
ಧರ್ಮಶಾಲಾ(ಮಾ.26): ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರ ಅರ್ಧಶತಕದ ನೆರವಿನಿಂದ ಎರಡನೇ ದಿನಾದಾಟದ ಮುಕ್ತಾಯಕ್ಕೆ 248/6 ಕಲೆಹಾಕಿದ್ದು, ಇನ್ನೂ 52 ರನ್'ಗಳ ಹಿನ್ನೆಡೆಯಲ್ಲಿದೆ. ಇನ್ನು ತ್ರಿಶತಕ ವೀರ ಕರುಣ್ ನಾಯರ್ ಕೇವಲ 4 ರನ್'ಗಳಿಸಿ ಔಟ್ ಆಗುವ ಮೂಲಕ ತೀವ್ರ ನಿರಾಸೆ ಮೂಡಿಸಿದರು.
ಮೊದಲ ದಿನ ಆಸ್ಟ್ರೇಲಿಯಾ ತಂಡವನ್ನು 300 ರನ್'ಗಳಿಗೆ ನಿಯಂತ್ರಿಸಿದ್ದ ಟೀಂ ಇಂಡಿಯಾ ಎರಡನೇ ದಿನ ಮಂದ ಗತಿಯಲ್ಲಿ ರನ್ ಕಲೆಹಾಕಲು ಮುಂದಾಯಿತು. ತಂಡದ ಮೊತ್ತ 21 ರನ್'ಗಳಾಗಿದ್ದಾಗ ಆರಂಭಿಕ ಆಟಗಾರ ಮುರಳಿ ವಿಜಯ್ 11 ರನ್ ಗಳಿಸಿ ಜೋಸ್ ಹ್ಯಾಜಲ್'ವುಡ್'ಗೆ ವಿಕೆಟ್ ಒಪ್ಪಿಸಿದರು. ನಂತರ ರಾಹುಲ್ ಕೂಡಿಕೊಂಡ ಪೂಜಾರ ಭರ್ಜರಿ ಬ್ಯಾಟಿಂಗ್ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇದೇ ವೇಳೆ ರಾಹುಲ್ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಐದನೇ ಅರ್ಧಶತಕ ಪೂರೈಸಿದರು. ಈ ಬಾರಿಯಾದರೂ ಮೂರಂಕಿ ಮೊತ್ತವನ್ನು ಮುಟ್ಟಬಹುದು ಎನ್ನುವ ಕ್ರಿಕೆಟ್ ಪ್ರಿಯರ ಆಸೆಯನ್ನು ರಾಹುಲ್ ಮತ್ತೊಮ್ಮೆ ನಿರಾಸೆಗೊಳಿಸಿದರು. ಕನ್ನಡಿಗ ರಾಹುಲ್ ವೈಯುಕ್ತಿಕ 60 ರನ್ ಗಳಿಸಿದ್ದಾಗ ಪ್ಯಾಟ್ ಕಮ್ಮಿನ್ಸ್'ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ರಾಂಚಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತ ಸಿಡಿಸಿದ್ದ ಪೂಜಾರ ಅರ್ಧಶತಕ ಪೂರೈಸುವುದರ ಜೊತೆಗೆ ನಾಯಕ ಅಜಿಂಕ್ಯಾ ರಹಾನೆಯೊಂದಿಗೆ ಉತ್ತಮ ಜತೆಯಾಟವಾಡಿದರು. ಪೂಜಾರ 57 ರನ್ ಗಳಿಸಿ ಲಯನ್'ಗೆ ವಿಕೆಟ್ ಒಪ್ಪಿಸಿಸಿದರೆ, ನಂತರ ಬಂದ ಕರುಣ್ ನಾಯರ್ ಆಟ ಕೇವಲ ನಾಲ್ಕು ರನ್'ಗಳಿಗೆ ಸೀಮಿತವಾಯಿತು.
ಕೇವಲ 10 ರನ್'ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಅಶ್ವಿನ್ ಹಾಗೂ ರಹಾನೆ ಜೋಡಿ 49 ರನ್'ಗಳ ಜತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿದಾಟಿಸಿತು. ಇದಾದ ಕೆಲ ಹೊತ್ತಿನಲ್ಲೇ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ರಹಾನೆ 46 ಗಳಿಸಿದ್ದಾಗ ಲಯಾನ್ ಎಸೆತದಲ್ಲಿ ಸ್ಮಿತ್'ಗೆ ಕ್ಯಾಚ್ ನೀಡಿ ಔಟಾದರೆ, ತಂಡದ ಮೊತ್ತಕ್ಕೆ ಇನ್ನಾರು ರನ್ ಸೇರಿಸುವುದರೊಳಗೆ ಉತ್ತಮವಾಗಿ ಆಡುತ್ತಿದ್ದ ಅಶ್ವಿನ್ ಅವರು ಲಯನ್ ಹೆಣೆದ ಎಲ್'ಬಿ ಬಲೆಗೆ ಬಿದ್ದರು. ಮೂರನೇ ದಿನಕ್ಕೆ ಸಾಹಾ(10) ಮತ್ತು ಜಡೇಜಾ(16) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಪರ ನಾಥನ್ ಲಯಾನ್ 4 ವಿಕೆಟ್ ಪಡೆದರೆ, ವೇಗಿಗಳಾದ ಜೋಸ್ ಹ್ಯಾಜಲ್'ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್;
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ : 300/10
ಸ್ಟೀವ್ ಸ್ಮಿತ್ 111
ಮ್ಯಾಥ್ಯೂ ವೇಡ್ 57
ಕುಲ್ದೀಪ್ ಯಾದವ್ 68/4
ಭಾರತ ಮೊದಲ ಇನಿಂಗ್ಸ್ : 248
ಕೆ.ಎಲ್ ರಾಹುಲ್ : 60
ಚೇತೇಶ್ವರ ಪೂಜಾರ : 57
ನಾಥನ್ ಲಯಾನ್ 67/4
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.