Commonwealth Games 2022 ಮಿನಿ ಒಲಿಂಪಿಕ್ಸ್‌ನ ಇಂಟ್ರೆಸ್ಟಿಂಗ್ ಸಂಗತಿಗಳಿವು..!
* ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ
* ಜುಲೈ 28ರಿಂದ ಆಗಸ್ಟ್ 08ರವರೆಗೆ ನಡೆಯಲಿರುವ ಕ್ರೀಡಾಕೂಟ
* ಈ ಬಾರಿ ಗೇಮ್ಸ್‌ನಲ್ಲಿ 72 ರಾಷ್ಟ್ರಗಳು ಭಾಗಿ
ಬರ್ಮಿಂಗ್‌ಹ್ಯಾಮ್(ಜು.27): 2022ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಂದು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸ್ಪರ್ಧೆಗಳು ಜುಲೈ 29ರಿಂದ ಆರಂಭಗೊಳ್ಳಲಿವೆ. 22ನೇ ಆವೃತ್ತಿಯ ಕ್ರೀಡಾಕೂಟವು 11 ದಿನಗಳ ಕಾಲ ನಡೆಯಲಿದ್ದು, ಸಮಾರೋಪ ಸಮಾರಂಭ ಆಗಸ್ಟ್ 8ಕ್ಕೆ ನಡೆಯಲಿದೆ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳಲಿವೆ.
ಮೊದಲು ದಕ್ಷಿಣ ಆಫ್ರಿಕಾದ ಡರ್ಬನ್ ಹಾಗೂ ಕೆನಡಾದ ಎಡ್‌ಮಾಂಟನ್ 2022ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿತ್ತು. ಎಡ್‌ಮಾಂಟನ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಡರ್ಬನ್‌ಗೆ ಗೇಮ್ಸ್ ಆಯೋಜನೆ ಆತಿಥ್ಯ ಲಭಿಸಿತ್ತು. ಆದರೆ ಆರ್ಥಿಕ ಸಮಸ್ಯೆಯ ಕಾರಣ 2017ರಲ್ಲಿ ಡರ್ಬನ್ ಕೂಡಾ ಆತಿಥ್ಯದಿಂದ ಹಿಂದೆ ಸರಿದಿತ್ತು. ಹೀಗಾಗಿ ಇಂಗ್ಲೆಂಡ್‌ನ ನಗರಗಳಾದ ಬರ್ಮಿಂಗ್‌ಹ್ಯಾಮ್, ಲಿವರ್‌ಪೂಲ್ ಹಾಗೂ ಮ್ಯಾಂಚೆಸ್ಟರ್ ಕ್ರೀಡಾಕೂಟ ಆತಿಥ್ಯಕ್ಕೆ ಮುಂದೆ ಬಂದರೂ, ಕೊನೆ ಕ್ಷಣದಲ್ಲಿ ಮ್ಯಾಂಚೆಸ್ಟರ್ ಕೂಡಾ ರೇಸ್‌ನಿಂದ ಹೊರಗುಳಿಯಿತು. 2017ರ ಸೆಪ್ಟಂಬರ್‌ನಲ್ಲಿ ಬ್ರಿಟನ್ ಸರ್ಕಾರ ಕ್ರೀಡಾಕೂಟವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಸುವುದಾಗಿ ಘೋಷಿಸಿತು.
ಬರ್ಮಿಂಗ್‌ಹ್ಯಾಮ್ ಆಯ್ಕೆ ಯಾಕೆ?
ಬರ್ಮಿಂಗ್‌ಹ್ಯಾಮ್ ನಗರ ಈಗಾಗಲೇ ಕ್ರಿಕೆಟ್, ರಗ್ಬಿ, ಟೆನಿಸ್, ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಜಾಗತಿಕ ಮಟ್ಟದ ಟೂರ್ನಿಗಳನ್ನು ಆಯೋಜಿಸಿ ಕ್ರೀಡೆಗೆ ಪೂರಕ ಎನಿಸಿಕೊಂಡಿದೆ. ಹೀಗಾಗಿ ಕ್ರೀಡಾಕೂಟಕ್ಕೆ ಅಗತ್ಯವಿರುವ ಸುಸಜ್ಜಿತ ಸ್ಥಳ, ಕ್ರೀಡಾಂಗಣಗಳು ಲಭ್ಯವಿದೆ. ವಿದೇಶಿ ಪ್ರಯಾಣಿಕರಿಗೂ ಎಲ್ಲಾ ರೀತಿಯ ಅನುಕೂಲಗಳು ಇರುವ ಕಾರಣ ಈ ನಗರವನ್ನು ಆಯ್ಕೆ ಮಾಡಲಾಯಿತು.
ಕಳೆದ ಬಾರಿಗಿಂತ ಹೆಚ್ಚು ಸ್ಪರ್ಧಿಗಳು
ಈ ಬಾರಿ ಗೇಮ್ಸ್‌ನಲ್ಲಿ 72 ರಾಷ್ಟ್ರಗಳು ಪಾಲ್ಗೊಳ್ಳಲಿದ್ದು, 5,000ಕ್ಕೂ ಹೆಚ್ಚಿನ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್‌ನಲ್ಲಿ 71 ದೇಶಗಳ 4,400 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಈ ಬಾರಿ ಮಾಲ್ಡೀವ್ಸ್ ಕ್ರೀಡಾಕೂಟಕ್ಕೆ ಸೇರ್ಪಡೆಗೊಂಡಿದೆ. ಮಹಿಳಾ ಕ್ರಿಕೆಟ್, 3*3 ಬಾಸ್ಕೆಟ್‌ಬಾಲ್, ವ್ಹೀಲ್ ಚೇರ್ ಬಾಸ್ಕೆಟ್‌ಬಾಲ್ ಹಾಗೂ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆಗಳನ್ನು ಈ ಬಾರಿ ಹೊಸದಾಗಿ ಕ್ರೀಡಾಕೂಟಕ್ಕೆ ಸೇರ್ಪಡೆಗೊಳಿಸಲಾಗಿದೆ. 19 ವಿವಿಧ ಕ್ರೀಡೆಗಳಲ್ಲಿ 283 ಸ್ಪರ್ಧೆಗಳು ನಡೆಯಲಿದ್ದು, ಅಥ್ಲೀಟ್‌ಗಳಿಗೆ 1,875 ಪದಕ ಗೆಲ್ಲಲು ಅವಕಾಶವಿದೆ. 15 ವಿವಿಧ ಕಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಾರತದಿಂದ 216 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದು, ಬ್ರಿಟನ್‌ನಿಂದ ಅತೀ ಹೆಚ್ಚು ಅಂದರೆ 440 ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್‌ನಲ್ಲಿ 3ನೇ ಗೇಮ್ಸ್
ಇದು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 3ನೇ ಕಾಮನ್‌ವೆಲ್ತ್ ಗೇಮ್ಸ್. ಈ ಮೊದಲು 1934ರಲ್ಲಿ ಲಂಡನ್ ಹಾಗೂ 2002ರಲ್ಲಿ ಮ್ಯಾಂಚೆಸ್ಟರ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದವು.
ವಿದ್ಯಾರ್ಥಿಗಳಿಂದ ಪದಕ ವಿನ್ಯಾಸ!
ಈ ಬಾರಿಯ ಕ್ರೀಡಾಕೂಟದ ಪದಕಗಳಿಗೆ ವಿನ್ಯಾಸ ಮಾಡಿದ್ದು ಮೂವರು ವಿದ್ಯಾರ್ಥಿಗಳು ಎನ್ನುವುದು ವಿಶೇಷ. ಆ್ಯಂಬರ್ ಅಲೈಸ್, ಫ್ರಾನ್ಸೆಸ್ಕಾ ವಿಲ್ಕಾಕ್ಸ್ ಹಾಗೂ ಕ್ಯಾತರಿನಾ ರೋಡ್ರಿಗಸ್ ಎಂಬವರು ಪದಕ, ರಿಬ್ಬನ್ ಹಾಗೂ ಪದಕದ ಬಾಕ್ಸ್‌ಗಳನ್ನು ವಿನ್ಯಾಸ ಮಾಡಿದ್ದಾರೆ. ದೃಷ್ಟಿಹೀನ ಅಥ್ಲೀಟ್‌ಗಳೂ ವಿನ್ಯಾಸವನ್ನು ಅನುಭವಿಸುವ ರೀತಿಯಲ್ಲಿ ಪದಕಗಳನ್ನು ತಯಾರಿಸಲಾಗಿದೆ. ಚಿನ್ನ ಹಾಗೂ ಬೆಳ್ಳಿ ತಲಾ 150 ಗ್ರಾಂ, ಕಂಚಿನ ಪದಕ 130 ಗ್ರಾಂ ತೂಕವಿದೆ. ಪದಕಗಳು 66 ಮಿ.ಮೀ. ಅಗಲ, 74.3 ಮಿ.ಮೀ. ಉದ್ದವಿದೆ.
ಲವ್ಲೀನಾ ಕಿರುಕುಳ ಆರೋಪ: ಕೋಚ್ ಬದಲಿಸಿದ ತೀರ್ಮಾನ ಸಮರ್ಥಿಸಿಕೊಂಡ ಬಿಎಫ್ಐ, ಒಲಿಂಪಿಕ್ ಸಂಸ್ಥೆ.!
7,500 ಕೋಟಿ ರು. ಖರ್ಚು!
ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟ ಆಯೋಜನೆಗೆ 7500 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಶೇ.75ರಷ್ಟು ಹಣವನ್ನು ಬ್ರಿಟನ್ ಸರ್ಕಾರ ಭರಿಸಲಿದ್ದು, ಉಳಿದ 25% ಹಣವನ್ನು ಬರ್ಮಿಂಗ್‌ಹ್ಯಾಮ್ ನಗರ ಕೌನ್ಸಿಲ್ ಖರ್ಚು ಮಾಡಲಿದೆ. ಇದು 2018ರ ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್(9,300 ಕೋಟಿ ರು.)ಗಿಂತ ಕಡಿಮೆ ಹಾಗೂ 2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್(5,200 ಕೋಟಿ ರು.)ಗಿಂತ ಹೆಚ್ಚು.
ಪುರುಷರಿಗಿಂತ ಮಹಿಳೆಯರಿಗೆ ಈ ಬಾರಿ ಹೆಚ್ಚು ಪದಕ!
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಪದಕಗಳನ್ನು ಪಡೆಯಲಿದ್ದಾರೆ. 283 ಪದಕ ಸ್ಪರ್ಧೆಗಳ ಪೈಕಿ ಮಹಿಳಾ ವಿಭಾಗಕ್ಕೆ 136 ಪದಕಗಳು ಲಭಿಸಲಿದ್ದು, 134 ಪದಕ ಸ್ಪರ್ಧೆಗಳಲ್ಲಿ ಪುರುಷರು ಕಣಕ್ಕಿಳಿಯಲಿದ್ದಾರೆ. ಉಳಿದ 13 ಪದಕಗಳು ಮಿಶ್ರ ತಂಡ ವಿಭಾಗದಲ್ಲಿ ನೀಡಲಾಗುತ್ತದೆ.
‘ಪೆರ್ರಿ’ ಎಂಬ ಗೂಳಿ ಕ್ರೀಡಾಕೂಟದ ಮ್ಯಾಸ್ಕಟ್!
ಹಲವು ಬಣ್ಣಗಳನ್ನು ಹೊಂದಿರುವ ಪೆರ್ರಿ ಹೆಸರಿನ ಗೂಳಿ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದ ಅಧಿಕೃತ ಮ್ಯಾಸ್ಕಾಟ್. ಬರ್ಮಿಂಗ್‌ಹ್ಯಾಮ್‌ನ ಪೆರ್ರಿ ಬಾರ್ ಎಂಬ ಸ್ಥಳವೊಂದರ ಹೆಸರನ್ನು ಮ್ಯಾಸ್ಕಾಟ್‌ಗೆ ಇಡಲಾಗಿದೆ. ಇದನ್ನು ಬಾಲ್ಟನ್‌ನ 10 ವರ್ಷದ ಎಮ್ಮಾ ಲೂ ಎಂಬ ಬಾಲಕಿ ಸಿದ್ಧಪಡಿಸಿರುವುದು ವಿಶೇಷ.
72 ರಾಷ್ಟ್ರಗಳಲ್ಲಿ ಸಂಚರಿಸಿದ ಗೇಮ್ಸ್‌ನ ಕ್ವೀನ್ಸ್ ಬ್ಯಾಟನ್ ರಿಲೇ
ಕಾಮನ್‌ವೆಲ್ತ್ ಗೇಮ್ಸ್‌ನ ಪ್ರಚಾರಕ್ಕಾಗಿ ಕ್ವೀನ್ಸ್ ಬ್ಯಾಟನ್ ರಿಲೇ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲಾ 72 ರಾಷ್ಟ್ರಗಳಲ್ಲಿ ಸಂಚರಿಸಲಿದೆ. 2021ರ ಅಕ್ಟೋಬರ್ 7ರಂದು ಬ್ಯಾಟನ್ ರಿಲೇ ಓಟ ಆರಂಭವಾಗಿದ್ದು, 294 ದಿನಗಳ ಕಾಲ ವಿವಿಧ ದೇಶಗಳಲ್ಲಿ ಸಂಚರಿಲಿದೆ. ಇತ್ತೀಚೆಗೆ ಭಾರತದ ಬೆಂಗಳೂರು, ಭುವನೇಶ್ವರ್ ಹಾಗೂ ನವದೆಹಲಿಗೂ ಬ್ಯಾಟನ್ ರಿಲೇ ಆಗಮಿಸಿತ್ತು.
92 ವರ್ಷಗಳ ಇತಿಹಾಸ
ಬ್ರಿಟೀಷರು ಆಳಿದ ದೇಶಗಳೆಲ್ಲಾ (ಬ್ರಿಟಿಷ್ ಸಾಮ್ರಾಜ್ಯ) ಒಟ್ಟಿಗೆ ಪಾಲ್ಗೊಳ್ಳುವ ಕ್ರೀಡಾಕೂಟವನ್ನು ಕಾಮನ್‌ವೆಲ್ತ್ ಗೇಮ್ಸ್ ಎಂದು ಕರೆಯಲಾಗುತ್ತದೆ. ಈ ಕ್ರೀಡಾಕೂಟವನ್ನು ಆಯೋಜಿಸುವ ಬಗ್ಗೆ 1891ರಲ್ಲೇ ಪ್ರಸ್ತಾಪಿಸಲಾಗಿತ್ತಾದರೂ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ನಡೆದಿದ್ದು 1930ರಲ್ಲಿ. ಕೆನಡಾದ ಹ್ಯಾಮಿಲ್ಟನ್ ಚೊಚ್ಚಲ ಗೇಮ್ಸ್‌ಗೆ ಆತಿಥ್ಯ ನೀಡಿತ್ತು. ಬಳಿಕ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. 1942, 1946ರಲ್ಲಿ 2ನೇ ಮಹಾಯುದ್ಧದ ಕಾರಣ ಕ್ರೀಡಾಕೂಟ ನಡೆದಿರಲಿಲ್ಲ. ಈ ವರೆಗೂ 21 ಕ್ರೀಡಾಕೂಟಗಳು ನಡೆದಿದ್ದು 9 ದೇಶಗಳು ಆತಿಥ್ಯ ವಹಿಸಿವೆ.