Commonwealth Games 2022 ಟೇಬಲ್‌ ಟೆನಿಸ್‌: ಸೆಮೀಸ್‌ಗೆ ಪುರುಷರ ತಂಡ, ಮಹಿಳಾ ತಂಡ ಔಟ್‌

By Kannadaprabha News  |  First Published Aug 1, 2022, 9:43 AM IST

* ಕಾಮನ್‌ವೆಲ್ತ್‌ ಗೇಮ್ಸ್‌ನ ಟೇಬಲ್‌ ಟೆನಿಸ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮಿಶ್ರಫಲ
* ಪುರುಷರ ತಂಡ ಸೆಮೀಸ್‌ಗೆ ಲಗ್ಗೆ, ಮಹಿಳಾ ತಂಡಕ್ಕೆ ಶಾಕ್
* ಅಜೇಯವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಬ್ಯಾಡ್ಮಿಂಟನ್ ತಂಡ


ಬರ್ಮಿಂಗ್‌ಹ್ಯಾಮ್‌(ಆ.01): ಹಾಲಿ ಚಾಂಪಿಯನ್‌ ಭಾರತ, ಪುರುಷರ ಟೇಬಲ್‌ ಟೆನಿಸ್‌ ತಂಡ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದಲ್ಲಿ ಗೆದ್ದು ಅಂತಿಮ 4ರ ಸುತ್ತಿಗೇರಿತು. ಗುಂಪು ಹಂತದಲ್ಲಿ ಭಾರತ ತಂಡ ಬಾರ್ಬಡೊಸ್‌, ಸಿಂಗಾಪುರ ಮತ್ತು ಉತ್ತರ ಐರ್ಲೆಂಡ್‌ ವಿರುದ್ಧ 3-0 ಅಂತರದಲ್ಲಿ ಜಯಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಬಾಂಗ್ಲಾ ವಿರುದ್ಧ ಡಬಲ್ಸ್‌ ಪಂದ್ಯದಲ್ಲಿ ಹರ್ಮೀತ್‌ ದೇಸಾಯಿ ಮತ್ತು ಸತ್ಯನ್‌ ಜ್ಞಾನಶೇಖರನ್‌ ಗೆದ್ದರೆ, ಸಿಂಗಲ್ಸ್‌ ಪಂದ್ಯಗಳಲ್ಲಿ ಶರತ್‌ ಕಮಲ್‌ ಮತ್ತು ಸತ್ಯನ್‌ ಗೆಲುವು ಪಡೆದರು. ಇದೇ ವೇಳೆ ಮಹಿಳೆಯರ ತಂಡ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿದೆ. ಮಲೇಷ್ಯಾ ವಿರುದ್ಧ 3-2ರಲ್ಲಿ ಸೋತ ಭಾರತ ನಿರಾಸೆ ಅನುಭವಿಸಿತು.

ಬ್ಯಾಡ್ಮಿಂಟನ್‌: ಅಜೇಯವಾಗಿ ಕ್ವಾರ್ಟರ್‌ಗೇರಿದ ಭಾರತ ತಂಡ

Tap to resize

Latest Videos

ಬ್ಯಾಡ್ಮಿಂಟನ್‌ ಮಿಶ್ರ ತಂಡ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಭಾರತ ಅಜೇಯವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಶನಿವಾರ ರಾತ್ರಿ ನಡೆದ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ 4-1ರಲ್ಲಿ ಜಯಿಸಿತು. ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌, ಸಿಂಧು ಗೆದ್ದರೆ ಪುರುಷರ ಡಬಲ್ಸ್‌ನಲ್ಲಿ ಸುಮಿತ್‌-ಚಿರಾಗ್‌, ಮಿಶ್ರ ಡಬಲ್ಸ್‌ನಲ್ಲಿ ಸುಮಿತ್‌ ರೆಡ್ಡಿ-ಅಶ್ವಿನಿ ಪೊನ್ನಪ್ಪ ಗೆಲುವು ಪಡೆದರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಸೋಲುಂಡರು. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ದ.ಆಫ್ರಿಕಾ ಎದುರಾಗಲಿದೆ.

ಬಾಕ್ಸಿಂಗ್‌: ಕ್ವಾರ್ಟರ್‌ಗೆ ನಿಖಾತ್‌, ಲವ್ಲೀನಾ, ಶಿವ ಥಾಪ ಔಟ್‌

ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌ ಮತ್ತು ಒಲಿಂಪಿಕ್‌ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್‌ ತಮ್ಮ ತಮ್ಮ ವಿಭಾಗಗಳಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ನಿಖಾತ್‌ ಮೊಜಾಂಬಿಕ್‌ನ ಹೆಲೆನಾ ಇಸ್ಮಾಯಿಲ್‌ ವಿರುದ್ಧ ಸುಲಭ ಗಗೆಲುವು ಸಾಧಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಟ್ರಾಯ್‌ ಗಾರ್ಟನ್‌ ಎದುರಾಗಲಿದ್ದು, ಸೆಮೀಸ್‌ಗೇರಿದರೆ ಪದಕ ಖಚಿತವಾಗಲಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ದಾಖಲೆ ಬರೆದ ಅಚಿಂತಾ ಶೆಯುಲಿ!

ಇನ್ನು ಲವ್ಲೀನಾ ಮಹಿಳೆಯರ 70 ವಿಭಾಗದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆರಿಯಾನ ನಿಕೋಲ್ಸನ್‌ ವಿರುದ್ಧ 5-0 ಅಂತರದಲ್ಲಿ ಗೆದ್ದರು. ಲವ್ಲೀನಾಗೆ ಕ್ವಾರ್ಟರ್‌ನಲ್ಲಿ ವೇಲ್ಸ್‌ನ ರೋಸಿ ಎಕ್ಸೆಸ್‌ ಎದುರಾಗಲಿದ್ದಾರೆ. ಇದೇ ವೇಳೆ ಪುರುಷರ 57 ಕೆ.ಜಿ. ವಿಭಾಗದಲ್ಲಿ ಮೊಹಮದ್‌ ಹುಸ್ಮುದ್ದೀನ್‌ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರೆ, ಪುರುಷರ 63.5 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಶಿವ ಥಾಪ, ಸ್ಕಾಟ್ಲೆಂಡ್‌ನ ರೀಸ್‌ ಲಿಂಚ್‌ ವಿರುದ್ಧ 1-4ರಲ್ಲಿ ಸೋತು ಹೊರಬಿದ್ದರು.

ಮಹಿಳಾ ಹಾಕಿ: ಭಾರತಕ್ಕೆ ವೇಲ್ಸ್‌ ವಿರುದ್ಧ 3-1 ಜಯ

ಮೂರು ಪೆನಾಲ್ಟಿಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ ಭಾರತ ಮಹಿಳಾ ಹಾಕಿ ತಂಡ ‘ಎ’ ಗುಂಪಿನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ವೇಲ್ಸ್‌ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಭಾರತ 3-1 ಗೋಲುಗಳ ಜಯ ಸಾಧಿಸಿತು. ವಂದನಾ ಕಟಾರಿಯಾ ಎರಡು, ಗುರ್ಜಿತ್‌ ಕೌರ್‌ ಒಂದು ಗೋಲು ಬಾರಿಸಿದರು. ಮೊದಲ ಪಂದ್ಯದಲ್ಲಿ ಭಾರತ 5-0 ಅಂತರದಲ್ಲಿ ಘಾನಾ ವಿರುದ್ಧ ಗೆದ್ದಿತ್ತು.

100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 7ನೇ ಸ್ಥಾನ ಪಡೆದ ಶ್ರೀಹರಿ

ಭಾರತದ ಅಗ್ರ ಈಜುಪಟು, ಕರ್ನಾಟಕದ ಶ್ರೀಹರಿ ನಟರಾಜ್‌ ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಫೈನಲ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 21 ವರ್ಷದ ಶ್ರೀಹರಿ ಐತಿಹಾಸಿಕ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ 54.31 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪದಕ ರೇಸ್‌ನಿಂದ ಹೊರಬಿದ್ದರು. ತಮ್ಮ ವೈಯಕ್ತಿಕ ಶ್ರೇಷ್ಠ 53.77 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಸ್ಪರ್ಧೆ ಪೂರ್ಣಗೊಳಿಸಿದ್ದರೆ ಶ್ರೀಹರಿಗೆ ಚಿನ್ನ ದೊರೆಯುತ್ತಿತ್ತು.

ಇದೇ ವೇಳೆ 50 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಶ್ರೀಹರಿ ಸೆಮೀಸ್‌ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 25.22 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಒಟ್ಟಾರೆ 8ನೇ ಸ್ಥಾನ ಪಡೆದು ಅಂತಿಮ 4ರ ಸುತ್ತಿಗೇರಿದರು. 

click me!