ಹದ್ದುಮೀರಿ ವರ್ತಿಸಿದ ಬಾಂಗ್ಲಾದೇಶದ ಅಭಿಮಾನಿಗಳು..! ಇದೇನು ಮೊದಲ ಬಾರಿಯಲ್ಲ..!

By Suvarna Web DeskFirst Published Jun 14, 2017, 9:57 PM IST
Highlights

ಇದೀಗ ಹುಲಿ ನಾಯಿಯ ಚಿತ್ರ ಪ್ರಕಟಿಸಿದ ಬಾಂಗ್ಲಾ ಅಭಿಮಾನಿಗಳಿಗೆ ಟೀಂ ಇಂಡಿಯಾ ತಮ್ಮ ಪ್ರದರ್ಶನದ ಮೂಲಕವೇ ತಕ್ಕ ಶಾಸ್ತಿ ಮಾಡಲಿ ಎನ್ನುವುದು ಭಾರತೀಯ ಅಭಿಮಾನಿಗಳ ಆಶಯವಾಗಿದೆ.

ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಬಾಂಗ್ಲಾದೇಶದ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದು ಗಲೀಜು ಕೃತ್ಯದಿಂದ ಇಡೀ ಬಾಂಗ್ಲಾದೇಶವನ್ನೇ ಟೀಕಿಸುವ ಸನ್ನಿವೇಷ ನಿರ್ಮಾಣವಾಗಿದೆ.  

ಹೌದು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸೆಮಿಫೈನಲ್'ನಲ್ಲಿ ಮುಖಾಮುಖಿಯಾಗಲು ಇನ್ನೊಂದು ದಿನ ಬಾಕಿಯಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾ ಅಭಿಮಾನಿಗಳು ಅಸಭ್ಯ ಚಿತ್ರವೊಂದನ್ನು ಪೋಸ್ಟ್ ಮಾಡುವ ಮೂಲಕ ಹದ್ದುಮೀರಿ ವರ್ತಿಸಿದ್ದಾರೆ. ಬಾಂಗ್ಲಾದೇಶದ ದ್ವಜಹೊದ್ದಿರುವ ಹುಲಿಯೊಂದು ತ್ರಿವರ್ಣ ದ್ವಜ ಹೊಂದಿರುವ ನಾಯಿಯನ್ನು ಹಿಡಿಯುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಲೀಜು ಮಾಡಿಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

2015ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾರತ ತಂಡ ಬಾಂಗ್ಲಾದೇಶವನ್ನು 197ರನ್'ಗಳ ಅಂತರದಿಂದ ಬಗ್ಗುಬಡಿದಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ 137ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದ್ದರು. ರೋಹಿತ್ 91 ರನ್ ಗಳಿಸಿದ್ದಾಗ ಹೈ-ಫುಲ್ಟಾಸ್ ಎಸೆತದಲ್ಲಿ ಮಿಡ್ ವಿಕೆಟ್'ನತ್ತ ಕ್ಯಾಚ್ ನೀಡಿದ್ದರು. ಆದರೆ ಅಂಪೈರ್ ಅದನ್ನು ನೋಬಾಲ್ ಎಂದು ತೀರ್ಪು ನೀಡಿದ್ದರು. ಅಲ್ಲಿಂದ ಬಾಂಗ್ಲಾ ಅಭಿಮಾನಿಗಳು ಈ ರೀತಿಯ ವಿಕೃತಿಗಳನ್ನು ಮಾಡುತ್ತಾ ಬಂದಿದ್ದಾರೆ.

ಬಾಂಗ್ಲಾ ಅಭಿಮಾನಿಗಳು ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ತವರಿನಲ್ಲಿ ಭಾರತ ವಿರುದ್ಧ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಬಾಂಗ್ಲಾದೇಶವನ್ನು ಕೊಂಡಾಡುವ ಭರದಲ್ಲಿ ಬಾಂಗ್ಲಾದೇಶದ ಪತ್ರಿಕೆಯೊಂದು ಟೀಂ ಇಂಡಿಯಾ ಆಟಗಾರರ ಅರ್ಧ ತಲೆ ಬೋಳಿಸಿದ, ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಮಸ್ತಾಫಿಜುರ್ ರಹೀಮ್ ಕೈಯಲ್ಲಿ ರೇಜರ್ ಹಿಡಿದ ಚಿತ್ರ ಪ್ರಕಟಿಸುವ ಮೂಲಕ ವಿಕೃತಿ ಮರೆದಿತ್ತು.

ಇನ್ನು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಫೈನಲ್'ಗೂ ಮುನ್ನ ಬಾಂಗ್ಲಾ ಬೌಲರ್ ಟಸ್ಕಿನ್ ಅಹ್ಮದ್ ಟೀಂ ಇಂಡಿಯಾ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿಯ ರುಂಡವನ್ನು ಕೈಯಲ್ಲಿ ಹಿಡಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿತ್ತು. ಆದರೆ ಆ ಬಗ್ಗೆ ತಲೆಕೆಡಿಸಿಕೊಳ್ಳದ ಮಾಹಿ ಪಡೆ ಬಾಂಗ್ಲಾದೇಶವನ್ನು ಬಗ್ಗುಬಡಿದು ಏಷ್ಯಾಕಪ್ ಸಾಮ್ರಾಟನಾಗಿ ಮೆರೆದಾಡಿತು.

ಇದೀಗ ಹುಲಿ ನಾಯಿಯ ಚಿತ್ರ ಪ್ರಕಟಿಸಿದ ಬಾಂಗ್ಲಾ ಅಭಿಮಾನಿಗಳಿಗೆ ಟೀಂ ಇಂಡಿಯಾ ತಮ್ಮ ಪ್ರದರ್ಶನದ ಮೂಲಕವೇ ತಕ್ಕ ಶಾಸ್ತಿ ಮಾಡಲಿ ಎನ್ನುವುದು ಭಾರತೀಯ ಅಭಿಮಾನಿಗಳ ಆಶಯವಾಗಿದೆ.   

 

click me!