'ಬಿಗ್ ತ್ರಿ'ಗೆ ಒಪ್ಪದಿದ್ದರೆ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಗೈರು..?

By Suvarna Web DeskFirst Published Apr 19, 2017, 10:45 AM IST
Highlights

‘‘ಸಭೆಯಲ್ಲಿ ಐಸಿಸಿ ಬಳಿ ‘ಬಿಗ್‌ ತ್ರೀ' ಮಾದರಿ ಮುಂದುವರಿಸಬೇಕೆಂದು ಕೇಳಲು ರಾಜ್ಯ ಸಂಸ್ಥೆಗಳು ಅವಿರೋಧವಾಗಿ ನಿರ್ಧರಿಸಿವೆ. ಜೂನ್‌ ಸಭೆಯಲ್ಲಿ ಹೊಸ ಮಾದರಿಯನ್ನು ಪ್ರಸ್ತಾಪಿಸಲಾಗುತ್ತದೆ''

ಮುಂಬೈ(ಏ.19): ಜೂನ್‌'ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯವರೆಗೂ ಹಣಕಾಸು ಹಂಚಿಕೆಗೆ ಸದ್ಯ ಚಾಲ್ತಿಯಲ್ಲಿರುವ ‘ಬಿಗ್‌ ತ್ರೀ' ಮಾದರಿಯನ್ನು ಉಳಿಸಿಕೊಳ್ಳುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯನ್ನು ಕೇಳಲು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದೆ.

ಏಪ್ರಿಲ್ 27,28ರಂದು ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನದ ನಂತರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸಬೇಕೋ ಇಲ್ಲವೇ ಹಿಂದೆ ಸರಿಯಬೇಕೋ ಎನ್ನುವ ಕುರಿತು ಬಿಸಿಸಿಐ ನಿರ್ಧರಿಸಲಿದೆ ಎಂದು ತಿಳಿದುಬಂದಿದೆ.

‘‘ಸಭೆಯಲ್ಲಿ ಐಸಿಸಿ ಬಳಿ ‘ಬಿಗ್‌ ತ್ರೀ' ಮಾದರಿ ಮುಂದುವರಿಸಬೇಕೆಂದು ಕೇಳಲು ರಾಜ್ಯ ಸಂಸ್ಥೆಗಳು ಅವಿರೋಧವಾಗಿ ನಿರ್ಧರಿಸಿವೆ. ಜೂನ್‌ ಸಭೆಯಲ್ಲಿ ಹೊಸ ಮಾದರಿಯನ್ನು ಪ್ರಸ್ತಾಪಿಸಲಾಗುತ್ತದೆ'' ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದ್ದಾರೆ. 

ಐಸಿಸಿಯ ಮೊದಲ ನಿಯಮದಂತೆ 'ಬಿಗ್ ತ್ರಿ' ರಾಷ್ಟ್ರಗಳೆನಿಸಿಕೊಂಡಿರುವ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೆಚ್ಚು ಲಾಭ ಸಿಗುತ್ತಿತ್ತು. ಭಾರತದವರೇ ಆದ ಶಶಾಮಕ್ ಮನೋಹರ್ ಐಸಿಸಿ ಮುಖ್ಯಸ್ಥರಾದ ಬಳಿಕ ಬಿಸಿಸಿಐನ ಪ್ರಬಲ ವಿರೋಧದ ನಡುವೆಯೂ ಬಿಗ್ ತ್ರಿ ನಿಯಮಕ್ಕೆ ಬದಲಾವಣೆ ತರಲು ಮುಂದಾಗಿದ್ದರು. ಫೆಬ್ರವರಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಹೊಸ ನಿಯಮ ಜಾರಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.

click me!