
ಕೋಲ್ಕತಾ(ಮಾ.29): ಐಪಿಎಲ್ ಉದ್ಘಾಟನಾ ಸಮಾರಂಭದ ಬಳಿಕ ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಸಿಸಿಐ ಆತಂಕ ವ್ಯಕ್ತಪಡಿಸಿದೆ.
ಏ.7ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ 7.15ಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ 7.30ಕ್ಕೆ ಪಂದ್ಯದ ಟಾಸ್ ನಡೆಯಲಿದ್ದು, 15 ನಿಮಿಷಗಳ ಒಳಗೆ ಕ್ರೀಡಾಂಗಣವನ್ನು ಆಟಕ್ಕಾಗಿ ಅನುವು ಮಾಡಿಕೊಡಬೇಕಿದೆ.
ಈ ವೇಳೆ ಅಭ್ಯಾಸಕ್ಕೆಂದು ಎರಡೂ ತಂಡದ ಆಟಗಾರರು ಅಂಗಳಕ್ಕೆ ಇಳಿಯಲಿದ್ದಾರೆ. ಇನ್ನೊಂದೆಡೆ ಕ್ರೀಡಾಂಗಣದಲ್ಲಿ ಹಾಕಿದ್ದ ವೇದಿಕೆ ಇತರೆ ವಸ್ತುಗಳ ತೆರವುಗೊಳಿಸುವ ಕಾರ್ಯದಲ್ಲಿ ನೂರಾರು ಮಂದಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಬುಕ್ಕಿಗಳು ಇರುವ ಸಾಧ್ಯತೆಯೂ ದಟ್ಟವಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಬುಕ್ಕಿಗಳು ಸುಲಭವಾಗಿ ಆಟಗಾರರನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ)ಗೆ ಪತ್ರದ ಮೂಲಕ ಎಚ್ಚರಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಬಿಸಿಸಿಐ ಪತ್ರದ ಹಿಂದಿನ ರಹಸ್ಯವೇನು?
ಈ ಮೊದಲು ಏ.೬ರಂದೇ ಉದ್ಘಾಟನಾ ಸಮಾರಂಭ ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ, ಏ.7ರಂದು ಉದ್ಘಾಟನಾ ಸಮಾರಂಭ ನಡೆಸಲು ಸೂಚಿಸಿದ್ದ ಸಿಒಎ, ಕಾರ್ಯಕ್ರಮಕ್ಕೆ ಮೀಸಲಿರಿಸಿದ್ದ ಬಜೆಟ್ ಅನ್ನು ಕಡಿತಗೊಳಿಸಿತ್ತು. ಇದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಫಿಕ್ಸಿಂಗ್ ಭೀತಿ ಎದುರಾಗಲಿದೆ ಎನ್ನುವ ವಿಚಾರ ಮುಂದಿಟ್ಟುಕೊಂಡು ಬಿಸಿಸಿಐ ಅಧಿಕಾರಿಗಳು, ಆಡಳಿತ ಸಮಿತಿಯನ್ನು ಗೊಂದಲಕ್ಕೆ ಸಿಲುಕಿಸುವ ಯತ್ನ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.