
ನವದೆಹಲಿ: ಬಿಸಿಸಿಐ ಹಾಗೂ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಇಒ) ನಡುವಿನ ಕಿತ್ತಾಟ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸಿಒಎ ಸದಸ್ಯೆ ಡಯಾನ ಎಡುಲ್ಜಿ, ಐಪಿಎಲ್ ಚಾಂಪಿಯನ್ ತಂಡಕ್ಕೆ ತಾವು ಟ್ರೋಫಿ ಹಸ್ತಾಂತರಿಸಬೇಕಿತ್ತು, ಆದರೆ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ ಅಡ್ಡಗಾಲು ಹಾಕಿದರು ಎಂದು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ನಡೆದ ಐಪಿಎಲ್ ಫೈನಲ್'ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್'ನಿಂದ ಗೆದ್ದು ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಯಿತು. ಎಡುಲ್ಜಿ, ವಿಜೇತ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವ ಆಸೆ ಹೊಂದಿದ್ದರು. ಆದರೆ ಮೊತ್ತೊಬ್ಬ ಸಿಒಎ ಸದಸ್ಯ ಲೆಫ್ಟಿನೆಂಟ್ ಜರ್ನಲ್ ರವಿ ತೊಡ್ಗೆ, ನಿಯಮದ ಪ್ರಕಾರ ಅಧ್ಯಕ್ಷರು ಟ್ರೋಫಿ ಹಸ್ತಾಂತರಿಸಬೇಕು ಎಂದು ಎಡುಲ್ಜಿಯನ್ನು ತಡೆದರು. ಮುಂಬೈ ತಂಡಕ್ಕೆ ಖನ್ನಾ ಟ್ರೋಫಿ ನೀಡಿದರು.
12ನೇ ಆವೃತ್ತಿ IPL ಟೂರ್ನಿಗೆ ಅಂಟಿಕೊಂಡಿತು ವಿವಾದ!
‘ಏ.8ರಂದು ನಡೆದ ಆಡಳಿತ ಸಮಿತಿ ಸಭೆಯಲ್ಲಿ ಟ್ರೋಫಿ ಹಸ್ತಾಂತರಿಸುವ ವಿಚಾರ ಚರ್ಚೆಯಾಗಿತ್ತು. ಭಾರತ-ಆಸ್ಪ್ರೇಲಿಯಾ ನಡುವಿನ ದ್ವಿಪಕ್ಷೀಯ ಸರಣಿಯ ವೇಳೆ ಪ್ರಶಸ್ತಿ ಸಮಾರಂಭವನ್ನು ಖನ್ನಾ ನಿರ್ಲಕ್ಷಿಸಿದ್ದರಿಂದ ಐಪಿಎಲ್ ಟ್ರೋಫಿಯನ್ನು ಹಸ್ತಾಂತರಿಸಲು ಅವರಿಗೆ ಅವಕಾಶ ನೀಡಬಾರದು ಎಂದು ನಾನು ವಾದಿಸಿದ್ದೆ’ ಎಂದು ಎಡುಲ್ಜಿ ಹೇಳಿದ್ದಾರೆ. ‘ದ್ವಿಪಕ್ಷೀಯ ಸರಣಿ ಮುಕ್ತಾಯದ ಬಳಿಕ ಟ್ರೋಫಿ ಹಸ್ತಾಂತರಿಸುವುದು ಬಿಸಿಸಿಐ ಅಧ್ಯಕ್ಷರ ಜವಾಬ್ದಾರಿ. ಆದರೆ ಆಸ್ಪ್ರೇಲಿಯಾ ಸರಣಿ ವೇಳೆ ಖನ್ನಾ ತಮ್ಮ ಕರ್ತವ್ಯ ಮರೆತು, ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಜತ್ ಶರ್ಮಾದಿಂದ ವಿಜೇತ ತಂಡಕ್ಕೆ ಟ್ರೋಫಿ ಕೊಡಿಸಿದ್ದರು. ಹೀಗಾಗಿ ಐಪಿಎಲ್ ಫೈನಲ್'ನಲ್ಲಿ ಸಿಒಎ ಸದಸ್ಯರಿಗೆ ಟ್ರೋಫಿ ನೀಡಲು ಅವಕಾಶ ಕೊಡಬೇಕಿತ್ತು’ ಎಂದು ಎಡುಲ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಒಎ ಮುಖ್ಯಸ್ಥ ವಿನೋದ್ ರಾಯ್ ಉಪಸ್ಥಿತರಿದ್ದರೆ ಅವರೇ ಐಪಿಎಲ್ ಟ್ರೋಫಿ ಹಸ್ತಾಂತರಿಸಲಿದ್ದಾರೆ. ಇಲ್ಲವಾದಲ್ಲಿ ಸಿಒಎ ಸದಸ್ಯರಿಗೆ ಈ ಅವಕಾಶ ಸಿಗಬೇಕು ಎಂದು ತಾವು ಮೊದಲೇ ಸೂಚಿಸಿದ್ದಾಗಿ ಎಡುಲ್ಜಿ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷರೇ ಐಪಿಎಲ್ ಟ್ರೋಫಿ ನೀಡಬೇಕು ಎಂದು ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ 2 ವರ್ಷಗಳ ಹಿಂದೆ ಕಳುಹಿಸಿದ್ದ ಇ-ಮೇಲ್ ತೋರಿಸಿ ಖನ್ನಾ, ಟ್ರೋಫಿ ಹಸ್ತಾಂತರಿಸಲು ಮುಂದಾಗಿದ್ದು ಎಡುಲ್ಜಿ ಸಿಟ್ಟಿಗೆ ಕಾರಣವಾಗಿದೆ. ತಾವು ಪ್ರಶಸ್ತಿ ವಿತರಿಸದಂತೆ ಬಿಸಿಸಿಐನ ಇನ್ನೂ ಕೆಲವು ಅಧಿಕಾರಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ್ತಿ ಎಡುಲ್ಜಿ ಆರೋಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.