* ಚೆನ್ನೈನ ಮಹಾಬಲಿಪುರಂನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್
* ಮೊದಲ 3 ಸುತ್ತುಗಳಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತದ ಹಾಕಿ ತಂಡಗಳು
* ಆದರೆ 4ನೇ ಸುತ್ತಿನಲ್ಲಿ ಭಾರತಕ್ಕೆ ಮಿಶ್ರಫಲ
ಮಹಾಬಲಿಪುರಂ(ಆ.02): 44ನೇ ಚೆಸ್ ಒಲಿಂಪಿಯಾಡ್ ಟೂರ್ನಿಯ 4ನೇ ಸುತ್ತಿನಲ್ಲಿ ಭಾರತ ತಂಡಗಳು ಮಿಶ್ರ ಫಲ ಅನುಭವಿಸಿವೆ. ಮೊದಲ 3 ಸುತ್ತುಗಳಲ್ಲಿ ಜಯ ಗಳಿಸಿದ್ದ ಭಾರತೀಯ ತಂಡಗಳು 4ನೇ ಸುತ್ತಿನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಮುಕ್ತ ವಿಭಾಗದಲ್ಲಿ ಭಾರತ ‘ಎ’ ತಂಡ ಫ್ರಾನ್ಸ್ ವಿರುದ್ಧ 2-2ರಲ್ಲಿ ಡ್ರಾಗೆ ತೃಪ್ತಿಪಟ್ಟರೆ, ‘ಬಿ’ ತಂಡ ಇಟಲಿ ವಿರುದ್ಧ 3-1ರಲ್ಲಿ ಜಯ ಸಾಧಿಸಿತು. ಇನ್ನು ಭಾರತ ‘ಸಿ’ ತಂಡ ಸ್ಪೇನ್ ವಿರುದ್ಧ 2.5-1.5ರಲ್ಲಿ ಜಯಿಸಿತು. ಮಹಿಳಾ ವಿಭಾಗದಲ್ಲಿ ಭಾರತ ‘ಎ’ ತಂಡ ಹಂಗೇರಿ ವಿರುದ್ಧ 2.5-1.5ರಲ್ಲಿ ಗೆದ್ದರೆ, ‘ಬಿ’ ತಂಡ ಎಸ್ಟೋನಿಯಾ ವಿರುದ್ಧ 2.5-1.5ರಲ್ಲಿ ಜಯಿಸಿತು. ‘ಸಿ’ ತಂಡ 1-3ರಲ್ಲಿ ಜಾರ್ಜಿಯಾ ವಿರುದ್ಧ ಸೋಲುಂಡಿತು.
ಕಾಮನ್‌ವೆಲ್ತ್ ಗೇಮ್ಸ್ ಹಾಕಿ: 4-4 ಡ್ರಾಗೆ ತೃಪ್ತಿಪಟ್ಟ ಭಾರತ
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಲಿಷ್ಠ ಭಾರತ ಹಾಕಿ ತಂಡವು ಆತಿಥೇಯ ಇಂಗ್ಲೆಂಡ್ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 4-1 ಗೋಲುಗಳಿಂದ ಮುಂದಿದ್ದ ಭಾರತ ಪುರುಷರ ಹಾಕಿ ತಂಡ, ಕೊನೆ 10 ನಿಮಿಷದಲ್ಲಿ 3 ಗೋಲು ಬಿಟ್ಟು ಕೊಟ್ಟು ಇಂಗ್ಲೆಂಡ್ ವಿರುದ್ಧದ ‘ಎ’ ಗುಂಪಿನ ಪಂದ್ಯದಲ್ಲಿ 4-4ರ ಡ್ರಾಗೆ ತೃಪ್ತಿಪಟ್ಟಿದೆ. 4ನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ತೀರಾ ಕಳಪೆ ಪ್ರದರ್ಶನ ತೋರಿತು. ಕೊನೆ 10 ನಿಮಿಷ ಬಾಕಿ ಇದ್ದಾಗ ಭಾರತದ ಇಬ್ಬರು ಆಟಗಾರರು ಹಳದಿ ಕಾರ್ಡ್ ಪಡೆದಿದ್ದು ಇಂಗ್ಲೆಂಡ್‌ಗೆ ಅನುಕೂಲವಾಯಿತು.
ಈಜು: ಶ್ರೀಹರಿ ಫೈನಲ್‌ಗೆ
ಆಕರ್ಷಕ ಪ್ರದರ್ಶನ ಮುಂದುವರಿಸಿರುವ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್, ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. 21 ವರ್ಷದ ಶ್ರೀಹರಿ, ಸೆಮಿಫೈನಲ್‌ನಲ್ಲಿ 25.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 8ನೇ ಸ್ಥಾನಿಯಾಗಿ ಫೈನಲ್‌ಗೇರಿದರು. 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲೂ ಶ್ರೀಹರಿ ಫೈನಲ್‌ಗೇರಿ 7ನೇ ಸ್ಥಾನ ಪಡೆದಿದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ, ಕಂಚು ಗೆದ್ದ ಹರ್ಜಿಂದರ್ ಕೌರ್!
ಕೂದಲೆಳೆಯ ಅಂತರದಲ್ಲಿ ಪ್ರಣತಿ ಕೈತಪ್ಪಿದ ಪದಕ!
ಭಾರತದ ಜಿಮ್ನಾಸ್ಟಿಕ್ಸ್ ಪಟು ಪ್ರಣತಿ ನಾಯಕ್ ಮಹಿಳೆಯರ ವಾಲ್ಟ್ ವಿಭಾಗದ ಫೈನಲ್‌ನಲ್ಲಿ 5ನೇ ಸ್ಥಾನ ಪಡೆದರು. ಪಶ್ಚಿಮ ಬಂಗಾಳದ 27 ವರ್ಷದ ಪ್ರಣತಿ, ಒಟ್ಟು 13.275 ಅಂಕಗಳನ್ನು ಗಳಿಸಿದರು. 0.384 ಅಂಕಗಳ ಅಂತರದಲ್ಲಿ ಕಂಚಿನ ಪದಕ ಅವರ ಕೈತಪ್ಪಿತು. ಪ್ರಣತಿ 2019, 2022ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚು ಜಯಿಸಿದ್ದರು.
ಬ್ಯಾಡ್ಮಿಂಟನ್: ಮಿಶ್ರ ತಂಡ ವಿಭಾಗದ ಸೆಮೀಸ್‌ಗೆ ಭಾರತ
ಹಾಲಿ ಚಾಂಪಿಯನ್ ಭಾರತ, ಮಿಶ್ರ ತಂಡ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ದುರ್ಬಲ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿತು. ಸೆಮೀಸ್‌ನಲ್ಲಿ ಭಾರತಕ್ಕೆ ಸಿಂಗಾಪುರ ಎದುರಾಗಲಿದೆ. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ-ಸುಮಿತ್, ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೆನ್, ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಗೆಲುವು ಸಾಧಿಸಿದರು.
ಬಾಕ್ಸಿಂಗ್: ಕ್ವಾರ್ಟರ್‌ಗೇರಿದ ಅಮಿತ್, ಹುಸ್ಮುದ್ದೀನ್
ಭಾರತದ ಬಾಕ್ಸರ್‌ಗಳಾದ ಅಮಿತ್ ಪಂಘಾಲ್ ಮತ್ತು ಮೊಹಮದ್ ಹುಸ್ಮುದ್ದೀನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 51 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಅಮಿತ್, ವನವಾಟು ದೇಶದ ನಮ್ರಿ ಬೆರ್ರಿ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ದಾಖಲಿಸಿದರು. 57 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಬಾಂಗ್ಲಾದೇಶದ ಮೊಹಮದ್ ಸಲೀಂ ವಿರುದ್ಧ ಹುಸ್ಮುದ್ದೀನ್ 5-0 ಅಂತರದಲ್ಲಿ ಜಯಿಸಿ ಮುನ್ನಡೆದರು.