
ನವದೆಹಲಿ(ಅ. 19): ಭಾರತದ ಉಜ್ವಲ ಮತ್ತು ಉದಯೋನ್ಮುಖ ಸ್ಪಿನ್ ಬೌಲಿಂಗ್ ಪ್ರತಿಭೆ ಕುಲದೀಪ್ ಯಾದವ್ ಕ್ರಿಕೆಟ್ ಲೋಕದ ಗಮನ ಸೆಳೆಯುತ್ತಿದ್ದಾರೆ. 22 ವರ್ಷದ ಕುಲದೀಪ್ ಯಾದವ್ ವಿಶ್ವದ ಅತ್ಯಂತ ಶ್ರೇಷ್ಠ ಬೌಲರ್ ಆಗಬಲ್ಲನೆಂದು ಶೇನ್ ವಾರ್ನ್ ಸೇರಿದಂತೆ ಹಲವು ಮಂದಿ ಭವಿಷ್ಯ ನುಡಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ.
ಇನ್ನೂ 22 ವರ್ಷದ ಕುಲದೀಪ್ ಯಾದವ್ ಇಷ್ಟು ಪ್ರಬಲ ಸ್ಪಿನ್ನರ್ ಆಗಿ ರೂಪುಗೊಳ್ಳಲು ಹೇಗೆ ಸಾಧ್ಯವಾಯಿತು..? ಎಲ್ಲಾ ರೀತಿಯ ಪಿಚ್'ಗಳಲ್ಲೂ ತಮ್ಮ ಕರಾಮತ್ತು ತೋರಲು ಸಾಧ್ಯವಾಗಿದ್ದು ಹೇಗೆ? ಕೋಚ್'ನ ಪಾತ್ರವನ್ನಂತೂ ಒಪ್ಪಿಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಕುಲದೀಪ್ ಯಶಸ್ಸಿನ ಹಿಂದಿರುವ ಗುಟ್ಟು ಎಂದರೆ ಕಾಂಕ್ರೀಟ್.
ಉತ್ತರಪ್ರದೇಶದ ಕಾನಪುರ್ ನಗರದವರಾದ ಕುಲದೀಪ್ ಯಾದವ್ ಚಿಕ್ಕಂದಿನಿಂದಲೂ ಕಾಂಕ್ರೀಟ್ ಪಿಚ್'ಗಳಲ್ಲಿ ಅಭ್ಯಾಸ ಮಾಡುತ್ತಿದ್ದವರು. ಸಿಮೆಂಟ್ ನೆಲದಲ್ಲಿ ಸ್ಪಿನ್ ಮಾಡುವುದು ಎಷ್ಟು ಕಷ್ಟ ಎಂಬುದು ಬೌಲಿಂಗ್ ಬಲ್ಲವರಿಗೆ ಚೆನ್ನಾಗಿ ಗೊತ್ತು. ಇಲ್ಲಿ ಚೆಂಡು ಸ್ಪಿನ್ ಆಗುವುದು ಬಹುತೇಕ ಅಸಾಧ್ಯ. ಇಂಥ ನೆಲದಲ್ಲಿ ಕುಲದೀಪ್ ಯಾದವ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಕಾಂಕ್ರೀಟ್'ನಲ್ಲಿ ನೀವು ಸ್ಪಿನ್ ಮಾಡುವಿರಾದರೆ, ಜಗತ್ತಿನ ಯಾವುದೇ ಪಿಚ್'ನಲ್ಲಿ ಬೇಕಾದರೂ ನೀವು ಸುಲಭವಾಗಿ ಸ್ಪಿನ್ ಮಾಡಬಹುದು.
ಕುಲದೀಪ್ ಯಾದವ್ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು 2004ರಲ್ಲಿ. ಆರಂಭದಲ್ಲಿ ವೇಗದ ಬೌಲರ್ ಆಗಿದ್ದ ಕುಲದೀಪ್ 9ನೇ ವಯಸ್ಸಿನಲ್ಲಿ ಸ್ಪಿನ್ನರ್ ಆಗಿ ಬದಲಾದರು. ಅದಕ್ಕೆ ಕಾರಣ ಅವರ ಆಗಿನ ಕೋಚ್.
ಮೊದಲ ಎಸೆತ ಹೇಗಿತ್ತು..?
ವೇಗದ ಬೌಲಿಂಗ್ ಆಗಿದ್ದ ಕುಲದೀಪ್ ಅವರನ್ನು ಸ್ಪಿನ್ನರ್ ಆಗುವಂತೆ ಕೋಚ್ ಸಲಹೆ ಕೊಟ್ಟಿದ್ದು ಯಾಕೆ? ಕುಲದೀಪ್ ಈ ಪ್ರಸಂಗವನ್ನ ಹೀಗೆ ವಿವರಿಸುತ್ತಾರೆ. "ಮೊದಲ ಎಸೆತ ನನಗೆ ಇಷ್ಟವಾಗಲಿಲ್ಲ. ಅದ್ಯಾವ ಬೌಲಿಂಗ್ ಎಂಬುದು ನನಗೂ ಗೊತ್ತಾಗಲಿಲ್ಲ. ವಾಸ್ತವದಲ್ಲಿ ಅದು ಸ್ಪಿನ್ ಬೌಲಿಂಗ್ ಆಗಿತ್ತು. ಆದರೆ, ಕೋಚ್'ಗೆ ಅದೇನನಿಸಿತೋ..! ಅವರಿಗೆ ನನ್ನಲ್ಲಿ ಸ್ಪಿನ್ ಟ್ಯಾಲೆಂಟ್ ಇರುವುದನ್ನು ಕಂಡರು. ಆ ಕಡೆಯೇ ಒಂದಷ್ಟು ಸಲಹೆಗಳೊಂದಿಗೆ ನನ್ನನ್ನು ತಿದ್ದಿದರು," ಎಂದು ಕುಲದೀಪ್ ಯಾದವ್ ಸ್ಮರಿಸಿಕೊಂಡಿದ್ದಾರೆ.
ವಾರ್ನೆ ಕೈಲಿ ಶಹಬ್ಬಾಸ್ ಎನಿಸಿಕೊಂಡಿರುವ ಕುಲದೀಪ್ ಯಾದವ್'ಗೆ ಸ್ಫೂರ್ತಿ ಸಿಕ್ಕಿದ್ದು ಶೇನ್ ವಾರ್ನೆ ಅವರಿಂದಲೇ. ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್'ಗಳ ಪೈಕಿ ಒಬ್ಬರೆನಿಸಿರುವ ಶೇನ್ ವಾರ್ನ್ ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೋಗಳನ್ನೇ ನೋಡಿಕೊಂಡು ಬಹುತೇಕ ಸ್ಪಿನ್ ಕಲೆಗಳನ್ನು ಕಲಿತರಂತೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.