ಅಫ್ರಿದಿ ದಾಖಲೆ ಸರಿಗಟ್ಟಿದ ಕ್ರಿಸ್ ಗೇಲ್..!

First Published Jul 30, 2018, 1:56 PM IST
Highlights

ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮಹೇಂದ್ರ ಸಿಂಗ್ ಧೋನಿ[304 ಸಿಕ್ಸರ್, 504 ಪಂದ್ಯ] 5ನೇ ಸ್ಥಾನದಲ್ಲಿದ್ದಾರೆ.

ಸೇಂಟ್ ಕಿಟ್ಸ್[ಜು.30]: ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ 5 ಸಿಕ್ಸರ್ ಸಿಡಿಸುವುದರೊಂದಿಗೆ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಒಟ್ಟು 476 ಸಿಕ್ಸರ್ ಸಿಡಿಸಿರುವ ಗೇಲ್, ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟ್ಸ್’ಮನ್ ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿದ್ದಾರೆ. ಆಗಸ್ಟ್ 01ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಗೇಲ್ ಇನ್ನೊಂದು ಸಿಕ್ಸರ್ ಸಿಡಿಸಿದರು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿದ ಆಟಗಾರ ಎನ್ನುವ ವಿಶ್ವದಾಖಲೆಗೆ ಕೆರಿಬಿಯನ್ ಕ್ರಿಕೆಟಿಗ ಪಾತ್ರರಾಗಲಿದ್ದಾರೆ.

ಗೇಲ್ ಈ ಸಾಧನೆ ಮಾಡಲು 443 ಪಂದ್ಯಗಳನ್ನಾಡಿದರೆ, ಅಫ್ರಿದಿ 524 ಪಂದ್ಯಗಳನ್ನಾಡಿ 476 ಸಿಕ್ಸರ್ ಸಿಡಿಸಿದ್ದರು. ಕ್ರಿಸ್ ಗೇಲ್ ಬಾಂಗ್ಲಾ ವಿರುದ್ಧ ಸಿಡಿಲಬ್ಬರದ [73] ಬ್ಯಾಟಿಂಗ್ ಪ್ರದರ್ಶಿಸಿದರೂ ಸರಣಿ ಗೆಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ. 38 ವರ್ಷದ ಗೇಲ್ ಪಾಕಿಸ್ತಾನದ ಅಫ್ರಿದಿಗಿಂತ 81 ಪಂದ್ಯಗಳಿಗಿಂತ ಮುಂಚಿತವಾಗಿ ಈ ಸಾಧನೆ ಮಾಡಿದ್ದಾರೆ. 

ಅಫ್ರಿದಿ ಒನ್’ಡೇ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 351, 73 ಟಿ20 ಹಾಗೂ 52 ಸಿಕ್ಸರ್’ಗಳನ್ನು ಟೆಸ್ಟ್ ಕ್ರಿಕೆಟ್’ನಲ್ಲಿ ಸಿಡಿಸಿದ್ದರೆ, ಗೇಲ್ 275 ಏಕದಿನ, 103 ಟೆಸ್ಟ್ ಹಾಗೂ 98 ಟಿ20 ಕ್ರಿಕೆಟ್’ನಲ್ಲಿ ಸಿಕ್ಸರ್ ಸಿಡಿಸಿದ್ದಾರೆ. 
ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮಹೇಂದ್ರ ಸಿಂಗ್ ಧೋನಿ[304 ಸಿಕ್ಸರ್, 504 ಪಂದ್ಯ] 5ನೇ ಸ್ಥಾನದಲ್ಲಿದ್ದಾರೆ.

click me!