ಇಂಡೋ-ವಿಂಡೀಸ್ ಫೈಟ್: ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

Published : Nov 01, 2018, 10:13 AM IST
ಇಂಡೋ-ವಿಂಡೀಸ್ ಫೈಟ್: ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ಸಾರಾಂಶ

ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಸಹ ಇದ್ದು, ಒಂದೊಮ್ಮೆ ಪಂದ್ಯ ರದ್ದಾದರೂ ಭಾರತಕ್ಕೇನೂ ಸಮಸ್ಯೆಯಿಲ್ಲ. ಆದರೆ 30 ವರ್ಷಗಳ ಬಳಿಕ ಏಕದಿನ ಪಂದ್ಯ ವೀಕ್ಷಿಸಲು ಕಾತರದಿಂದ ಕಾಯುತ್ತಿರುವ ಇಲ್ಲಿನ ಕ್ರಿಕೆಟ್‌ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಆಟವನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಗುವಂತೆ ಪ್ರಾರ್ಥಿಸುತ್ತಿದ್ದಾರೆ.

ತಿರುವನಂತಪುರಂ[ನ.01]: ವಿಂಡೀಸ್‌ ವಿರುದ್ಧ 5ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಗುರುವಾರ ಭಾರತ ಇಲ್ಲಿನ ಗ್ರೀನ್‌ಫೀಲ್ಡ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದ್ದು, ತವರಿನಲ್ಲಿ ಸತತ 6ನೇ ಏಕದಿನ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. 3 ದಶಕಗಳ ಬಳಿಕ ನಗರದಲ್ಲಿ ಏಕದಿನ ಪಂದ್ಯ ನಡೆಯಲಿದ್ದು, ಅಭಿಮಾನಿಗಳ ಪಾಲಿನ ಈ ಐತಿಹಾಸಿಕ ದಿನವನ್ನು ಸ್ಮರಣೀಯಗೊಳಿಸಲು ವಿರಾಟ್‌ ಕೊಹ್ಲಿ ಕಾತರಿಸುತ್ತಿದೆ.

2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತ ಬಳಿಕ, ಭಾರತ ತವರಿನಲ್ಲಿ ಸತತ 5 ಏಕದಿನ ಸರಣಿಗಳನ್ನು ಗೆದ್ದಿದೆ. ನ್ಯೂಜಿಲೆಂಡ್‌, ಇಂಗ್ಲೆಂಡ್‌, ಆಸ್ಪ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಸರಣಿ ಜಯಿಸಿದ್ದ ಭಾರತ, ಈಗ ವಿಂಡೀಸ್‌ ವಿರುದ್ಧವೂ ಜಯಭೇರಿ ಬಾರಿಸಲು ಉತ್ಸುಕಗೊಂಡಿದೆ. ಸರಣಿಯಲ್ಲಿ 2-1 ಅಜೇಯ ಮುನ್ನಡೆ ಸಾಧಿಸಿರುವ ಭಾರತ, ವಿಂಡೀಸ್‌ನಿಂದ ಪ್ರಬಲ ಪೈಪೋಟಿ ಎದುರಾಗಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮೊದಲ 3 ಪಂದ್ಯಗಳಲ್ಲಿ ನೇರಾನೇರ ಪೈಪೋಟಿ ಕಂಡುಬಂದರೂ, 4ನೇ ಏಕದಿನದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಕೊಹ್ಲಿ ಪಡೆಗೆ ಅಧಿಕಾರಯುತ ಗೆಲುವು ದೊರೆತಿತ್ತು.

ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಸಹ ಇದ್ದು, ಒಂದೊಮ್ಮೆ ಪಂದ್ಯ ರದ್ದಾದರೂ ಭಾರತಕ್ಕೇನೂ ಸಮಸ್ಯೆಯಿಲ್ಲ. ಆದರೆ 30 ವರ್ಷಗಳ ಬಳಿಕ ಏಕದಿನ ಪಂದ್ಯ ವೀಕ್ಷಿಸಲು ಕಾತರದಿಂದ ಕಾಯುತ್ತಿರುವ ಇಲ್ಲಿನ ಕ್ರಿಕೆಟ್‌ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಆಟವನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಗುವಂತೆ ಪ್ರಾರ್ಥಿಸುತ್ತಿದ್ದಾರೆ.

ವಿಂಡೀಸ್‌ ವಿರುದ್ಧ ಟಿ20 ಸರಣಿಗೂ ಮುನ್ನ ಭಾರತ ತನ್ನ ಲಯ ಕಾಪಾಡಿಕೊಳ್ಳಲು ಎದುರು ನೋಡುತ್ತಿದೆ. ಆರಂಭಿಕರಾದ ಶಿಖರ್‌ ಧವನ್‌ ಹಾಗೂ ರೋಹಿತ್‌ ಶರ್ಮಾ ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭ ಒದಗಿಸಲು ಎದುರು ನೋಡುತ್ತಿದ್ದಾರೆ. ಅಪರೂಪ ಎಂಬಂತೆ ಕಳೆದ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, ಶತಕದೊಂದಿಗೆ ಸರಣಿ ಮುಕ್ತಾಯಗೊಳಿಸುವ ಉತ್ಸಾಹದಲ್ಲಿದ್ದಾರೆ. 4ನೇ ಕ್ರಮಾಂಕದಲ್ಲಿ ಶತಕ ಬಾರಿಸಿ ತಂಡದ ನಂಬಿಕೆ ಉಳಿಸಿಕೊಂಡಿರುವ ಅಂಬಟಿ ರಾಯುಡು, ವಿಶ್ವಕಪ್‌ ವರೆಗೂ ತಂಡದಲ್ಲಿ ಇರಲಿದ್ದಾರೆ ಎಂದು ನಾಯಕ ಕೊಹ್ಲಿ ಬಹಿರಂಗವಾಗಿ ಹೇಳಿದ್ದಾರೆ. ನಾಯಕನ ಬೆಂಬಲ, ಖಂಡಿತವಾಗಿಯೂ ರಾಯುಡು ಆತ್ಮವಿಶ್ವಾಸ ಹೆಚ್ಚಿಸಿರಲಿದೆ.

ಮಧ್ಯಮ ಕ್ರಮಾಂಕದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಧೋನಿ ಮಿಂಚಿನ ವೇಗದಲ್ಲಿ ಸ್ಟಂಪಿಂಗ್‌ಗಳನ್ನು ಮಾಡುತ್ತಾ ಎಲ್ಲರನ್ನೂ ಬೆರಗಾಗಿಸುತ್ತಿದ್ದಾರೆ ಹೊರತು, ಅವರ ಬ್ಯಾಟಿಂಗ್‌ ಅಭಿಮಾನಿಗಳಿಗೆ ಬೇಸರ ಮೂಡಿಸುತ್ತಿದೆ. ರನ್‌ ಗಳಿಸಲು ಪರದಾಡುತ್ತಿರುವ ಮಾಜಿ ನಾಯಕನ ಆಯ್ಕೆ ಬಗ್ಗೆ ಅಪಸ್ವರ ಹೆಚ್ಚುತ್ತಿದೆ. ಆದರೆ ಈ ಪಂದ್ಯದಲ್ಲಿ ಒಂದು ರನ್‌ ಗಳಿಸಿದರೆ ಧೋನಿ, ಭಾರತದ ಪರ ಏಕದಿನದಲ್ಲಿ 10,000 ರನ್‌ ಪೂರೈಸಲಿದ್ದಾರೆ. ಅವರು ಏಷ್ಯಾ ಇಲೆವೆನ್‌ ಪರ 124 ರನ್‌ ಗಳಿಸಿದ್ದರು.

ಜಸ್ಫ್ರೀತ್ ಬುಮ್ರಾ ವಾಪಸಾಗಿದ್ದು, ತಂಡದ ಬೌಲಿಂಗ್‌ ಬಲವನ್ನು ದುಪ್ಪಟ್ಟುಗೊಳಿಸಿದೆ. ಯುವ ವೇಗಿ ಖಲೀಲ್‌ ಅಹ್ಮದ್‌ ಭರವಸೆ ಮೂಡಿಸಿದ್ದಾರೆ. ತನ್ನ ಮುಂಚೂಣಿ ವೇಗಿ ಭುವನೇಶ್ವರ್‌ ಕುಮಾರ್‌ ಲಯಕ್ಕೆ ಮರಳಲಿದ್ದಾರೆ ಎನ್ನುವ ವಿಶ್ವಾಸ ಕೊಹ್ಲಿಗಿದೆ. ಸ್ಪಿನ್ನರ್‌ಗಳು ವಿಂಡೀಸ್‌ಗೆ ಕಠಿಣ ಸವಾಲು ಹಾಕುತ್ತಿದ್ದು, ಮತ್ತೊಮ್ಮೆ ಕುಲ್ದೀಪ್‌ ಯಾದವ್‌, ರವೀಂದ್ರ ಜಡೇಜಾ ಮೇಲೆ ತಂಡ ಅವಲಂಬಿತಗೊಂಡಿದೆ. ಕಳೆದ ಪಂದ್ಯದಲ್ಲಿ ಬೆಂಚ್‌ ಕಾಯ್ದಿದ್ದ ಯಜುವೇಂದ್ರ ಚಹಲ್‌, ಈ ಪಂದ್ಯದಲ್ಲೂ ಹೊರಗುಳಿಯುವ ಸಾಧ್ಯತೆ ಹೆಚ್ಚು.

ಮತ್ತೊಂದೆಡೆ ಟೆಸ್ಟ್‌ ಸರಣಿಯ ವೈಫಲ್ಯದ ಬಳಿಕ ಏಕದಿನ ಸರಣಿಯಲ್ಲಿ ವಿಂಡೀಸ್‌, ಸುಧಾರಿತ ಪ್ರದರ್ಶನ ನೀಡುತ್ತಿದೆ. ಯುವ ಆಟಗಾರರಾದ ಶಿಮ್ರೊನ್‌ ಹೆಟ್ಮೇಯರ್‌, ಶಾಯ್‌ ಹೋಪ್‌, ನಾಯಕ ಜೇಸನ್‌ ಹೋಲ್ಡರ್‌ ಭಾರತದ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ. ಉಳಿದವರಿಂದ ಜವಾಬ್ದಾರಿಯುತ ಆಟ ಮೂಡಿಬಂದರೆ, ಸರಣಿಯಲ್ಲಿ ಸಮಬಲ ಸಾಧಿಸುವುದು ವಿಂಡೀಸ್‌ಗೆ ಕಷ್ಟವೇನೂ ಆಗುವುದಿಲ್ಲ. ಅಂತಿಮ ಪಂದ್ಯದಲ್ಲಿ ಜಯಿಸಿದರೆ, ವಿಶ್ವಕಪ್‌ಗೂ ಮುನ್ನ ವಿಂಡೀಸ್‌ ಆತ್ಮವಿಶ್ವಾಸಕ್ಕೆ ಬಲಬಂದಂತಾಗಲಿದೆ. ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರಿರುವ ಆಲ್ರೌಂಡರ್‌ ಆಶ್ಲೆ ನರ್ಸ್‌, ಗಾಯಗೊಂಡಿದ್ದು ಈ ಪಂದ್ಯದಲ್ಲಿ ಅಲಭ್ಯರಾಗುವ ಸಾಧ್ಯತೆ ಇದೆ.

ಸಂಭವನೀಯ ತಂಡಗಳು

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಅಂಬಟಿ ರಾಯುಡು, ಕೇದಾರ್‌ ಜಾಧವ್‌, ಎಂ.ಎಸ್‌.ಧೋನಿ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ಜಸ್ಪ್ರೀತ್ ಬುಮ್ರಾ.

ವಿಂಡೀಸ್‌: ಹೇಮ್‌ರಾಜ್‌ ಚಂದ್ರಪಾಲ್‌, ಕೀರನ್‌ ಪೋವೆಲ್‌, ಶಾಯ್‌ ಹೋಪ್‌, ಮರ್ಲಾನ್‌ ಸ್ಯಾಮುಯಲ್ಸ್‌, ಶಿಮ್ರೊನ್‌ ಹೆಟ್ಮೇಯರ್‌, ಜೇಸನ್‌ ಹೋಲ್ಡರ್‌, ಫ್ಯಾಬಿಯನ್‌ ಆಲೆನ್‌, ದೇವೇಂದ್ರ ಬಿಶೂ, ಕೀಮೋ ಪೌಲ್‌, ಕೀಮಾರ್‌ ರೋಚ್‌, ಒಬೆಡ್‌ ಮೆಕ್ಕೊಯ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1

ಪಿಚ್‌ ರಿಪೋರ್ಟ್‌

ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ಇದು ಚೊಚ್ಚಲ ಏಕದಿನ ಪಂದ್ಯ. ಇಲ್ಲಿ ನಡೆದಿರುವ ದೇಸಿ ಪಂದ್ಯಗಳಲ್ಲಿ ಉತ್ತಮ ಮೊತ್ತ ದಾಖಲಾಗಿವೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಎನಿಸಿದ್ದರೂ, ಮಳೆ ನಿರೀಕ್ಷೆ ಇದ್ದು ಮೋಡ ಕವಿದ ವಾತಾವರಣ ಇದ್ದಲ್ಲಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು.

3 ದಶಕಗಳ ಬಳಿಕ ಏಕದಿನ ಪಂದ್ಯ!

ತಿರುವನಂತಪುರಂ ಕೊನೆ ಬಾರಿಗೆ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿದ್ದು 1998ರಲ್ಲಿ. ಅದು ಇಲ್ಲಿನ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. 1984ರಲ್ಲಿ ಭಾರತ-ಆಸ್ಪ್ರೇಲಿಯಾ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 98ರಲ್ಲಿ ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿಂಡೀಸ್‌ 9 ವಿಕೆಟ್‌ ಜಯ ಸಾಧಿಸಿತ್ತು. ಗುರುವಾರದ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದ ಪಾಲಿಗೆ ಇದು ಚೊಚ್ಚಲ ಏಕದಿನ ಪಂದ್ಯ. 2017ರಲ್ಲಿ ಇಲ್ಲಿ ಭಾರತ-ನ್ಯೂಜಿಲೆಂಡ್‌ ನಡುವೆ ಟಿ20 ಪಂದ್ಯ ನಡೆದಿತ್ತು. ಆ ಪಂದ್ಯವನ್ನು ಭಾರತ 6 ರನ್‌ಗಳಿಂದ ಗೆದ್ದುಕೊಂಡಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ