ಶ್ರೀಲಂಕಾದ ದಿಗ್ಗಜ ಬೌಲರ್ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ವಿದಾಯದ ಪಂದ್ಯದಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. ಅಲ್ಲದೇ ಅನಿಲ್ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..
ಕೊಲಂಬೊ[ಜು.27]: ಶ್ರೀಲಂಕಾ ತಂಡವು 91 ರನ್’ಗಳಿಂದ ಬಾಂಗ್ಲಾದೇಶವನ್ನು ಮಣಿಸುವುದರೊಂದಿಗೆ ಲಸಿತ್ ಮಾಲಿಂಗ ಅವರಿಗೆ ಗೆಲುವಿನ ವಿದಾಯ ನೀಡಿದೆ. ಇನ್ನು ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸುವುದರೊಂದಿಗೆ ಮಾಲಿಂಗ ಅಪರೂಪದ ದಾಖಲೆ ಬರೆದಿದ್ದಾರೆ.
ಕೊನೆ ಏಕದಿನ ಆಡಲು ಸಜ್ಜಾದ ಮಾಲಿಂಗ!
undefined
ಹೌದು, ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಮಾಲಿಂಗ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ನಿಗದಿತ 50 ಓವರ್’ಗಳಲ್ಲಿ 8 ವಿಕೆಟ್ ಕಳೆದುಕೊಂಡು 314 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಮಾಲಿಂಗ ಆರಂಭದಲ್ಲೇ ಶಾಕ್ ನೀಡಿದರು. ಮೊದಲ ಓವರ್’ನಲ್ಲೇ ತಮೀಮ್ ಇಕ್ಬಾಲ್ ಬಲಿ ಪಡೆದ ಮಾಲಿಂಗ, ಆ ಬಳಿಕ ತಾವೆಸೆದ 5ನೇ ಓವರ್’ನಲ್ಲಿ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಸೌಮ್ಯ ಸರ್ಕಾರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ಇನ್ನು ಮಾಲಿಂಗ ಎಸೆದ 10ನೇ ಓವರ್’ನಲ್ಲಿ ಮುಸ್ತಾಫಿಜುರ್ ರಹಮಾನ್ ವಿಕೆಟ್ ಪಡೆಯುವುದರೊಂದಿಗೆ ಬಾಂಗ್ಲಾದೇಶ ಇನಿಂಗ್ಸ್’ಗೆ ತೆರೆ ಎಳೆದರು. ಇದರೊಂದಿಗೆ 338 ವಿಕೆಟ್ ಪಡೆಯುವ ಮೂಲಕ ಕನ್ನಡಿಗ ಅನಿಲ್ ಕುಂಬ್ಳೆ ಹಿಂದಿಕ್ಕಿ, ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ 9ನೇ ಬೌಲರ್ ಎನ್ನುವ ದಾಖಲೆ ಬರೆದರು. ಈ ಮೊದಲು ಅನಿಲ್ ಕುಂಬ್ಳೆ 337 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದರು. ಇದೀಗ ಮಾಲಿಂಗ 9ನೇ ಸ್ಥಾನಕ್ಕೇರಿದ್ದು, ಕುಂಬ್ಳೆ 10ನೇ ಸ್ಥಾನಕ್ಕಿಳಿದಿದ್ದಾರೆ.
ಇನ್ನು ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳೀಧರನ್ 534 ವಿಕೆಟ್’ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಾಸೀಂ ಅಕ್ರಂ 502 ವಿಕೆಟ್’ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.