ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ಭರ್ಜರಿ ಕಂಬ್ಯಾಕ್; ವೃದ್ಧಿಮಾನ್, ಪೂಜಾರ ಭರ್ಜರಿ ಆಟ

By Suvarna Web DeskFirst Published Jan 23, 2017, 1:53 PM IST
Highlights

ಮೂರನೇ ದಿನದವರೆಗೂ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಹಾಲಿ ರಣಜಿ ಚಾಂಪಿಯನ್ಸ್ ಗುಜರಾತ್ ತಂಡ ಈಗ ಸೋಲಿನ ಸುಳಿಗೆ ಸಿಲುಕಿದೆ.

ಮುಂಬೈ(ಜ. 22): ವೃದ್ಧಿಮಾನ್ ಸಾಹಾ ಮತ್ತು ಚೇತೇಶ್ವರ್ ಪೂಜಾರ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತದ ಇತರೆ ತಂಡವು ಗುಜರಾತ್ ವಿರುದ್ಧದ ಇರಾನಿ ಟ್ರೋಫಿ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದೆ. ಗೆಲ್ಲಲು 379 ರನ್ ಗುರಿ ಹೊಂದಿರುವ ರೆಸ್ಟ್ ಆಫ್ ಇಂಡಿಯಾ ತಂಡ ನಾಲ್ಕನೇ ದಿನಾಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದೆ. ತಂಡಕ್ಕೆ ಗೆಲ್ಲಲು ಇನ್ನು 113 ರನ್ ಮಾತ್ರ ಅಗತ್ಯವಿದೆ. ಚೇತೇಶ್ವರ್ ಪೂಜಾರ ಮತ್ತು ವೃದ್ಧಿಮಾನ್ ಸಾಹಾ 5ನೇ ವಿಕೆಟ್'ಗೆ 203 ರನ್'ಗಳ ಮುರಿಯದ ಜೊತೆಯಾಟ ಆಡಿದ್ದಾರೆ. ಇವರಿಬ್ಬರ ಜೊತೆಯಾಟವೇ ಈ ಪಂದ್ಯದ ಹೈಲೈಟ್ ಎನಿಸಿದೆ. ರೆಸ್ಟ್ ಆಫ್ ಇಂಡಿಯಾ ಗೆಲುವಿನ ಆಸೆ ಅಡಗಿರುವುದು ಇವರಿಬ್ಬರ ಜೊತೆಯಾಟದಲ್ಲೇ. ವಿಕೆಟ್ ಕೀಪರ್ ಬ್ಯಾಟ್ಸ್'ಮ್ಯಾನ್ ವೃದ್ಧಿಮಾನ್ ಸಾಹಾ ಅಜೇಯ 123 ರನ್ ಗಳಿಸಿದರೆ, ಚೇತೇಶ್ವರ್ ಪೂಜಾರ ಅಜೇಯ 83 ರನ್ ಗಳಿಸಿ ರೆಸ್ಟ್ ಆಫ್ ಇಂಡಿಯಾದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ಇವರಿಬ್ಬರನ್ನು ಹೊರತುಪಡಿಸಿ ಉಳಿದ ಬ್ಯಾಟುಗಾರರು ಸಂಪೂರ್ಣ ವಿಫಲರಾದರು. ಕರ್ನಾಟಕದ ಭರವಸೆಯ ಪ್ರತಿಭೆ ಕರುಣ್ ನಾಯರ್ ಮತ್ತು ಮನೋಜ್ ತಿವಾರಿ ಒಂದಂಕಿ ಮೊತ್ತಕ್ಕೆ ತೃಪ್ತಿಪಟ್ಟರು. ಅಖಿಲ್ ಹೆರ್ವಾಡ್ಕರ್ ಮತ್ತು ಅಭಿನವ್ ಮುಕುಂದ್ ಕೂಡ ಹೆಚ್ಚು ರನ್ ಗಳಿಸಲಿಲ್ಲ.

ನಾಳೆ ಕೊನೆಯ ದಿನ ಪೂಜಾರ ಮತ್ತು ಸಾಹಾ ಅವರ ಜೊತೆಯಾಟ ಎಷ್ಟರವರೆಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಮೂರನೇ ದಿನದವರೆಗೂ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಹಾಲಿ ರಣಜಿ ಚಾಂಪಿಯನ್ಸ್ ಗುಜರಾತ್ ತಂಡ ಈಗ ಸೋಲಿನ ಸುಳಿಗೆ ಸಿಲುಕಿದೆ.

ಸ್ಕೋರು ವಿವರ:

ಗುಜರಾತ್ ಮೊದಲ ಇನ್ನಿಂಗ್ಸ್ 102.5 ಓವರ್ 358 ರನ್ ಆಲೌಟ್
ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್ 75 ಓವರ್ 226 ರನ್ ಆಲೌಟ್
ಗುಜರಾತ್ ಎರಡನೇ ಇನ್ನಿಂಗ್ಸ್ 90.3 ಓವರ್ 246 ರನ್ ಆಲೌಟ್
ರೆಸ್ಟ್ ಆಫ್ ಇಂಡಿಯಾ ಎರಡನೇ ಇನ್ನಿಂಗ್ಸ್ 84 ಓವರ್ 266/4

(ವೃದ್ಧಿಮಾನ ಸಾಹಾ ಅಜೇಯ 123, ಚೇತೇಶ್ವರ್ ಪೂಜಾರ ಅಜೇಯ 83, ಅಖಿಲ್ ಹೆರ್ವಾಡ್ಕರ್ 20 ರನ್ - ಹಾರ್ದಿಕ್ ಪಟೇಲ್ 59/2)

click me!