
ಧರ್ಮಶಾಲಾ(ಅ.15): ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಇನ್ನು ಎಂಟು ತಿಂಗಳಷ್ಟೇ ಬಾಕಿ. ಅದಕ್ಕೆ ಪೂರ್ವಭಾವಿಯಾಗಿ ಭಾರತ ಆಡಲಿರುವ ಕೇವಲ ಎಂಟೇ ಎಂಟು ಏಕದಿನ ಪಂದ್ಯಗಳ ಪೈಕಿ ಭಾನುವಾರದಿಂದ ಆರಂಭವಾಗುತ್ತಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯೂ ಸೇರಿದ್ದು, ಇದರೊಂದಿಗೆ ವರ್ಷಾಂತ್ಯದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯ ಸರಣಿಯನ್ನೂ ಚಾಂಪಿಯನ್ಸ್ ಟ್ರೋಫಿಗೆ ವೇದಿಕೆಯಾಗಿಸಿಕೊಳ್ಳಲು ಭಾರತ ಸಜ್ಜಾಗಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಲು ಇತ್ತಂಡಗಳೂ ಕಾರ‌್ಯತಂತ್ರ ಹೆಣೆದಿವೆ. ಅದರಲ್ಲೂ ಮೂರು ಟೆಸ್ಟ್ ಪಂದ್ಯ ಸರಣಿಯಲ್ಲಿ ಅನುಭವಿಸಿದ ಕ್ಲೀನ್‌ಸ್ವೀಪ್ ಹಿನ್ನಡೆಯನ್ನು ಈ ಸೀಮಿತ ಓವರ್‌ಗಳ ಸರಣಿಯಲ್ಲಾದರೂ ಮೆಟ್ಟಿನಿಲ್ಲಬೇಕೆಂಬ ಛಲ ಹೊತ್ತಿದೆ ಕಿವೀಸ್.
ಇತಿಹಾಸ ಬರೆವ ತುಡಿತ
ಭಾರತದ ನೆಲದಲ್ಲಿ ಒಮ್ಮೆಯೂ ದ್ವಿಪಕ್ಷೀಯ ಸರಣಿ ಜಯಿಸದ ಕಿವೀಸ್, ಕೇನ್ ವಿಲಿಯಮ್ಸನ್ ಸಾರಥ್ಯದಲ್ಲಿ ಹೊಸ ಇತಿಹಾಸವೊಂದನ್ನು ರಚಿಸುವ ಹುಮ್ಮಸ್ಸಿನಲ್ಲಿದೆ. ಈ ಹಿಂದಿನ 1988, 1995, 1999 ಮತ್ತು 2010ರ ನಾಲ್ಕೂ ಸರಣಿಯಲ್ಲಿಯೂ ಭಾರತವೇ ಜಯಭೇರಿ ಬಾರಿಸಿದೆ. ಅದರಲ್ಲೂ ಕೊನೆಯ ಸರಣಿಯನ್ನಂತೂ ಭಾರತ, 5-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ. ಹೀಗಾಗಿ ಕಿವೀಸ್ ತಂಡ ಇದು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಮುಂದಾಗಿದೆ. ಮೇಲಾಗಿ ಟೆಸ್ಟ್ ತಂಡಕ್ಕಿಂತ ಸಂಪೂರ್ಣ ಭಿನ್ನವಾಗಿರುವ ನ್ಯೂಜಿಲೆಂಡ್ ತಂಡ ಭಾರತವನ್ನು ಮಣಿಸುವ ವಿಶ್ವಾಸದಲ್ಲಿದೆ. ಟಿಮ್ ಸೌಥೀಯಂಥ ಪ್ರಭಾವಿ ವೇಗದ ಬೌಲರ್ ಅಲ್ಲದೆ, ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಯಂಥ ಸ್ಪಿನ್ನರ್‌ಗಳು, ಕೊರೆ ಆ್ಯಂಡರ್ಸನ್, ಜಿಮ್ಮಿ ನೀಶಮ್‌ರಂಥ ಆಲ್ರೌಂಡ್ ಆಟಗಾರರಿಂದ ತುಂಬಿರುವ ಕಿವೀಸ್ ಪಡೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ, ಧೋನಿ ಬಳಗಕ್ಕೆ ಸವಾಲಾಗಿ ನಿಲ್ಲುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.
ಧೋನಿ ಪಡೆಗೆ ಅಗ್ನಿಪರೀಕ್ಷೆ
ಇನ್ನು ಭಾರತ ತಂಡ ಜಿಂಬಾಬ್ವೆ ವಿರುದ್ಧದ ಸರಣಿಯ ನಂತರದಲ್ಲಿ ಆಡುತ್ತಿರುವ ಎರಡನೇ ಏಕದಿನ ಸರಣಿ ಇದು. ಅನನುಭವಿ ತಂಡವನ್ನು ಮುನ್ನಡೆಸಿದ್ದ ಧೋನಿ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯ ಸರಣಿಯಲ್ಲಿ ತಂಡವನ್ನು ಕ್ಲೀನ್‌ಸ್ವೀಪ್‌ನತ್ತ ಮುನ್ನಡೆಸಿದ್ದರು. ಆದರೆ, ಕಳೆದ ಏಪ್ರಿಲ್ 2015ರಿಂದ ಭಾರತ 19 ಏಕದಿನ ಪಂದ್ಯಗಳನ್ನಾಡಿದ್ದು ಒಂಭತ್ತು ಪಂದ್ಯಗಳಲ್ಲಿ ಸೋಲನುಭವಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಐದು ಸರಣಿಗಳ ಪೈಕಿ ಬಾಂಗ್ಲಾದೇಶ, ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದೆ. ಹೀಗಾಗಿ ಕಿವೀಸ್ ವಿರುದ್ಧದ ಸರಣಿ ಧೋನಿ ಪಡೆಗೆ ಮಹತ್ವದ್ದಾಗಿದೆ. ಮೇಲಾಗಿ ಸ್ಪಿನ್‌ಮಾಂತ್ರಿಕ ಆರ್. ಅಶ್ವಿನ್, ರವೀಂದ್ರ ಜಡೇಜಾ ಮತ್ತು ಮೊಹಮದ್ ಶಮಿಗೆ ವಿಶ್ರಾಂತಿ ನೀಡಿರುವುದು ಕಿವೀಸ್‌ಗೆ ವರದಾನವಾಗುವ ಸಾಧ್ಯತೆ ಇದೆ. ಆದರೆ, ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಜಯಂತ್ ಯಾದವ್ ತಮ್ಮ ಸಾಮರ್ಥ್ಯ ಋಜುಪಡಿಸಲು ಈ ಸರಣಿಯನ್ನು ಗುರಿಯಾಗಿಸಿಕೊಂಡಿದ್ದಾರೆ.
ತಂಡಗಳು
ಭಾರತ ಶ್ರೇಯಾಂಕ 4
ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್ಪ್ರೀತ್ ಬುಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್‌ದೀಪ್ ಸಿಂಗ್ ಮತ್ತು ಕೇದಾರ್ ಜಾಧವ್.
ನ್ಯೂಜಿಲೆಂಡ್ ಶ್ರೇಯಾಂಕ 3
ಕೇನ್ ವಿಲಿಯಮ್ಸನ್ (ನಾಯಕ), ಕೊರೆ ಆ್ಯಂಡರ್ಸನ್, ಟ್ರೆಂಟ್ ಬೌಲ್ಟ್, ರಾಸ್ ಟೇಲರ್, ಬಿ ಜೆ. ವಾಟ್ಲಿಂಗ್ (ವಿಕೆಟ್‌ಕೀಪರ್) ಡಗ್ ಬ್ರಾಸ್‌ವೆಲ್, ಆ್ಯಂಟನ್ ಡೆವ್‌ಸಿಚ್, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಜೇಮ್ಸ್ ನೀಶಮ್, ಲೂಕ್ ರೊಂಚಿ (ವಿಕೆಟ್‌ಕೀಪರ್), ಮಿಚೆಲ್ ಸ್ಯಾಂಟ್ನರ್, ಇಶ್ ಸೋ, ಟಿಮ್ ಸೌಥೀ.
ಸರಣಿ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ
ಅ.16 ಮೊದಲ ಏಕದಿನ ಧರ್ಮಶಾಲಾ
ಅ.20 ಎರಡನೇ ಏಕದಿನ ನವದೆಹಲಿ
ಅ.23 ಮೂರನೇ ಏಕದಿನ ಮೊಹಾಲಿ
ಅ.26 ನಾಲ್ಕನೇ ಏಕದಿನ ರಾಂಚಿ
ಅ.29 ಐದನೇ ಏಕದಿನ ವಿಶಾಖಪಟ್ಟಣ
ವಿ.ಸೂ: ಎಲ್ಲ ಪಂದ್ಯಗಳು ಮಧ್ಯಾಹ್ನ 1.30ಕ್ಕೆ ಆರಂಭ ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.