Birmingham ಕಾಮನ್‌ವೆಲ್ತ್‌ ಗೇಮ್ಸ್‌ಗಿಂದು ಅದ್ದೂರಿ ಚಾಲನೆ

By Kannadaprabha News  |  First Published Jul 28, 2022, 11:26 AM IST

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ಗೆ ಇಂದು ಚಾಲನೆ
* ಮಿನಿ ಒಲಿಂಪಿಕ್ಸ್ ಎಂದೇ ಹೆಸರಾಗಿರುವ ಕಾಮನ್‌ವೆಲ್ತ್ ಗೇಮ್ಸ್ ಕೂಟ
* ಉದ್ಘಾಟನಾ ಕಾರ್ಯಕ್ರಮಕ್ಕೆ 30,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆ 
 


ಬರ್ಮಿಂಗ್‌ಹ್ಯಾಮ್(ಜು.28)‌: 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ದೊರೆಯಲಿದೆ. ಇಲ್ಲಿನ ಅಲೆಕ್ಸಾಂಡರ್‌ ಕ್ರೀಡಾಂಗಣದಲ್ಲಿ ಸ್ಥಳೀಯ ಕಾಲಮಾನ ಸಂಜೆ 7ಕ್ಕೆ (ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ) ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಾಂಸ್ಕೃತಿಕ ಕಲಾ ವೈಭವ ಪ್ರದರ್ಶನಗೊಳ್ಳಲಿದೆ. ಸದ್ಯ ದೇಶದೊಳಗೆ ಹಲವು ಸಂಕಷ್ಟಗಳಿದ್ದರೂ ಇಂಗ್ಲೆಂಡ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ. ಉದ್ಘಾಟನಾ ಸಮಾರಂಭಕ್ಕೆ 30,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

ರಾಣಿ ಎಲಿಜೆಬೆತ್‌ ಉದ್ಘಾಟನಾ ಸಮಾರಂಭಕ್ಕೆ ಗೈರಾಗಲಿದ್ದು, ರಾಜಕುಮಾರ್‌ ಚಾರ್ಲ್ಸ್ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಣಿ ಎಲಿಜೆಬೆತ್‌ ಬಕ್ಕಿಂಗ್‌ಹ್ಯಾಮ್‌ ಅರಮನೆಯಿಂದಲೇ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಎಂದು ಸಂದೇಶವೊಂದನ್ನು ಓದುವ ಮೂಲಕ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ ಮೂಲದ ಡುರಾನ್‌ ಡುರಾನ್‌ ಎನ್ನುವ ಸಂಗೀತ ತಂಡ ಪ್ರದರ್ಶನ ನೀಡಲಿದೆ. ಜೊತೆಗೆ ಬಹು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಟೋನಿ ಲೊಮ್ಮಿ, ಸ್ಯಾಕ್ಸಾಫೋನ್‌ ವಾದಕ ಸೊವೆಟೊ ಕಿಂಚ್‌, ವಯೋಲಿನ್‌ ವಾದಕರಾದ ಮಾರ್ಷಲ್‌ ಮತ್ತು ಗ್ಯಾಂಬಿನಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಡಿಜೆ ಔಡೆನ್‌ ಆ್ಯಲೆನ್‌ ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

100+ ಪದಕ ಭಾರತದ ಟಾರ್ಗೆಟ್‌

ಭಾರತದ 214 ಕ್ರೀಡಾಪಟುಗಳು ಈ ಬಾರಿ ಕ್ರೀಡಾಕೂಟದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ 26 ಚಿನ್ನ ಸೇರಿ ಒಟ್ಟು 66 ಪದಕ ಗೆದ್ದಿದ್ದ ಭಾರತ ಈ ಬಾರಿ 100ಕ್ಕೂ ಹೆಚ್ಚು ಪದಕ ಗೆಲ್ಲುವ ಗುರಿ ಹೊಂದಿದೆ. 2010ರಲ್ಲಿ ನವದೆಹಲಿಯಲ್ಲಿ ಕ್ರೀಡಾಕೂಟ ನಡೆದಾಗ 38 ಚಿನ್ನ ಸೇರಿ ಒಟ್ಟು 101 ಪದಕ ಗೆದ್ದಿದ್ದ ಭಾರತಕ್ಕೆ ಈ ಬಾರಿ ಶೂಟಿಂಗ್‌, ಆರ್ಚರಿ ಇಲ್ಲದಿರುವುದರಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಶೂಟಿಂಗ್‌ನಲ್ಲಿ ಭಾರತಕ್ಕೆ ಈ ವರೆಗೂ 63 ಚಿನ್ನ ಸೇರಿ ಒಟ್ಟು 135 ಪದಕ ದೊರೆತಿದೆ. 2002ರಿಂದ ಪ್ರತಿ ಬಾರಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ. ಈ ಬಾರಿಯೂ ಅದೇ ಗುರಿ ಹೊಂದಿದ್ದು, ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕುಸ್ತಿ ಹಾಗೂ ಟೇಬಲ್‌ ಟೆನಿಸ್‌ನಲ್ಲಿ ಹೆಚ್ಚು ಪದಕಗಳನ್ನು ನಿರೀಕ್ಷೆ ಮಾಡುತ್ತಿದೆ.

Commonwealth Games 2022 ಮಿನಿ ಒಲಿಂಪಿಕ್ಸ್‌ನ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಸಿಂಧು ಭಾರತದ ಧ್ವಜಧಾರಿಣಿ

ಉದ್ಘಾಟನಾ ಸಮಾರಂಭದ ವೇಳೆ ನಡೆಯಲಿರುವ ಪಥ ಸಂಚಲನದಲ್ಲಿ 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು ಭಾರತದ ಧ್ವಜಧಾರಿಣಿಯಾಗಲಿದ್ದಾರೆ ಎಂದು ಬುಧವಾರ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಘೋಷಿಸಿದೆ. ಐಒಎಗೆ ನೀರಜ್‌ ಚೋಪ್ರಾರನ್ನು ಧ್ವಜಧಾರಿಯಾಗಿ ನೇಮಿಸುವ ಉದ್ದೇಶವಿತ್ತು. ಆದರೆ ಅವರು ಗಾಯಗೊಂಡು ಹೊರಬಿದ್ದ ಕಾರಣ ಸಿಂಧು ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಒಲಿಂಪಿಕ್ಸ್‌ ಪದಕ ವಿಜೇತರಾದ ಮೀರಾಬಾಯಿ ಚಾನು, ಲವ್ಲೀನಾ ಬೊರ್ಗೊಹೈನ್‌ರ ಹೆಸರುಗಳನ್ನೂ ಪರಿಗಣಿಸಲಾಗಿತ್ತು. ಆದರೆ ಸಿಂಧು ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಐಒಎ ಪ್ರಧಾನ ಕಾರ‍್ಯದರ್ಶಿ ರಾಜೀವ್‌ ಮೆಹ್ತಾ ಹೇಳಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಂದು ದೇಶದಿಂದ ಗರಿಷ್ಠ 164 ಮಂದಿ ಪಾಲ್ಗೊಳ್ಳಬಹುದಾಗಿದ್ದು, ಇದರಲ್ಲಿ ಅಥ್ಲೀಟ್‌ಗಳು ಮತ್ತು ಅಧಿಕಾರಿಗಳು ಇರಲಿದ್ದಾರೆ.

ಕಾಮನ್ವೆಲ್ತ್‌: ಜುಡೋ ಪಟು ಜಸ್ಲೀನ್‌ ಸ್ಪರ್ಧೆಗೆ ಅನುಮತಿ

ನವದೆಹಲಿ: ಭಾರತದ ಜುಡೋ ಪಟು ಜಸ್ಲೀನ್‌ ಸಿಂಗ್‌ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಬುಧವಾರ ದೆಹಲಿ ಹೈಕೋರ್ಚ್‌ ಅನುಮತಿ ನೀಡಿದೆ. ತಮ್ಮ ವಿರುದ್ಧ ಕೇಳಿಬಂದಿದ್ದ ಅನುಚಿತ ವರ್ತನೆಯ ಆರೋಪಗಳಿಂದ ಜಸ್ಲೀನ್‌ ಮುಕ್ತರಾಗಿದ್ದಾರೆ. ಕಳೆದ ತಿಂಗಳು ಸ್ಪೇನ್‌ನಲ್ಲಿ ಅಭ್ಯಾಸ ಶಿಬಿರದ ವೇಳೆ ಕೆಲ ಮಹಿಳಾ ಕ್ರೀಡಾಪಟುಗಳ ಜೊತೆ ಕಿತ್ತಾಡಿದ್ದ ಆರೋಪಕ್ಕೆ ತುತ್ತಾಗಿದ್ದರು. ಆದರೆ ತಪ್ಪು ಮಾಹಿತಿಯಿಂದ ಆದ ಘಟನೆ ಎಂದು ಮಹಿಳಾ ಕ್ರೀಡಾಪಟುಗಳು ‘ಕ್ಲೀನ್‌ ಚಿಟ್‌’ ನೀಡಿದ್ದರು. ಇದಾಗ್ಯೂ ಭಾರತೀಯ ಜುಡೋ ಫೆಡರೇಶನ್‌, ಕಾಮನ್‌ವೆಲ್ತ್‌ ಗೇಮ್ಸ್‌ ತಂಡದಿಂದ ಜಸ್ಲೀನ್‌ ಹೆಸರನ್ನು ಕೈಬಿಟ್ಟಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಜಸ್ಲೀನ್‌ ಕೋರ್ಚ್‌ ಮೆಟ್ಟಿಲೇರಿದ್ದರು.

click me!