ಬಿಎಫ್'ಸಿಗೆ ಸೋಲಿನ ಆಘಾತ; ಮೋಹನ್ ಬಗಾನ್'ಗೆ ಪ್ರಶಸ್ತಿ ಆಸೆ ಜೀವಂತ

By Suvarna Web DeskFirst Published Apr 1, 2017, 3:33 PM IST
Highlights

14 ಪಂದ್ಯಗಳಿಂದ 18 ಪಾಯಿಂಟ್ ಹೊಂದಿರುವ ಬೆಂಗಳೂರಿಗರು ಪ್ರಶಸ್ತಿ ರೇಸ್'ನಿಂದ ಈಗಾಗಲೇ ಹೊರಬಿದ್ದಿದ್ದಾರೆ.

ಕೋಲ್ಕತಾ(ಏ. 01): ಹಾಲಿ ಐ-ಲೀಗ್ ಸೀಸನ್'ನಲ್ಲಿ ಚಾಂಪಿಯನ್ಸ್ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಕಳಪೆ ಪ್ರದರ್ಶನ ಮುಂದುವರಿದಿದೆ. ಪಶ್ಚಿಮ ಬಂಗಾಳ ರಾಜಧಾನಿಯ ರಬೀಂದ್ರ ಸರೋಬರ್ ಸ್ಟೇಡಿಯಂನಲ್ಲಿ ನಡೆದ ತನ್ನ 14ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಎಫ್'ಸಿ ತಂಡ 0-3 ಗೋಲುಗಳಿಂದ ಮೋಹನ್ ಬಗಾನ್'ಗೆ ಶರಣಾಗಿದೆ. ಆತಿಥೇಯ ಮೋಹನ್ ಬಗಾನ್ ತಂಡದ ಪರ ಜಪಾನೀ ಸ್ಟ್ರೈಕರ್ ಯುಸಾ ಕಟ್ಸುಮಿ(14  ಮತ್ತು 53ನೇ ನಿಮಿಷ) ಎರಡು ಗೋಲು ಗಳಿಸಿದರೆ, ಡರಿಲ್ ಡಫಿ(25ನೇ ನಿಮಿಷ) ಒಂದು ಗೋಲು ಗಳಿಸಿದರು. ಪಂದ್ಯಾದ್ಯಂತ ಕಳಪೆ ಪ್ರದರ್ಶನ ನೀಡಿದ ಬೆಂಗಳೂರಿಗರು ಅದೃಷ್ಟಕ್ಕೆ ಇನ್ನೂ ಹೆಚ್ಚಿನ ಅಂತರದ ಸೋಲಿನಿಂದ ಬಚಾವ್ ಆದರು. ಎರಡು ಬಾರಿ ಐ-ಲೀಗ್ ಚಾಂಪಿಯನ್ಸ್ ಎನಿಸಿರುವ ಬಿಎಫ್'ಸಿ ಇಷ್ಟು ಹೀನಾಯ ಪ್ರದರ್ಶನ ತೋರುತ್ತಿರುವುದು ಈ ಸೀಸನ್'ನಲ್ಲಿ ಮಾತ್ರವೇ.

ಇತ್ತ, ಮೋಹನ್ ಬಗಾನ್ ಈ ಗೆಲುವಿನೊಂದಿಗೆ ಚಾಂಪಿಯನ್'ಶಿಪ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಜೊತೆಗೆ, ಎರಡು ವಾರದ ಹಿಂದೆ ಎಎಫ್'ಸಿ ಕಪ್'ನಲ್ಲಿ ಬೆಂಗಳೂರು ಎಫ್'ಸಿ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಐ-ಲೀಗ್'ನಲ್ಲಿ 13 ಪಂದ್ಯಗಳಿಂದ 26 ಅಂಕ ಹೊಂದಿರುವ ಮೋಹನ್ ಬಗಾನ್ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಮುಂದುವರಿದಿದೆ. ಏಜ್ವಾಲ್ ಮತ್ತು ಈಸ್ಟ್ ಬೆಂಗಾಳ್ ತಂಡಗಳು 14 ಪಂದ್ಯಗಳನ್ನಾಡಿ ತಲಾ 30 ಮತ್ತು 27 ಪಾಯಿಂಟ್'ಗಳೊಂದಿಗೆ ಮೊದಲೆರಡು ಸ್ಥಾನದಲ್ಲಿವೆ. ಪ್ರಶಸ್ತಿಗಾಗಿ ಏಜ್ವಾಲ್, ಈಸ್ಟ್ ಬೆಂಗಾಳ್ ಮತ್ತು ಮೋಹನ್ ಬಗಾನ್ ನಡುವೆ ನಿಕಟ ಪೈಪೋಟಿ ಇದೆ. 14 ಪಂದ್ಯಗಳಿಂದ 18 ಪಾಯಿಂಟ್ ಹೊಂದಿರುವ ಬೆಂಗಳೂರಿಗರು ಪ್ರಶಸ್ತಿ ರೇಸ್'ನಿಂದ ಈಗಾಗಲೇ ಹೊರಬಿದ್ದಿದ್ದಾರೆ. ಬಿಎಫ್'ಸಿ ತಮ್ಮ ಮುಂದಿನ ಐ-ಲೀಗ್ ಪಂದ್ಯವನ್ನು ಅಗ್ರಸ್ಥಾನಿ ಏಜ್ವಾಲ್ ವಿರುದ್ಧ ತವರಿನಲ್ಲಿ ಏ.9ರಂದು ಆಡಲಿದೆ. ಪ್ರಶಸ್ತಿ ರೇಸ್'ನಲ್ಲಿರುವ ಏಜ್ವಾಲ್ ತಂಡಕ್ಕೆ ಇದು ಬಹಳ ಮಹತ್ವದ ಪಂದ್ಯವಾಗಿದೆ. ಆದರೆ, ಏಜ್ವಾಲ್ ತಂಡವನ್ನು ಎದುರಿಸುವ ಮುನ್ನ ಏ.4ರಂದು ಮಹತ್ವದ ಎಎಫ್'ಸಿ ಕಪ್ ಟೂರ್ನಿಯಲ್ಲಿ ಬೆಂಗಳೂರಿಗರು ಮಾಲ್ಡೀವ್ಸ್'ನ ಮಾಜಿಯಾ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಎದುರುಗೊಳ್ಳಲಿದೆ.

ಇನ್ನು, ಮುಂಬೈ ಎಫ್'ಸಿ ತಂಡವು ಈ ಬಾರಿಯ ಐ-ಲೀಗ್'ನಿಂದ ಹಿಂಬಡ್ತಿ ಪಡೆಯುವ ಅಪಾಯದಲ್ಲಿದೆ. 14 ಪಂದ್ಯಗಳಿಂದ 10 ಅಂಕ ಹೊಂದಿರುವ ಮುಂಬಯಿಕರು ಕೊನೆಯ ಸ್ಥಾನದಲ್ಲಿದ್ದು, ಕೆಳಗಿನ ಲೀಗ್'ಗೆ ರೆಲಿಗೇಟ್ ಆಗುವ ನಿರೀಕ್ಷೆ ಇದೆ.

click me!