
ಏಷ್ಯನ್ ಕ್ರೀಡಾಕೂಟ 2026ರಲ್ಲಿ ಭಾರತದ ಕ್ರೀಡಾಪಟುಗಳು ಹೊಸ ಚರಿತ್ರೆ ಸೃಷ್ಟಿಸುವುದನ್ನು ಮುಂದುವರಿಸಿದ್ದಾರೆ. ಶನಿವಾರ ನಡೆದ ರೋಮಾಂಚಕ ಪಂದ್ಯಾವಳಿಯಲ್ಲಿ ಮೈಸೂರಿನ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಪ್ರಣವಿ ಶರತ್ ಅರಸ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫ್ ಆಟಗಾರ್ತಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಿಮ ಸುತ್ತಿನಲ್ಲಿ ಅತ್ಯಂತ ಧೈರ್ಯ ಹಾಗೂ ತಾಳ್ಮೆಯ ಆಟ ಪ್ರದರ್ಶಿಸಿದ ಅವರು, ತಮ್ಮ ಹತ್ತಿರದ ಸ್ಪರ್ಧಿಗಳಿಗಿಂತ ಒಂದು ಸ್ಟ್ರೋಕ್ ಅಂತರದ ರೋಮಾಂಚಕ ಮುನ್ನಡೆ ಸಾಧಿಸಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು. ಪ್ರಣವಿ ಅವರ ಈ ಅದ್ಭುತ ಪ್ರದರ್ಶನವು ಭಾರತಕ್ಕೆ ವೈಯಕ್ತಿಕ ಚಿನ್ನ ತಂದುಕೊಟ್ಟಿದ್ದಷ್ಟೇ ಅಲ್ಲದೆ, ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲಲು ಬಹುಮುಖ್ಯ ನೆರವಾಯಿತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಅಂತಿಮ ಸುತ್ತಿನ ಪಂದ್ಯವು ತೀವ್ರ ಕುತೂಹಲದಿಂದ ಕೂಡಿತ್ತು. ಪಂದ್ಯದ ಮೂರನೇ ಹೋಲ್‌ನಲ್ಲಿ ಟ್ರಿಪಲ್ ಬೋಗಿ ಅನುಭವಿಸಿದ ಪ್ರಣವಿ, ತಮ್ಮ ಮೂರು-ಸ್ಟ್ರೋಕ್‌ಗಳ ಮುನ್ನಡೆಯನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದರು. ಆದರೆ, ಸವಾಲುಗಳಿಗೆದೊಡ್ಡಿದ ಪ್ರಣವಿ ಅತ್ಯಂತ ವೇಗವಾಗಿ ಚೇತರಿಸಿಕೊಂಡರು. ತಕ್ಷಣವೇ ಮೂರು ಭರ್ಜರಿ ಬರ್ಡಿಗಳನ್ನು ಬಾರಿಸುವ ಮೂಲಕ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸಿದರು. ಅಂತಿಮ ಸುತ್ತಿನಲ್ಲಿ 70 ಅಂಕ ಗಳಿಸಿದ ಅವರು, ನಾಲ್ಕು ದಿನಗಳ ಪಂದ್ಯಾವಳಿಯಲ್ಲಿ ಒಟ್ಟು 15-ಅಂಡರ್ 265 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾದರು. 2002ರಲ್ಲಿ ಶಿವ ಕಪೂರ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ನಂತರ, ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದೆ.
ಪ್ರಣವಿ ಅವರ ವೈಯಕ್ತಿಕ ಸಾಧನೆಯ ಜೊತೆಗೆ, ಭಾರತದ ಮಹಿಳಾ ಗಾಲ್ಫ್ ತಂಡವೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡು ಇತಿಹಾಸ ಬರೆದಿದೆ. ಪ್ರಣವಿ ಉರ್ಸ್, ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡವು ಒಟ್ಟು 14-ಅಂಡರ್ 546 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಅಂತಿಮ ಸುತ್ತಿನಲ್ಲಿ ಅದಿತಿ ಅಶೋಕ್ 67 ಅಂಕ ಹಾಗೂ ದೀಕ್ಷಾ ದಾಗರ್ 77 ಅಂಕ ಗಳಿಸಿ ತಂಡದ ಸ್ಕೋರ್ ಹೆಚ್ಚಿಸಲು ಕೊಡುಗೆ ನೀಡಿದರು. ಈ ವಿಭಾಗದಲ್ಲಿ ಚೀನಾ ತಂಡವು 22-ಅಂಡರ್ 538 ಅಂಕಗಳೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಸರಣಿ ಯಶಸ್ಸು ಕಾಣುತ್ತಿದ್ದಾರೆ. ಪ್ರಣವಿ ಅವರ ಗಾಲ್ಫ್ ಚಿನ್ನದ ಜೊತೆಗೆ, ಮಹಿಳಾ ಹಾಕಿಯಲ್ಲಿ ಭಾರತ ತಂಡ ಚೀನಾವನ್ನು ಮಣಿಸಿ ಚಿನ್ನ ಗೆದ್ದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ, ಕುಸ್ತಿ ಹಾಗೂ ಬಾಕ್ಸಿಂಗ್‌ನಲ್ಲಿ ಸುಜೀತ್, ಪರ್ವೀನ್, ಅಂಕುಶ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಸುವರ್ಣ ಅಧ್ಯಾಯ ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.