BCCI ಬಾಸ್'ಗಳ ಅಧಿಕಾರಕ್ಕೆ ಬ್ರೇಕ್..!

By Suvarna Web DeskFirst Published Mar 16, 2018, 11:38 AM IST
Highlights

ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸೂಚಿಸಿ, ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಆದೇಶಿಸಿದ್ದಾರೆ. ಲೋಧಾ ಸಮಿತಿ ಕುರಿತು ಕಾನೂನು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಸಿಸಿಐನ ನಿಧಿಯಿಂದ ಹಣ ಬಳಸದಂತೆ ಬಿಸಿಸಿಐ ಪದಾಧಿಕಾರಿಗಳಿಗೆ ಸಿಒಎ ಸೂಚಿಸಿದೆ. ಅಲ್ಲದೆ ಸಿಒಎ ಅನುಮತಿ ಇಲ್ಲದೇ ಬಿಸಿಸಿಐ ಪದಾಧಿಕಾರಿಗಳು ವಿವಿಧೆಡೆ ನಡೆಯಲಿರುವ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಯಾಣ ಕೈಗೊಳ್ಳುವಂತಿಲ್ಲ ಎಂದು ಸಹ ಆದೇಶಿಸಲಾಗಿದೆ.

ನವದೆಹಲಿ(ಮಾ.16): ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಅಧಿಕಾರಿಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ಮುಂದುವರಿದಿದೆ. ಕಳೆದ ವಾರವಷ್ಟೇ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಭ್ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿ ವಜಾಗೊಳಿಸುವಂತೆ ಸುಪ್ರೀಂಕೋರ್ಟ್‌'ಗೆ ತನ್ನ 7ನೇ ಸ್ಥಿತಿ ವರದಿಯಲ್ಲಿ ಸಲ್ಲಿಸಿದ್ದ ಆಡಳಿತ ಸಮಿತಿ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಈ ಮೂವರು ಅಗ್ರ ಅಧಿಕಾರಿಗಳ ಅಧಿಕಾರ ಕಿತ್ತುಕೊಂಡಿದೆ.

ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸೂಚಿಸಿ, ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಆದೇಶಿಸಿದ್ದಾರೆ. ಲೋಧಾ ಸಮಿತಿ ಕುರಿತು ಕಾನೂನು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಸಿಸಿಐನ ನಿಧಿಯಿಂದ ಹಣ ಬಳಸದಂತೆ ಬಿಸಿಸಿಐ ಪದಾಧಿಕಾರಿಗಳಿಗೆ ಸಿಒಎ ಸೂಚಿಸಿದೆ. ಅಲ್ಲದೆ ಸಿಒಎ ಅನುಮತಿ ಇಲ್ಲದೇ ಬಿಸಿಸಿಐ ಪದಾಧಿಕಾರಿಗಳು ವಿವಿಧೆಡೆ ನಡೆಯಲಿರುವ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಯಾಣ ಕೈಗೊಳ್ಳುವಂತಿಲ್ಲ ಎಂದು ಸಹ ಆದೇಶಿಸಲಾಗಿದೆ.

ವೇತನ ಹೆಚ್ಚಳದಿಂದ ದೊಡ್ಡದಾದ ಬಿರುಕು!:

ಭಾರತೀಯ ಕ್ರಿಕೆಟಿಗರ ವೇತನ ಹೆಚ್ಚಳ ಮಾಡಿದ್ದ ಸಿಒಎ ನಿರ್ಧಾರವನ್ನು ಬಿಸಿಸಿಐ ಪದಾಧಿಕಾರಿಗಳು ವಿರೋಧಿಸಿದ್ದರು. ಇದಾದ ಬಳಿಕ ಸಿಒಎ ಹಾಗೂ ಬಿಸಿಸಿಐ ನಡುವಿನ ಬಿರುಕು ದೊಡ್ಡದಾಗುತ್ತಾ ಸಾಗಿದೆ. ಇದೇ ಕಾರಣಕ್ಕಾಗಿ ಸಿಒಎ ಸದಸ್ಯರು, ಬಿಸಿಸಿಐ ವಿರುದ್ಧ ಕಾನೂನುಗಳನ್ನು ಗಾಳಿಗೆ ತೂರಿ ಸಮರ ಸಾರಿದ್ದಾರೆ ಎಂದು ಬಿಸಿಸಿಐ ಕೆಲ ಪದಾಧಿಕಾರಿಗಳು ದೂರಿದ್ದಾರೆ. ಸಿಒಎ ಸೂಚನೆಯ ಪ್ರಕಾರ ಇದೀಗ ವೆಂಕಟೇಶ್ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ಭಾರತ ಕಿರಿಯರ ತಂಡಕ್ಕೆ ನೂತನ ಆಯ್ಕೆದಾರರನ್ನು ಆಯ್ಕೆ ಮಾಡುವ ಅಧಿಕಾರ ಸಹ ಬಿಸಿಸಿಐ ಪದಾಧಿಕಾರಿಗಳಿಗೆ ಇಲ್ಲವಾಗಿದೆ. ಬಿಸಿಸಿಐ ಪದಾಧಿಕಾರಿಗಳು ತಾವು ತಂಗಲಿರುವ ಹೋಟೆಲ್ ಸೇರಿದಂತೆ ಹಲವು ವಿಷಯಗಳಿಗೆ ಸಿಒಎ ಅನುಮತಿ ಕೋರ ಬೇಕಾಗಿದ್ದು, ಬಿಸಿಸಿಐ ಪದಾಧಿಕಾರಿಗಳ ಅಧಿಕಾರಕ್ಕೆ ಸಿಒಎ ಸಂಪೂರ್ಣವಾಗಿ ಕತ್ತರಿ ಹಾಕಿದೆ.

click me!