* ಚೆಸ್ ಒಲಿಂಪಿಯಾಡ್‌ನ ಮೊದಲ ದಿನ ಭಾರತ ಭರ್ಜರಿ ಶುಭಾರಂಭ
* ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿರುವ ಕ್ರೀಡಾಕೂಟ
* ಭಾರತದ 6 ಚೆಸ್ ತಂಡಗಳು ಜಯಭೇರಿ
ಮಹಾಬಲಿಪುರಂ(ಜು.30): 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ತಂಡಗಳು ಮುಕ್ತ ಹಾಗೂ ಮಹಿಳಾ ವಿಭಾಗಗಳಲ್ಲಿ ಗೆಲುವಿನ ಆರಂಭ ಪಡೆದಿವೆ. ಅಗ್ರ ಶ್ರೇಯಾಂಕಿತ ಭಾರತ ಮಹಿಳಾ ‘ಎ’ ತಂಡ ತಜಿಕಿಸ್ತಾನ ವಿರುದ್ಧ ಗೆದ್ದರೆ, ‘ಬಿ’ ತಂಡ ವೇಲ್ಸ್ ವಿರುದ್ಧ ಜಯಗಳಿಸಿತು. ಎರಡೂ ತಂಡಗಳು 3-0 ಅಂತರದಲ್ಲಿ ಮುನ್ನಡೆ ಪಡೆದವು. ತಾರಾ ಆಟಗಾರ್ತಿಯರಾದ ಕೊನೆರು ಹಂಪಿ, ಆರ್.ವೈಶಾಲಿ ಮತ್ತು ಭಕ್ತಿ ಕುಲ್ಕರ್ಣಿ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದರು. ಇನ್ನು ಭಾರತ ‘ಸಿ’ ತಂಡ ಸಹ ಸುಲಭ ಗೆಲುವು ದಾಖಲಿಸಿತು.
ಇದೇ ವೇಳೆ ಮುಕ್ತ ವಿಭಾಗದಲ್ಲಿ ಪುರುಷರ ತಂಡಗಳು ಸಹ ಮೊದಲ ಸುತ್ತಿನಲ್ಲಿ ಕ್ರಮವಾಗಿ ಜಿಂಬಾಬ್ವೆ, ಯುಎಇ ಮತ್ತು ದಕ್ಷಿಣ ಸುಡಾನ್ ವಿರುದ್ಧ ಜಯಗಳಿಸಿದವು. ಇದೇ ಚೊಚ್ಚಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಟೂರ್ನಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉದ್ಘಾಟಿಸಿದರು. 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸಹ ಉಪಸ್ಥಿತರಿದ್ದರು.
ಬ್ಯಾಡ್ಮಿಂಟನ್: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ತಂಡ
ಬರ್ಮಿಂಗ್‌ಹ್ಯಾಮ್: ಭಾರತೀಯ ಶಟ್ಲರ್‌ಗಳು ತಂಡ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 5-0 ಅಂತರದಲ್ಲಿ ಬಗ್ಗುಬಡಿದರು. ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್, ಪಿ.ವಿ.ಸಿಂಧು ಸುಲಭ ಗೆಲುವು ಸಾಧಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸುಮಿತ್ ರೆಡ್ಡಿ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್ ಜಯಿಸಿದರು. ಶನಿವಾರ 2ನೇ ಪಂದ್ಯದಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾಗಲಿದೆ.
ಉದ್ಘಾಟನಾ ಸಮಾರಂಭದ ವೇಳೆಯೂ ಲವ್ಲೀನಾ ವಿವಾದ!
ಬರ್ಮಿಂಗ್‌ಹ್ಯಾಮ್: ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಸ್ಪರ್ಧೆಗೂ ಮೊದಲು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಅಲೆಕ್ಸಾಂಡರ್ ಕ್ರೀಡಾಂಗಣಕ್ಕೆ ತೆರಳಿದ್ದ ಲವ್ಲೀನಾ ಮತ್ತು ಬಾಕ್ಸರ್ ಮುಹಮದ್ ಹುಸ್ಮುದ್ದೀನ್ ಶುಕ್ರವಾರ ಬೆಳಗ್ಗೆ ಅಭ್ಯಾಸವಿದೆ ಎನ್ನುವ ಕಾರಣ ನೀಡಿ, ಸಮಾರಂಭ ಮುಗಿಯುವ ಮೊದಲೇ ಕ್ರೀಡಾಂಗಣದಿಂದ ಹೊರಟಿದ್ದಾರೆ. ಇದರಿಂದ ಭಾರತ ತಂಡದ ಮುಖ್ಯಸ್ಥ ರಾಜೇಶ್ ಭಂಡಾರಿ ಸಿಟ್ಟಾಗಿದ್ದು, ‘ಅಭ್ಯಾಸ ಅಥವಾ ಸ್ಪರ್ಧೆ ಇದೆ ಎನ್ನುವ ಕಾರಣಕ್ಕೆ ಅನೇಕರು ಸಮಾರಂಭಕ್ಕೆ ಆಗಮಿಸಿರಲಿಲ್ಲ. ಈ ಇಬ್ಬರೂ ಅದೇ ನಿರ್ಧಾರ ಕೈಗೊಳ್ಳಬಹುದಿತ್ತು. ಸಮಾರಂಭಕ್ಕೆ ಬಂದ ಮೇಲೆ ಮುಗಿಯುವ ವರೆಗೂ ಇರಬೇಕಿತ್ತು. ಈ ಬಗ್ಗೆ ಬಾಕ್ಸಿಂಗ್ ತಂಡದೊಂದಿಗೆ ಮಾತನಾಡುತ್ತೇನೆ’ ಎಂದಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್: ಮೊದಲ ದಿನ ಪದಕ ಗೆಲ್ಲದ ಭಾರತ
ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲೀನಾ ಬೊರ್ಗೊಹೈನ್, ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲು ಭಾರತೀಯ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಬಿಡುತ್ತಿಲ್ಲ. ಈ ಸಂಸ್ಥೆಗಳ ರಾಜಕೀಯದಿಂದಾಗಿ ತಾವು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದರು. ಇದಾದ ಬಳಿಕ ಈ ವಿವಾದ ಸುಖಾಂತ್ಯ ಕಂಡಿತ್ತು.