
ಬೆಂಗಳೂರು(ಮಾ.14): ಭಾರತ, ಆಸ್ಪ್ರೇಲಿಯಾ ನಡುವಣ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅತ್ಯುತ್ತಮ ಗುಣಮಟ್ಟದಾಗಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶ್ಲಾಘಿಸಿದೆ. ಪುಣೆಯಲ್ಲಿ ಭಾರತದ ಹೀನಾಯ ಸೋಲಿನ ಬಳಿಕ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕಳಪೆ ಪಿಚ್ ನಿರ್ಮಿಸಿದ್ದಕ್ಕೆ ಐಸಿಸಿಯಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗ ಬಿಸಿಸಿಐಗೆ ಮುಜುಗರ ತಂದಿತ್ತು.
ಸ್ಪಿನ್ ಪಿಚ್ ಸಜ್ಜುಗೊಳಿಸಿ ಆತಿಥೇಯರಿಗೆ ಅನುಕೂಲ ಮಾಡಿಕೊಡುವ ಭರದಲ್ಲಿ ಎಂಸಿಎ ಕಳಪೆ ಪಿಚ್ ನಿರ್ಮಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಮೊದಲ ಟೆಸ್ಟ್ ಕೇವಲ ಎರಡು ಮುಕ್ಕಾಲು ದಿನಗಳಲ್ಲೇ ಅಂತ್ಯಗೊಂಡಿದ್ದು ಭಾರೀ ಆಶ್ಚರ್ಯ ಮೂಡಿಸಿತ್ತು.
ಬ್ಯಾಟ್ಸ್‌ಮೆನ್ ಹಾಗೂ ಬೌಲರ್‌ಗಳಿಗೆ ಸಮನಾಗಿ ಸಹಕರಿಸಿದ ಬೆಂಗಳೂರಿನ ಪಿಚ್‌ನಲ್ಲಿ ನಡೆದಿದ್ದ ಪಂದ್ಯ ನಾಲ್ಕೂ ದಿನ ರೋಚಕತೆ ಕಾಪಾಡಿಕೊಳ್ಳಲು ನೆರವಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಅವಿಸ್ಮರಣೀಯ ಗೆಲುವಿಗೆ ಸಾಕ್ಷಿಯಾಗಿದ್ದರು. ಮೂಲಗಳ ಪ್ರಕಾರ, ಸ್ವಲ್ಪ ಅಂತರದಲ್ಲಿ ‘ಶ್ರೇಷ್ಠ' ಗುಣಮಟ್ಟದ ಪಿಚ್‌ಗಳ ಗುಂಪಿಗೆ ಸೇರುವುದರಿಂದ ಬೆಂಗಳೂರು ಪಿಚ್ ವಂಚಿತವಾಯಿತು ಎನ್ನಲಾಗಿದೆ. ಪುಣೆ ಪಿಚ್ ಕಳಪೆಯಾಗಿತ್ತು ಎಂದು ಐಸಿಸಿಗೆ ವರದಿ ನೀಡಿದ್ದ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್, 2ನೇ ಟೆಸ್ಟ್ ಪಂದ್ಯದ ಬಳಿಕ ಚಿನ್ನಸ್ವಾಮಿ ಪಿಚ್ ಬಗ್ಗೆಯೂ ವರದಿ ಸಲ್ಲಿಸಿದ್ದು, ನಾಲ್ಕೂ ದಿನ ‘ತಿರುವು ಹಾಗೂ ಹೆಚ್ಚು ಪುಟಿಯುವುದನ್ನು' ಉಳಿಸಿಕೊಂಡ ಪಿಚ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಅತ್ಯುತ್ತಮ ಪಿಚ್ ತಯಾರಿಸಿದ ಕ್ಯೂರೇಟರ್‌ಗಳನ್ನೂ ಹೊಗಳಿದ್ದಾರೆ ಎಂದು ಕೆಎಸ್‌ಸಿಎ ಮೂಲಗಳು ಸ್ಪಷ್ಟಪಡಿಸಿವೆ.
ರಾಂಚಿ ಪಿಚ್‌ನಲ್ಲಿ 3ನೇ ದಿನದಿಂದ ‘ತಿರುವು'?
ಬೆಂಗಳೂರು ಟೆಸ್ಟ್ ಗೆಲುವಿನ ಬಳಿಕ ಭಾರತ ತಂಡ ಕೊನೆಯ ಎರಡು ಟೆಸ್ಟ್‌ಗಳಲ್ಲಿ ವಿಭಿನ್ನ ಪಿಚ್‌ನಲ್ಲಿ ಆಡಲು ಬಯಸುತ್ತಿದೆ ಎಂದು ತಂಡದ ಸದಸ್ಯರೊಬ್ಬರು ಇತ್ತೀಚೇಗಷ್ಟೇ ಹೇಳಿದ್ದರು. ಪಂದ್ಯ 5 ದಿನಗಳ ವರೆಗೂ ಸಾಗಲಿದ್ದು ಮೊದಲ ದಿನದ ಬದಲಾಗಿ 3ನೇ ದಿನದಿಂದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸ್ಪಂದಿಸಲಿದೆ ಎಂದು ಹೇಳಲಾಗಿದೆ. 3 ದಿನದಲ್ಲಿ ಪಂದ್ಯ ಗೆದ್ದು ಪ್ರವಾಸಿ ತಂಡದ ಮೇಲೆ ಏಕಾಏಕಿ ಒತ್ತಡ ಹೇರುವ ಉದ್ದೇಶದಿಂದಾಗಿ ಪುಣೆಯಲ್ಲಿ ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೇ ನೆರವಾಗುವ ಪಿಚ್ ತಯಾರಿಸಲಾಗಿತ್ತು. ಮುಂದಿನ ಎರಡು ಟೆಸ್ಟ್‌ಗಳಿಗೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸಜ್ಜುಗೊಳಿಸಿದ್ದ ಮಾದರಿಯ ಪಿಚ್‌ಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.