
ಮುಂಬೈ[ಅ.29] ರೋಹಿತ್ ಶರ್ಮಾ, ಅಂಬಟಿ ರಾಯುಡು ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 377 ರನ್ ಕಲೆಹಾಕಿದ್ದು ವೆಸ್ಟ್ ಇಂಡೀಸ್ ತಂಡಕ್ಕೆ ಕಠಿಣ ಗುರಿ ನೀಡಿದೆ.
ಮುಂಬೈನ ಬಾರ್ಬೋರ್ನ್ಸ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಧವನ್-ರೋಹಿತ್ ಜೋಡಿ ಮೊದಲ ವಿಕೆಟ್’ಗೆ 71 ರನ್’ಗಳ ಭರ್ಜರಿ ಜತೆಯಾಟವಾಡಿತು. ಈ ಜೋಡಿ 3,920+ ರನ್ ಕಲೆಹಾಕುವ ಮೂಲಕ ಭಾರತ ಪರ ಗರಿಷ್ಠ ರನ್ ಕಲೆಹಾಕಿದ ಎರಡನೇ ಆರಂಭಿಕ ಜೋಡಿ ಎನ್ನುವ ಕೀರ್ತಿಗೆ ಪಾತ್ರರಾದರು. ಈ ಮೂಲಕ ಸಚಿನ್-ಸೆಹ್ವಾಗ್[3,919] ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.
2 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನೊಂದಿಗೆ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಧವನ್ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ವಿರಾಟ್ ಕೊಹ್ಲಿ[16] ಕೂಡಾ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ರೋಹಿತ್ ಶರ್ಮಾ-ಅಂಬಟಿ ರಾಯುಡು ವಿಂಡೀಸ್ ಪಡೆಯನ್ನು ಮನಬಂದಂತೆ ದಂಡಿಸಿದರು.
ಕೆರಿಬಿಯನ್ನರನ್ನು ಕಾಡಿದ ಶರ್ಮಾ-ರಾಯುಡು ಜೋಡಿ:
ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುವಾಗ ಭಾರತ 101 ಗಳಿಸಿತ್ತು. ಈ ವೇಳೆ 3ನೇ ವಿಕೆಟ್’ಗೆ ಜತೆಯಾದ ಅಂಬಟಿ ರಾಯುಡು- ರೋಹಿತ್ ಶರ್ಮಾ ಜೋಡಿ ವಿಂಡೀಸ್ ಬೌಲರ್’ಗಳ ಮೇಲೆ ಸವಾರಿ ನಡೆಸಿದರು. ಆರಂಭದಲ್ಲಿ ಎಚ್ಚರಿಕೆಯ ಜತೆಯಾಟವಾಡಿದ ಈ ಜೋಡಿ ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿತು. ರೋಹಿತ್ ವೃತ್ತಿ ಜೀವನದ 21ನೇ ಶತಕ ಸಿಡಿಸಿ ಮಿಂಚಿದರು. 97 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್ ಆಬಳಿಕ ಸ್ಫೋಟಕ ಆಟಕ್ಕೆ ಒತ್ತು ನೀಡಿದರು. ಈ ಜೋಡಿ ಮೂರನೇ ವಿಕೆಟ್’ಗೆ 211 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು. ರೋಹಿತ್ ಒಂದು ಹಂತದಲ್ಲಿ ಇನ್ನೊಂದು ದ್ವಿಶತಕ ಸಿಡಿಸಬಹುದೇನೋ ಎಂದು ನಿರೀಕ್ಷಿಸಲಾಗಿತ್ತು. ಆ್ಯಂಡ್ರೆ ನರ್ಸ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್[162] ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ರೋಹಿತ್ ವಿಕೆಟ್ ಪತನದ ನಂತರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅಂಬಟಿ ರಾಯುಡು ವೃತ್ತಿಜೀವನದ ಮೂರನೇ ಶತಕ ಸಿಡಿಸಿದರು. ಈ ಮೂಲಕ ನಾಲ್ಕನೇ ಕ್ರಮಾಂಕಕ್ಕೆ ತಾನು ಫಿಟ್ ಇರುವುದಾಗಿ ಮತ್ತೊಮ್ಮೆ ಸಾಬೀತು ಮಾಡಿದರು. ರಾಯುಡು ಕೇವಲ 81 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ 100 ಬಾರಿಸಿ ರನೌಟ್ ಆದರು.
ಕೊನೆಯಲ್ಲಿ ಧೋನಿ[22], ಕೇದಾರ್ ಜಾದವ್ 16 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 370ರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ: 377/5
ರೋಹಿತ್ ಶರ್ಮಾ: 162
ಅಂಬಟಿ ರಾಯುಡು: 100
ಕೀಮರ್ ರೋಚ್: 74/2
[* ವಿವರ ಅಪೂರ್ಣ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.