50 ಆಟಗಾರರಿಗೆ ಬಿಸಿಸಿಐ ಟೆಸ್ಟ್ : ಐಪಿಎಲ್ ವೇಳೆ ಅಗ್ರ ಆಟಗಾರರ ಕೆಲಸದ ಹೊರೆ, ಫಿಟ್ನೆಸ್ ಪರೀಕ್ಷೆ

By Suvarna Web DeskFirst Published Apr 1, 2018, 1:45 PM IST
Highlights

ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ತಂಡ ಬ್ರಿಟನ್ ಪ್ರವಾಸ (ಐರ್ಲೆಂಡ್ ಪ್ರವಾಸ ಸೇರಿ) ಕೈಗೊಳ್ಳಲಿದೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾಗೆ ತೆರಳಲಿದೆ. 2019ರ ಐಸಿಸಿ ಏಕದಿನ ವಿಶ್ವಕಪ್ ವರೆಗೂ ತಂಡ ನಿರಂತರವಾಗಿ ಕ್ರಿಕೆಟ್ ಆಡಲಿದೆ. ಹೀಗಾಗಿ ಪ್ರದರ್ಶನ ತೋರುತ್ತಿರುವ ಆಟಗಾರರ ಕೆಲಸದ ಹೊರೆ ಜತೆಗೆ ವಿವಿಧ ಹಂತಗಳಲ್ಲಿ ಅವರು ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು.

ಮುಂಬೈ(ಏ.01):ಮುಂದಿನ ಒಂದು ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡ ಮಹತ್ವದ ಸರಣಿಗಳನ್ನು ಆಡಲಿರುವ ಕಾರಣ, ಅಗ್ರ 50 ಆಟಗಾರರ ಕೆಲಸ ಹೊರೆ, ದೈಹಿಕ ಕ್ಷಮತೆಯನ್ನು ಐಪಿಎಲ್ ವೇಳೆ ಪರೀಕ್ಷಿಸುವುದಾಗಿ ಬಿಸಿಸಿಐ ಹೇಳಿದೆ. ಸದ್ಯ ಕೇಂದ್ರ ಗುತ್ತಿಗೆ ಹೊಂದಿರುವ 27 ಆಟಗಾರರ ಜತೆ ಹೊಸದಾಗಿ 23 ಆಟಗಾರರನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು.

ಭಾರತ ತಂಡದ ಆಡಳಿತ ತಾರಾ ಅಂತಾರಾಷ್ಟ್ರೀಯ ಆಟಗಾರರು, ಮೀಸಲು ಆಟಗಾರರು ಹಾಗೂ ದೇಸಿ ಆಟಗಾರರನ್ನು ಒಂದೆಡೆ ಸೇರಿಸಿ ಬೆಂಚ್ ಬಲಪಡಿಸಲು ಯೋಜನೆ ರೂಪಿಸಿದೆ. ‘ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ತಂಡ ಬ್ರಿಟನ್ ಪ್ರವಾಸ (ಐರ್ಲೆಂಡ್ ಪ್ರವಾಸ ಸೇರಿ) ಕೈಗೊಳ್ಳಲಿದೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾಗೆ ತೆರಳಲಿದೆ. 2019ರ ಐಸಿಸಿ ಏಕದಿನ ವಿಶ್ವಕಪ್ ವರೆಗೂ ತಂಡ ನಿರಂತರವಾಗಿ ಕ್ರಿಕೆಟ್ ಆಡಲಿದೆ. ಹೀಗಾಗಿ ಪ್ರದರ್ಶನ ತೋರುತ್ತಿರುವ ಆಟಗಾರರ ಕೆಲಸದ ಹೊರೆ ಜತೆಗೆ ವಿವಿಧ ಹಂತಗಳಲ್ಲಿ ಅವರು ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ನಿರೀಕ್ಷಿತ ಫಿಟ್ನೆಸ್ ಮಟ್ಟ ಕಾಯ್ದುಕೊಳ್ಳದಿದ್ದರೆ, ಭಾರತ, ಭಾರತ ‘ಎ’ ತಂಡಗಳಿಗೆ ಅಂತಹ ಆಟಗಾರ ರನ್ನು ಕೈಬಿಡಲಾಗುವುದು. ಭಾರತ ತಂಡದ ಪ್ರಧಾನ ಫಿಸಿಯೋ ಪ್ಯಾಟ್ರಿಕ್ ಫರ‌್ಹಾಟ್ ಈ ಯೋಜನೆಯ ಮೇಲುಸ್ತುವಾರಿ ವಹಿಸಲಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

23 ಆಟಗಾರರ ಆಯ್ಕೆಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಮಾರ್ಗ ಸೂಚಿ ರಚಿಸುತ್ತಿದ್ದು, ಮೂಲಗಳ ಪ್ರಕಾರ ರಿಶಬ್ ಪಂತ್, ಮಯಾಂಕ್ ಅಗರ್‌ವಾಲ್, ಪೃಥ್ವಿ ಶಾ, ಆವೇಶ್ ಖಾನ್ ಹಾಗೂ ದೀಪಕ್ ಹೂಡಾಗೆ ಈ ಪಟ್ಟಿಯಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಐಪಿಎಲ್ ವೇಳೆ ವೇಗದ ಬೌಲರ್‌ಗಳ ಕೆಲಸದ ಹೊರೆ ಮೇಲೂ ಕಣ್ಣಿಡಲು ಬಿಸಿಸಿಐ ಈ ಮೊದಲೇ ನಿರ್ಧರಿಸಿತ್ತು. ವೇಗಿಗಳು ಪಂದ್ಯ ಮಾತ್ರವಲ್ಲದೇ ನೆಟ್ಸ್‌ನಲ್ಲಿ ಎಷ್ಟು ಓವರ್ ಬೌಲ್ ಮಾಡಲಿದ್ದಾರೆ ಎನ್ನುವುದನ್ನು ದಾಖಲಿಸಿ ಕೊಳ್ಳಲಾಗುವುದು. ವಿಶ್ವಕಪ್ ಸೇರಿ ಮಹತ್ವದ ಸರಣಿಗಳು ಮುಂದಿರುವುದರಿಂದ ಕನಿಷ್ಠ ೭ರಿಂದ ೮ ಅತ್ಯುತ್ತಮ ವೇಗಿಗಳನ್ನು ಸಿದ್ಧಪಡಿಸುವುದು ಬಿಸಿಸಿಐ ಗುರಿಯಾಗಿದೆ.

click me!