯಾಕ್ ಕಾಲಿಸ್. ಅತ್ಯದ್ಭುತ ಬ್ಯಾಟಿಂಗ್ ಹಾಗೂ ಕರಾರುವಕ್ಕಾದ ಬೌಲಿಂಗ್ ಮೂಲಕ ಹರಿಣಗಳ ಪಡೆಗೆ ಹಲವಾರು ಸ್ಮರಣೀಯ ಗೆಲುವು ತಂದಿತ್ತ ಕಾಲಿಸ್ ವಿಶ್ವ ಕ್ರಿಕೆಟ್’ನ ದಿಗ್ಗಜ ಆಲ್ರೌಂಡರ್’ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.
ಬ್ಯಾಟಿಂಗ್’ನಲ್ಲಿ 13,289 ರನ್ ಹಾಗೂ ಬೌಲಿಂಗ್’ನಲ್ಲಿ 292 ವಿಕೆಟ್ ಕಬಳಿಸಿರುವ ಕಾಲಿಸ್ ಏಕದಿನ ಕ್ರಿಕೆಟ್’ನಲ್ಲೂ 10 ಸಾವಿರ ಪ್ಲಸ್ ರನ್ ಹಾಗೂ 250+ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ 10 ಸಾವಿರ ಪ್ಲಸ್ ರನ್ ಹಾಗೂ 250+ ವಿಕೆಟ್ ಕಬಳಿಸಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ. ಭಾರತ ವಿರುದ್ಧ ಡರ್ಬನ್’ನಲ್ಲಿ ವಿದಾಯದ ಪಂದ್ಯವನ್ನಾಡಿದ ಕಾಲಿಸ್, ನಿವೃತ್ತಿಯ ಪಂದ್ಯದಲ್ಲಿ ವೃತ್ತಿಜೀವನದ 45ನೇ ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡರು.

1. ಕುಮಾರ ಸಂಗಕ್ಕರ:


ಶ್ರೀಲಂಕಾ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟ್ಸ್’ಮನ್’ಗಳಲ್ಲಿ ಕುಮಾರ ಸಂಗಕ್ಕರ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದೂವರೆ ದಶಕಗಳ ಕಾಲ ದ್ವೀಪ ರಾಷ್ಟ್ರದ ಆಧಾರಸ್ತಂಭವಾಗಿದ್ದ ಸಂಗಾ 2015ರ ಆಗಸ್ಟ್’ನಲ್ಲಿ ಭಾರತದ ವಿರುದ್ಧ ವಿದದಾಯದ ಪಂದ್ಯವನ್ನಾಡಿದ್ದರು.
ಒಟ್ಟು 134 ಟೆಸ್ಟ್ ಪಂದ್ಯಗಳಲ್ಲಿ 12,400 ರನ್ ಸಿಡಿಸಿರುವ ಸಂಗಕ್ಕರ, ಪಿ. ಸಾರಾ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ಪಂದ್ಯದಲ್ಲಿ ಸಂಗಾ ಕ್ರಮವಾಗಿ 18 ಹಾಗೂ 32 ರನ್ ಚಚ್ಚಿದ್ದರು. 

click me!