
ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಎನಿಸಿಕೊಂಡಿರುವ ಆಸ್ಟ್ರೇಲಿಯನ್ ಓಪನ್‌ಗೆ ಭಾನುವಾರ ಚಾಲನೆ ಸಿಗಲಿದೆ. ಈ ಬಾರಿಯೂ ಹಲವು ದಿಗ್ಗಜ ಹಾಗೂ ಯುವ ಟೆನಿಸ್ ತಾರೆಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಭಾರೀ ರೋಚಕತೆ ನಿರೀಕ್ಷಿಸಲಾಗಿದೆ. ಪ್ರಮುಖವಾಗಿ, 25ನೇ ಗ್ರ್ಯಾನ್‌ಸ್ಲಾಂ ಗೆಲುವಿಗಾಗಿ ಕೆಲ ವರ್ಷಗಳಿಂದ ಕಾಯುತ್ತಿರುವ ಸರ್ಬಿಯಾದ ನೋವಾಕ್ ಜೋಕೋವಿಚ್ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲಿದ್ದಾರೆಯೇ ಎಂಬ ಕುತೂಹಲವಿದೆ.
10 ಬಾರಿ ಆಸ್ಟ್ರೇಲಿಯನ್ ಓಪನ್ ಸೇರಿ 24 ಗ್ರ್ಯಾನ್‌ಸ್ಲಾಂ ಗೆದ್ದಿರುವ ಜೋಕೋಗೆ 2023ರ ಬಳಿಕ ಒಂದೂ ಟ್ರೋಫಿ ಗೆಲ್ಲಲಾಗಲಿಲ್ಲ. ಅವರು ಕಳೆದ ವರ್ಷ 4 ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲೂ ಸೆಮಿಫೈನಲ್ ಸೋತಿದ್ದರು. ಯುವ ಸೂಪರ್‌ಸ್ಟಾರ್‌ಗಳಾದ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಹಾಗೂ ಇಟಲಿಯ ಯಾನಿಕ್ ಸಿನ್ನರ್‌ರಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ 38 ವರ್ಷದ ಜೋಕೋಗೆ ಈ ಬಾರಿಯೂ ಕಪ್ ಗೆಲುವಿನ ಹಾದಿ ಸುಲಭದ್ದೇನಲ್ಲ. ಉಳಿದಂತೆ ಮೆಡ್ವೆಡೆವ್, ರುಬ್ಲೆವ್, ಕ್ಯಾಸ್ಪೆರ್ ರುಡ್ ಸೇರಿ ಪ್ರಮುಖರು ಕಣದಲ್ಲಿದ್ದಾರೆ.
ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಈ ಬಾರಿಯೂ ಹಲವು ಘಟಾನುಘಟಿಗಳು ಸ್ಪರ್ಧೆಯಲ್ಲಿದ್ದಾರೆ. ಹಾಲಿ ಚಾಂಪಿಯನ್, ಅಮೆರಿಕದ ಮ್ಯಾಡಿಸನ್ ಕೀಸ್, 2 ಬಾರಿ ಚಾಂಪಿಯನ್ ಸಬಲೆಂಕಾ, 6 ಗ್ರ್ಯಾನ್‌ಸ್ಲಾಂಗಳ ಒಡತಿ ಇಗಾ ಸ್ವಿಯಾಟೆಕ್, ಅಮೆರಿಕನ್ ತಾರೆ ಕೊಕೊ ಗಾಫ್ ಈ ಬಾರಿ ಟ್ರೋಫಿ ಗೆಲುವಿನ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಟೆನಿಸಿಗರು.
ಈ ಬಾರಿ ಟೂರ್ನಿಯಲ್ಲಿ ಆಡಲಿರುವ ಏಕೈಕ ಭಾರತೀಯ ಎಂದರೆ ಕರ್ನಾಟಕದ ನಿಕಿ ಪೂನಚ್ಚ. ಅವರು ವೈಲ್ಡ್ ಕಾರ್ಡ್ ಮೂಲಕ ಟೂರ್ನಿ ಪ್ರವೇಶಿಸಿದ್ದು, ಪುರುಷರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಇಸಾರೊ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ.
₹25.24: ಈ ಬಾರಿ ಪುರುಷ, ಮಹಿಳಾ ಸಿಂಗಲ್ಸ್ ವಿಜೇತರಿಗೆ ₹25.24 ಕೋಟಿ ನಗದು ಬಹುಮಾನ ಸಿಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.