
ಬೆಂಗಳೂರು(ಜ. 07): ಕಳೆದ ವರ್ಷ ಬೆಂಗಳೂರು ಫುಟ್ಬಾಲ್ ಕ್ಲಬ್ ಇಡೀ ದೇಶದ ಗಮನ ಸೆಳೆದಿತ್ತು. ಐ-ಲೀಗ್ ಚಾಂಪಿಯನ್ ಆಗಿದ್ದಷ್ಟೇ ಅಲ್ಲ, ಏಷ್ಯಾ ಮಟ್ಟದ ಏಷ್ಯನ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಎಲ್ಲರ ಹುಬ್ಬೇರಿಸಿತು. ಸ್ಥಾಪನೆಯಾಗಿ ಮೂರೇ ವರ್ಷದಲ್ಲಿ ಭಾರತದ ಫುಟ್ಬಾಲ್ ಕ್ರೀಡೆಯ ಭಾಷ್ಯವನ್ನೇ ಬದಲಿಸಿದ ಬೆಂಗಳೂರು ಎಫ್’ಸಿ, ಫುಟ್ಬಾಲ್’ನಲ್ಲಿ ಭಾರತಕ್ಕೆ ಭವಿಷ್ಯವಿದೆ ಎಂಬುದರ ಸೂಚನೆಯನ್ನು ಸ್ಪಷ್ಟವಾಗಿ ನೀಡಿದೆ. ವೃತ್ತಿಪರತೆಯ ವ್ಯವಸ್ಥೆ ಅಳವಡಿಸಿದರೆ ಕ್ರೀಡೆಯಲ್ಲಿ ಹೇಗೆಲ್ಲಾ ಬೆಳವಣಿಗೆ ಸಾಧಿಸಬಹುದು ಎಂಬುದನ್ನು ಬಿಎಫ್’ಸಿ ಸಾಬೀತುಪಡಿಸಿದೆ.
ಈ ವರ್ಷ ಬೆಂಗಳೂರು ಎಫ್’ಸಿ ಇನ್ನೂ ಒಂದು ಮೆಟ್ಟಿಲು ಮೇಲೇರುವ ಅವಕಾಶ ಹೊಂದಿದೆ. ಕಳೆದ ಋತುವಿನಲ್ಲಿ ಐ-ಲೀಗ್ ಚಾಂಪಿಯನ್ ಆಗಿರುವ ಬಿಎಫ್’ಸಿ ಈ ಬಾರಿ ಏಷ್ಯಾದ ಅತ್ಯುನ್ನತ ಕ್ಲಬ್ ಫುಟ್ಬಾಲ್ ಟೂರ್ನಿ ಎನಿಸಿರುವ ಏಷ್ಯನ್ ಚಾಂಪಿಯನ್ಸ್ ಲೀಗ್’ನಲ್ಲಿ ಪಾಲ್ಗೊಳ್ಳುತ್ತಿದೆ. ಎರಡು ವರ್ಷಗಳ ಹಿಂದೆ ಮೊದಲ ಬಾರಿ ಚಾಂಪಿಯನ್ಸ್ ಲೀಗ್’ನಲ್ಲಿ ಪಾಲ್ಗೊಂಡಿದ್ದ ಬಿಎಫ್’ಸಿ ಮೊದಲ ಅರ್ಹತಾ ಸುತ್ತಿನಿಂದಲೇ ನಿರ್ಗಮಿಸಿತ್ತು. ಅತ್ಯಂತ ಕಠಿಣವೆನಿಸುವ ಚಾಂಪಿಯನ್ಸ್ ಲೀಗ್’ನಲ್ಲಿ ಮೊದಲ ಅರ್ಹತಾ ಸುತ್ತಿನ ಪಂದ್ಯ ಗೆದ್ದರೂ ಬಿಎಫ್’ಸಿಗೆ ಅದೊಂದು ಹೆಮ್ಮೆಯ ಸಾಧನೆಯಾಗಲಿದೆ.
ಇನ್ನು, ಕಳೆದ ಬಾರಿ ಎಎಫ್’ಸಿ ಕಪ್’ನಲ್ಲಿ ಫೈನಲ್’ವರೆಗೂ ಏರಿ ಅಚ್ಚರಿ ಹುಟ್ಟಿಸಿದ ಬೆಂಗಳೂರಿಗರಿಗೆ ತನ್ನ ಸಾಧನೆಯನ್ನು ಉಳಿಸಿಕೊಳ್ಳುವ ಕಷ್ಟದ ಸವಾಲು ಇದೆ. ಜೊತೆಗೆ ಐ-ಲೀಗ್ ಪಟ್ಟವನ್ನೂ ಅದು ಡಿಫೆಂಡ್ ಮಾಡಿಕೊಳ್ಳಬೇಕಿದೆ. ಸ್ಪೇನ್ ದೇಶದ ಆಲ್ಬರ್ಟ್ ರೋಕಾ ಗರಡಿಯಲ್ಲಿ ಬಿಎಫ್’ಸಿ ಈ ವರ್ಷ ಹೊಸ ಕಳೆಗಟ್ಟಿದೆ. ಹಿಂದೆಂದಿಗಿಂತ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ಎಎಫ್’ಸಿ ಕಪ್ ಫೈನಲ್’ನಲ್ಲಿ ಇರಾಕ್’ನ ಏರ್’ಫೋರ್ಸ್ ತಂಡದ ವಿರುದ್ಧ ಬಿಎಫ್’ಸಿ ಆಡಿದ ರೀತಿಯೇ ಇದಕ್ಕೆ ಸಾಕ್ಷಿಯಾಗಿದೆ.
ಸುನೀಲ್ ಛೇಟ್ರಿ ಸೇರಿದಂತೆ ಬಿಎಫ್’ಸಿಯ ಕೆಲ ಪ್ರಮುಖ ಆಟಗಾರರು ಐಎಸ್’ಎಲ್ ಟೂರ್ನಿಯಲ್ಲಿ ಆಡಿ ಬಳಲಿದ್ದಾರೆ. ಆದರೆ, ತಂಡದಲ್ಲಿ ಸಾಕಷ್ಟು ಒಳ್ಳೆಯ ಆಟಗಾರರಿರುವುದರಿಂದ ಸ್ಕ್ವಾಡ್ ರೊಟೇಶನ್ ಮಾಡುವ ಅವಕಾಶ ಕೋಚ್’ಗಿದೆ.
ಬಿಎಫ್’ಸಿಯ ಹಣಾಹಣಿಗಳು
ಐ-ಲೀಗ್:
ಜ. 7ರಿಂದ – ಡಿ. 3ರವರೆಗೆ
ಎಎಫ್’ಸಿ ಚಾಂಪಿಯನ್ಸ್ ಲೀಗ್:
ಮೊದಲ ಅರ್ಹತಾ ಸುತ್ತು: ಜನವರಿ 31 – ಜೋರ್ಡಾನ್’ನ ಅಲ್ ವೆಹಡಾಟ್ ವಿರುದ್ಧ
ಎರಡನೇ ಅರ್ಹತಾ ಸುತ್ತು: ಫೆಬ್ರವರಿ 7 – ಯುಎಇಯ ಅಲ್ ವಹದಾ ವಿರುದ್ಧ
ಪ್ರಧಾನ ಹಂತ: ಫೆಬ್ರವರಿ 21ರಿಂದ ಮೇ 8ರವರೆಗೆ – ಅಲ್ ರಯ್ಯಾನ್(ಕತಾರ್), ಅಲ್ ಹಿಲಾಲ್(ಸೌದಿ ಅರೇಬಿಯಾ), ಪೆರ್ಸೆಪೋಲಿಸ್ ಎಫ್’ಸಿ(ಇರಾನ್) ತಂಡಗಳಿರುವ ಡಿ ಗುಂಪು.
(ಮೊದಲ ಅರ್ಹತಾ ಸುತ್ತಿನಲ್ಲಿ ಗೆದ್ದರಷ್ಟೇ ಎರಡನೇ ಸುತ್ತಿಗೆ ಪ್ರವೇಶಿಸಲು ಸಾಧ್ಯ. ಹಾಗೆಯೇ, ಎರಡನೇ ಅರ್ಹತಾ ಸುತ್ತು ಗೆದ್ದರಷ್ಟೇ ಪ್ರಧಾನ ಹಂತ ತಲುಪಲು ಸಾಧ್ಯ)
ಎಎಫ್’ಸಿ ಕಪ್:
ಮಾರ್ಚ್ 14 ರಿಂದ...
ಬೆಂಗಳೂರು ತಂಡದ ಆಟಗಾರರು:
ಗೋಲ್ ಕೀಪರ್ಸ್: ಅಮರೀಂದರ್ ಸಿಂಗ್, ಲಾಲ್ತುವಮ್ಮಾವಿಯಾ ರಾಲ್ಟೆ
ಡಿಫೆಂಡರ್ಸ್: ಸಲಮ್ ರಂಜನ್ ಸಿಂಗ್, ಕೀಗನ್ ಪೆರೇರಾ, ನಿಶುಕುಮಾರ್, ಲಾಲ್ಚುವಮ್ಮಾವಿಯಾ ಫನಾಯ್, ವಿಶಾಲ್ ಕುಮಾರ್, ರಿನೋ ಆಂಟೋ, ಜಾನ್ ಜಾನ್ಸನ್
ಮಿಡ್’ಫೀಲ್ಡರ್ಸ್: ಆಲ್ವಿನ್ ಜಾರ್ಜ್, ಸೇಮಿನ್ಲೆನ್ ಡೌಂಗೆಲ್, ಮಾಲ್ಸಾವಮ್’ಝುವಾಲಾ, ಸಿಕೆ ವಿನೀತ್, ಶಂಕರ್ ಸಂಪಂಗಿರಾಜ್
ಫಾರ್ವರ್ಡ್ಸ್: ಡೇನಿಯೆಲ್ ಲಾಲಿಂಪುಯಾ, ಸುನೀಲ್ ಚೇಟ್ರಿ, ಉದಾಂಟಾ ಕುಮಾಮ್, ಬೇಕೋಖೇ ಬೇಂಗಾಯ್ಚೋ, ರೋಬಿ ನೋರಾಲೆಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.