ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ 50ನೇ ವಸಂತಕ್ಕಿಂದು ಕಾಲಿರಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಸಿಸಿಐ ವಿನೂತನವಾಗಿ ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಆ.05]: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗ ವೆಂಕಟೇಶ್ ಪ್ರಸಾದ್ ಇಂದು 50ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಸ್ಮರಣೀಯ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ವಿನೂತನವಾಗಿ ವೆಂಕಟೇಶ್ ಪ್ರಸಾದ್ ಗೆ ಶುಭ ಕೋರಿದೆ.
This moment is etched forever in every cricket fan's minds. Perfect time to take everyone in a rewind!!! Happy Birthday Venkatesh Prasad! pic.twitter.com/53tudIiSA4
— BCCI (@BCCI)ಹೌದು, 1996ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಅಮೀರ್ ಸೋಹೆಲ್ ವಿಕೆಟ್ ಪಡೆದ ಸ್ಮರಣೀಯ ಕ್ಷಣವನ್ನು ಬಿಸಿಸಿಐ ಹಂಚಿಕೊಂಡಿದ್ದು, ಈ ದೃಶ್ಯ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಅಚ್ಚಳಿಯದೇ ಉಳಿದಿದೆ. ಆ ಕ್ಷಣವನ್ನು ನೆನಪಿಸಿಕೊಳ್ಳಲು ಇದು ಸರಿಯಾದ ಸಮಯ. ಹುಟ್ಟುಹಬ್ಬದ ಶುಭಾಶಯಗಳು ವೆಂಕಟೇಶ್ ಪ್ರಸಾದ್ ಎಂದು ಟ್ವೀಟ್ ಮಾಡಿದೆ.
undefined
ಆ ಪಂದ್ಯದಲ್ಲಿ ಅಂತದ್ದೇನು ಆಗಿತ್ತು..?
1996ರ ಏಕದಿನ ವಿಶ್ವಕಪ್ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿತ್ತು. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಅಭಿಮಾನಿಗಳ ದಂಡೇ ತುದಿಗಾಲಿನಲ್ಲಿ ನಿಂತಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ನವಜೋತ್ ಸಿಂಗ್ ಸಿಧು[93] ಆಕರ್ಷಕ ಬ್ಯಾಟಿಂಗ್ ನೆರವಿನಿಂದ 287 ರನ್ ಬಾರಿಸಿತ್ತು.
ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ನಾಯಕ ಅಮಿರ್ ಸೋಹೆಲ್-ಸಯೀದ್ ಅನ್ವರ್ ಜೋಡಿ ಉತ್ತಮ ಆರಂಭವನ್ನೇ ಒದಗಿಸಿತು. ವೆಂಕಟೇಶ್ ಪ್ರಸಾದ್ ಹಾಕಿದ 15ನೇ ಓವರ್‌ನ 5ನೇ ಎಸೆತದಲ್ಲಿ ಅಮಿರ್ ಸೋಹೆಲ್ ಮುನ್ನುಗಿ ಕವರ್ ಪಾಯಿಂಟ್’ನತ್ತ ಬೌಂಡರಿ ಬಾರಿಸಿದರು. ಮಾತ್ರವಲ್ಲದೆ ಪ್ರಸಾದ್’ಗೆ ಸ್ಲೆಡ್ಜಿಂಗ್ ಮಾಡಿದರು. ಇದಕ್ಕುತ್ತರವಾಗಿ ಮರು ಎಸೆತದಲ್ಲೇ ಪ್ರಸಾದ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಾಕ್ ನಾಯಕ ಸೋಹಿಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಆ ಕ್ಷಣ ಬಹುತೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅತಿಶಯೋಕ್ತಿ ಅಲ್ಲ.
ಭಾರತ ತಂಡವು ಆ ಪಂದ್ಯವನ್ನು 39 ರನ್’ಗಳಿಂದ ಜಯಿಸಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ವಿರುದ್ಧ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿತ್ತು.
ವೆಂಕಟೇಶ್ ಪ್ರಸಾದ್ ಭಾರತ ಪರ 161 ಏಕದಿನ ಪಂದ್ಯಗಳನ್ನಾಡಿ 196 ವಿಕೆಟ್ ಪಡೆದರೆ, 33 ಟೆಸ್ಟ್ ಪಂದ್ಯಗಳನ್ನಾಡಿ 96 ವಿಕೆಟ್ ಪಡೆದಿದ್ದಾರೆ. ಭಾರತಕ್ಕೆ ಹಲವಾರು ಸ್ಮರಣೀಯ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಹೆಮ್ಮೆಯ ಕನ್ನಡಿಗ ವೆಂಕಟೇಶ್ ಪ್ರಸಾದ್ ಗೆ ಸುವರ್ಣನ್ಯೂಸ್. ಕಾಂ ಬಳಗದಿಂದ ಜನ್ಮದಿನದ ಶುಭಾಶಯಗಳು.