Australian Open 2024: ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!

By Naveen KodaseFirst Published Jan 21, 2024, 11:07 AM IST
Highlights

ಶನಿವಾರ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಸ್ವಿಯಾಟೆಕ್‌ ಅವರು ಚೆಕ್‌ ಗಣರಾಜ್ಯದ 19 ವರ್ಷದ ಲಿಂಡಾ ನೊಸ್ಕೋವಾ ವಿರುದ್ಧ 6-3, 3-6, 4-6 ಸೆಟ್‌ಗಳಲ್ಲಿ ಪರಾಭವಗೊಂಡರು. ಶ್ರೇಯಾಂಕ ರಹಿತೆ ಆಟಗಾರ್ತಿ ವಿರುದ್ಧ ಆರಂಭಿಕ ಸುತ್ತಿನಲ್ಲಿ ಗೆದ್ದ ಹೊರತಾಗಿಯೂ ಬಳಿಕ 2 ಸೆಟ್‌ಗಳಲ್ಲಿ ಎದುರಾದ ಪೈಪೋಟಿಯನ್ನು ಮೆಟ್ಟಿನಿಲ್ಲಲು ಇಗಾಗೆ ಸಾಧ್ಯವಾಗಲಿಲ್ಲ.

ಮೆಲ್ಬರ್ನ್‌(ಜ.21): 4 ಗ್ರ್ಯಾನ್‌ಸ್ಲಾಂಗಳ ಒಡತಿ, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ರ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿ ಚಾಂಪಿಯನ್‌ ಕನಸು ಮತ್ತೊಮ್ಮೆ ಭಗ್ನಗೊಂಡಿದೆ.

ಶನಿವಾರ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಸ್ವಿಯಾಟೆಕ್‌ ಅವರು ಚೆಕ್‌ ಗಣರಾಜ್ಯದ 19 ವರ್ಷದ ಲಿಂಡಾ ನೊಸ್ಕೋವಾ ವಿರುದ್ಧ 6-3, 3-6, 4-6 ಸೆಟ್‌ಗಳಲ್ಲಿ ಪರಾಭವಗೊಂಡರು. ಶ್ರೇಯಾಂಕ ರಹಿತೆ ಆಟಗಾರ್ತಿ ವಿರುದ್ಧ ಆರಂಭಿಕ ಸುತ್ತಿನಲ್ಲಿ ಗೆದ್ದ ಹೊರತಾಗಿಯೂ ಬಳಿಕ 2 ಸೆಟ್‌ಗಳಲ್ಲಿ ಎದುರಾದ ಪೈಪೋಟಿಯನ್ನು ಮೆಟ್ಟಿನಿಲ್ಲಲು ಇಗಾಗೆ ಸಾಧ್ಯವಾಗಲಿಲ್ಲ. ನೊಸ್ಕೋವಾ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂನಲ್ಲಿ 4ನೇ ಸುತ್ತಿಗೇರಿದರು. ಇದೇ ವೇಳೆ 2 ಬಾರಿ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

Latest Videos

ಆಲ್ಕರಜ್‌ ಪ್ರಿ ಕ್ವಾರ್ಟರ್‌ಗೆ

ಟೆನಿಸ್‌ನ ಯುವ ಸೂಪರ್‌ ಸ್ಟಾರ್‌, ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ಗೇರಿದ್ದಾರೆ. 3ನೇ ಸುತ್ತಿನಲ್ಲಿ ತಮ್ಮ ಎದುರಾಳಿ, ಚೀನಾದ ಶಾಂಗ್‌ ಗಾಯಗೊಂಡು ಹೊರನಡೆದ ಕಾರಣ ವಿಶ್ವ ನಂ.2, ಸ್ಪೇನ್‌ನ 19ರ ಆಲ್ಕರಜ್‌ 4ನೇ ಸುತ್ತಿಗೇರಿದರು. ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ ಪ್ರಿ ಕ್ವಾರ್ಟರ್‌ಗೇರಿದರು.

Ranji Trophy: ಮಯಾಂಕ್‌ ಅಗರ್‌ವಾಲ್, ದೇವದತ್‌ ಪಡಿಕ್ಕಲ್ ಶತಕದಾಸರೆ

ಶ್ರೀರಾಮ್‌ಗೆ 2ನೇ ಸುತ್ತಿನಲ್ಲಿ ಸೋಲು

ಪುರುಷರ ಡಬಲ್ಸ್‌ನಲ್ಲಿ ರೊಮಾನಿಯಾದ ವಿಕ್ಟರ್‌ ಕಾರ್ನಿಯಾ ಜೊತೆಗೂಡಿ ಕಣಕ್ಕಿಳಿದಿದ್ದ ಭಾರತದ ಶ್ರೀರಾಮ್‌ ಬಾಲಾಜಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ. ಅವರು ಎಲ್‌ ಸಾಲ್ವಡಾರ್‌ನ ಮಾರ್ಕೆಲೊ-ಕ್ರೊವೇಷಿಯಾದ ಮೇಟ್‌ ಪಾವಿಚ್‌ ಜೋಡಿ ವಿರುದ್ಧ 3-6, 3-6ರಲ್ಲಿ ಸೋಲನುಭವಿಸಿದರು. ಇದೇ ವೇಳೆ ಹಂಗೇರಿಯ ಟೈಮಿಯಾ ಬಾಬೊಸ್‌ ಜೊತೆ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಬೇಕಿದ್ದ ಕರ್ನಾಟಕದ ರೋಹನ್‌ ಬೋಪಣ್ಣ, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ರೋಹನ್‌-ಆಸ್ಟ್ರೇಲಿಯಾದ ಎಬ್ಡೆನ್‌ ಪುರುಷರ ಡಬಲ್ಸ್‌ನಲ್ಲಿ 3ನೇ ಸುತ್ತಿಗೇರಿದ್ದಾರೆ.

ಬೆಂಗಳೂರು ಓಪನ್‌ ಐಟಿಎಫ್‌ ಟೆನಿಸ್‌ ಟೂರ್ನಿ: ಸೆಮೀಸಲ್ಲಿ ಸೋತ ರುತುಜಾ

ಬೆಂಗಳೂರು: ಭಾರತದ ತಾರಾ ಟೆನಿಸ್‌ ಆಟಗಾರ್ತಿ ರುತುಜಾ ಭೋಸಲೆ ಬೆಂಗಳೂರು ಓಪನ್‌ ಐಟಿಎಫ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಶನಿವಾರ ಮಹಿಳಾ ಸಿಂಗಲ್ಸ್‌ ಅಂತಿಮ 4ರ ಘಟ್ಟದ ಪಂದ್ಯದಲ್ಲಿ, 6ನೇ ಶ್ರೇಯಾಂಕಿತೆ, ಫ್ರಾನ್ಸ್‌ನ ಕ್ಯಾರೊಲೆ ಮೊನ್ನೆಟ್‌ ವಿರುದ್ಧ 2-6, 0-6 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕ್ಯಾರೊಲೆ, ಲಾಟ್ವಿಯಾದ ಡಾರ್ಜಾ ಸೆಮೆನಿಸ್ಟಜಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?

ಡಾರ್ಜಾ-ಕ್ಯಾಮಿಲ್ಲಾಗೆ ಪ್ರಶಸ್ತಿ

ಮಹಿಳಾ ಡಬಲ್ಸ್‌ನಲ್ಲಿ ಡಾರ್ಜಾ-ಇಟಲಿಯ ಕ್ಯಾಮಿಲ್ಲಾ ರೊಸಟೆಲ್ಲೊ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಈ ಜೋಡಿಗೆ ಚೈನೀಸ್‌ ತೈಪೆಯ ಯು ಯುನ್‌ಲಿ-ಜಪಾನ್‌ನ ಎರಿ ಶಿಮಿಜು ಜೋಡಿ ವಿರುದ್ಧ 3-6, 6-2, 10-8 ಸೆಟ್‌ಗಳಲ್ಲಿ ಗೆಲುವು ಲಭಿಸಿತು.
 

click me!