
ಕನ್ನಡಪ್ರಭ ವಿಶ್ಲೇಷಣೆ
ಐಚಿ-ನಗೋಯಾದಲ್ಲಿ ನಡೆದ 20ನೇ ಏಷ್ಯನ್ ಗೇಮ್ಸ್‌ಗೆ ತೆರೆ ಬಿದ್ದಿದೆ. 4 ವರ್ಷಗಳ ಹಿಂದಿನ ಗೇಮ್ಸ್‌ನಲ್ಲಿ ಭಾರತದ ಪದಕ ಗಳಿಕೆ ಶತಕ ದಾಟಿತ್ತು. ಕಳೆದ ಸಲಕ್ಕಿಂತ ಈ ಬಾರಿ 7 ಚಿನ್ನ ಸೇರಿ ಒಟ್ಟು 21 ಪದಕ ಕಡಿಮೆ ಸಿಕ್ಕಿದೆ. ಸಹಜವಾಗಿಯೇ ಇದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾದರೂ, ಈ ಬಾರಿ ಗೇಮ್ಸ್‌ನಲ್ಲಿ ಭಾರತೀಯರಿಂದ ಹಲವು ಐತಿಹಾಸಿಕ ಸಾಧನೆ ದಾಖಲಾಯಿತು ಎನ್ನುವುದನ್ನು ಪರಿಗಣಿಸಬೇಕಿದೆ. ಕ್ರಿಕೆಟ್, ಹಾಕಿ, ಕಬಡ್ಡಿಯಲ್ಲಿ ಭಾರತ ತಂಡಗಳು ಪ್ರಾಬಲ್ಯ ಮುಂದುವರಿಸಿದವು. ಈ ಕ್ರೀಡೆಗಳಲ್ಲಿ ಭಾರತಕ್ಕೆ ಪ್ರಬಲ ಪೈಪೋಟಿ ಇಲ್ಲ ಎನ್ನುವುದೂ ಕಂಡುಬಂತು.
ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಅನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಭಾರತದ ಪಾಲಿಗೆ ಈ ಏಷ್ಯನ್ ಗೇಮ್ಸ್ ಆಶಾದಾಯಕ!
ಭಾರತದಲ್ಲಿ ಪ್ರತಿಭೆಗೆ ಖಂಡಿತ ಕೊರತೆ ಇಲ್ಲ. ಹತ್ತಾರು ದೇಶಗಳು ಸ್ಪರ್ಧಿಗಳು, ಖಂಡ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕವಾಗಿ ಫೈನಲ್ ತಲುಪಲು ಸಾಧ್ಯವಿಲ್ಲ. ತಮ್ಮಷ್ಟೇ ಬಲಿಷ್ಠರಾದ ಕ್ರೀಡಾಪಟುಗಳನ್ನು ಸೋಲಿಸಿಯೇ ಅಂತಿಮ ಹಂತಕ್ಕೆ ತಲುಪಬೇಕು, ಪದಕ ಗೆಲ್ಲಬೇಕು. ಭಾರತ ಈ ಬಾರಿ 21 ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿತು. ಇನ್ನು 27 ಸ್ಪರ್ಧೆಗಳಲ್ಲಿ ಬೆಳ್ಳಿ ಗಳಿಸಿತು. ಈ 27 ಬೆಳ್ಳಿ ಪದಕಗಳನ್ನೇ ಆಧಾರವಿಟ್ಟುಕೊಂಡು ಹೇಳುವುದಾದರೆ ಖಂಡಿತವಾಗಿಯೂ ಭಾರತೀಯರು ಸರಿ ದಾರಿಯಲ್ಲಿ ಸಾಗುತ್ತಿದ್ದಾರೆ. ಕೊನೆ ಹಂತದಲ್ಲಿ ಇನ್ನೊಂದಿಷ್ಟು ಬೆಂಬಲ, ಸ್ಫೂರ್ತಿ, ಪರಿಶ್ರಮ ಬೇಕಿದೆ.
1. ಗಾಲ್ಫ್: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತದಕ್ಕಿದು ಚೊಚ್ಚಲ ಚಿನ್ನ. ತಂಡ ವಿಭಾಗದಲ್ಲಿ ಚೊಚ್ಚಲ ಬೆಳ್ಳಿ.
ಕರ್ನಾಟಕದ ಪ್ರಣವಿ ಅರಸ್ ಗಾಲ್ಫ್‌ನಲ್ಲಿ ಪದಕ ಗೆದ್ದ ದೇಶದ ಮೊದಲ ಮಹಿಳಾ ಗಾಲ್ಫರ್ ಎನಿಸಿದರು. ಆ ಮೂಲಕ 24 ವರ್ಷಗಳ ಪದಕ ಬರ ನೀಗಿಸಿದರು. ಅಲ್ಲದೇ, ಅದಿತಿ ಅಶೋಕ್ ಹಾಗೂ ದೀಕ್ಷಾ ಡಾಗರ್ ಜೊತೆ ಸೇರಿ ಪ್ರಣವಿ ತಂಡ ವಿಭಾಗದಲ್ಲೂ ಐತಿಹಾಸಿಕ ಬೆಳ್ಳಿ ಗೆದ್ದರು.
2. ಆರ್ಚರಿ: ಕಾಂಪೌಂಡ್ ಹಾಗೂ ರೀಕರ್ವ್ ಎರಡೂ ವಿಭಾಗದಲ್ಲಿ ಭಾರತೀಯರು ಅಮೋಘ ಸಾಧನೆ ತೋರಿ ಒಟ್ಟು 12 ಪದಕ ಬಾಚಿಕೊಂಡರು. ಪ್ರಮುಖವಾಗಿ 17 ವರ್ಷದ ರೀಕರ್ವ್ ಆರ್ಚರಿ ಪಟು ಕುಂಕುಮ್ ಮೊಹದ್ ಎಲ್ಲರು ಹುಬ್ಬೇರಿಸುವಂತೆ ಮಾಡಿ, ರೀಕರ್ವ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ದೇಶದ ಮೊದಲ ಮಹಿಳೆ ಎನಿಸಿದರು. ರೀಕರ್ವ್ ಸ್ಪರ್ಧೆಯ ಎಲ್ಲಾ 5 ವಿಭಾಗದಲ್ಲಿ ಭಾರತ ಪದಕ ಜಯಿಸಿತು. ಇದು ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಪ್ರದರ್ಶನ.
3. ಶೂಟಿಂಗ್: 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸುರುಚಿ ಸಿಂಗ್ ಹಾಗೂ ಕಮಲ್‌ಜೀತ್ ಭಾರತಕ್ಕೆ ಚೊಚ್ಚಲ ಚಿನ್ನ ಗೆದ್ದುಕೊಂಡರು. ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ ನೀರು ಧಾಂಡಾ ಚಿನ್ನ ಗೆದ್ದ ದೇಶದ ಮೊದಲ ಮಹಿಳೆ ಎನಿಸಿದರು. ಅಲ್ಲದೇ, ನೀರು ಹಾಗೂ ಕೈನನ್ ಚೆನಾಯ್ ಸೇರಿ ಟ್ರ್ಯಾಪ್ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು.
4. ಅಥ್ಲೆಟಿಕ್ಸ್: ಮಹಿಳೆಯರ ಪೋಲ್‌ವಾಲ್ಟ್‌ನಲ್ಲಿ ಬಾರಾನಿಕಾ ಇಳಂಗೋವನ್‌ರ ಕಂಚಿನ ಮೂಲಕ ಕೂಟದ ಇತಿಹಾಸದಲ್ಲೇ ಚೊಚ್ಚಲ ಪದಕ ಜಯಿಸಿತು. ವಿದ್ಯಾ ರಾಮರಾಜ್ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಪಿ.ಟಿ.ಉಷಾ ಅವರ 42 ವರ್ಷದ ರಾಷ್ಟ್ರೀಯ ದಾಖಲೆ ಮುರಿದರು. ಹೈಜಂಪ್‌ನಲ್ಲಿ ಸರ್ವೇಶ್ ಕುಶಾರೆ ಹಾಗೂ ಪೂಜಾ ಹಲವು ವರ್ಷಗಳ ಬಳಿಕ ಭಾರತಕ್ಕೆ ಪದಕ ತಂದುಕೊಟ್ಟರು.
5. ಹಾಕಿ ಭಾರತ ಮಹಿಳಾ ಹಾಕಿ ತಂಡ 44 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿತು. 1982ರ ಬಳಿಕ ಮೊದಲ ಬಾರಿಗೆ ಚಿನ್ನ ಗೆದ್ದ ಭಾರತ ತಂಡ, ಮುಂದಿನ ಒಲಿಂಪಿಕ್ಸ್‌ಗೂ ಅರ್ಹತೆ ಪಡೆಯಿತು.
6. ಎಂಎಂಎ: ಮಿಕ್ಸೆಡ್ ಮಾರ್ಷಲ್ ಆರ್ಟ್ಸ್‌ನಲ್ಲಿ ಸುಚಿಕಾ ತರಿಯಾಲ್ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದರು. ಚೊಚ್ಚಲ ಬಾರಿಗೆ ಎಂಎಂಎ ಕ್ರೀಡೆಯನ್ನು ಆಡಿಸಲಾಯಿತು. ಸುಚಿಕಾ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದರು.
7. ರೋಯಿಂಗ್: ಪುರುಷರ ಡಬಲ್ ಸ್ಕಲ್ಸ್ ಸ್ಪರ್ಧೆಯಲ್ಲಿ ಸತ್ನಾಮ್ ಸಿಂಗ್ ಹಾಗೂ ಸಲ್ಮಾನ್ ಖಾನ್ ಕಂಚು ಗೆದ್ದರು. ಈ ಸ್ಪರ್ಧೆಯಲ್ಲಿ ಭಾರತಕ್ಕಿದು ಮೊದಲ ಪದಕ
8. ಸೆಪಾಕ್‌ಟಕ್ರಾ: ಪುರುಷರ ಕ್ವಾಡ್ರಂಟ್ (ನಾಲ್ವರು ಆಟಗಾರರು) ತಂಡ ಐತಿಹಾಸಿಕ ಕಂಚು ಪಡೆಯಿತು. ಕೂಟದ ಇತಿಹಾಸದಲ್ಲೇ ದೇಶಕ್ಕಿದು ಮೊದಲ ಪದಕ.
ಈ ಏಷ್ಯಾಡ್ ಇನ್ನೇನು 2 ವರ್ಷ ಸಮಯದಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ನತ್ತ ಗಮನ ಹರಿಸುವಂತೆ ಮಾಡಿದೆ. ಜಪಾನ್‌ನಲ್ಲಿ ಪದಕ ಗೆದ್ದ ಭಾರತ ಕ್ರಿಕೆಟ್ ತಂಡಗಳು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿವೆ. 1900ರ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಂಡಿದ್ದು, ಟಿ20 ಮಾದರಿಯಲ್ಲಿ ಭಾರತ ಪುರುಷರ ತಂಡ ಕಳೆದ 2 ವಿಶ್ವಕಪ್ ಗೆದ್ದಿದೆ ಎನ್ನುವುದು ಗಮನಾರ್ಹ ಸಂಗತಿ. ಹೀಗಾಗಿ ಸಹಜವಾಗಿಯೇ ಏಷ್ಯಾಡ್‌ನಲ್ಲಿ ಚಿನ್ನ ಗೆಲ್ಲುವ ಫೇವರಿಟ್ ಆಗಿ ಕಣಕ್ಕಿಳಿದಂತೆ ಒಲಿಂಪಿಕ್ಸ್‌ನಲ್ಲೂ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡೇ ಕಣಕ್ಕಿಳಿಯಲಿದೆ. ಮಹಿಳಾ ತಂಡವೂ ಪದಕ ಗೆಲ್ಲಲಿದೆ ಎನ್ನುವ ಭರವಸೆ ಇದೆ.
ಇನ್ನು, ಪುರುಷರ ಹಾಕಿ ತಂಡ ಕಳೆದ 2 ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪರಾಕ್ರಮ ಮೆರೆದು ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಹ್ಯಾಟ್ರಿಕ್ ಒಲಿಂಪಿಕ್ ಪದಕಕ್ಕಾಗಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ 5ನೇ ಸ್ಥಾನ ಪಡೆದ ಬಳಿಕ ಭಾರತ ಮಹಿಳಾ ಹಾಕಿ ತಂಡದ ಆಟದ ಗುಣಮಟ್ಟ ಹಲವು ಪಟ್ಟು ಹೆಚ್ಚಳವಾಗಿದೆ. ಏಷ್ಯಾಡ್‌ನಲ್ಲಿ ತಂಡ ತೋರಿದ ಪ್ರದರ್ಶನವೇ ಅದಕ್ಕೆ ಸಾಕ್ಷಿ. ಪದಕ ಗೆಲ್ಲುವ ಫೇವರಿಟ್ ಆಗಿಯೇ ಒಲಿಂಪಿಕ್ಸ್‌ಗೂ ತಂಡ ತೆರಳಲಿದೆ.
ಇನ್ನು ಶೂಟಿಂಗ್, ಬಾಕ್ಸಿಂಗ್, ಕುಸ್ತಿ, ಬ್ಯಾಡ್ಮಿಂಟನ್‌ನಲ್ಲಿ ಭಾರತ ಪ್ರತಿ ಬಾರಿಯೂ ಫೇವರಿಟ್ ಎನಿಸಲಿದೆ. 2028ರ ಒಲಿಂಪಿಕ್ಸ್‌ಗೆ ಕಾಂಪೌಂಡ್ ಆರ್ಚರಿ ಸೇರ್ಪಡೆಗೊಂಡಿದ್ದು, ಏಷ್ಯಾಡ್‌ನಲ್ಲಿ ಭಾರತದ ಪ್ರದರ್ಶನ ನೋಡಿದವರಿಗೆ ಖಂಡಿತವಾಗಿಯೂ ಭಾರತೀಯರು ಪದಕ ಗೆಲ್ಲಲಿದ್ದಾರೆ ಎನ್ನುವ ನಂಬಿಕೆ ಬರದೆ ಇರಲು ಸಾಧ್ಯವಿಲ್ಲ.
2028ರಲ್ಲಿ ಸ್ಕ್ವಾಶ್ ಕೂಡ ನಡೆಯಲಿದ್ದು, ಭಾರತದ ಯುವ ಆಟಗಾರರಾದ ಅನಾಹತ್ ಸಿಂಗ್, ಅಭಯ್ ಸಿಂಗ್ ಮೇಲೆ ವಿಶ್ವಾಸವಿಡಬಹುದು. ಗಾಲ್ಫ್‌ನಲ್ಲಿಯೂ ಭಾರತೀಯರು ಪ್ರಗತಿ ಸಾಧಿಸುತ್ತಿದ್ದು, ಪದಕ ನಿರೀಕ್ಷೆ ಇಟ್ಟುಕೊಳ್ಳಬಹುದು. ಅಥ್ಲೆಟಿಕ್ಸ್‌ನಲ್ಲೂ ಜಾವೆಲಿನ್ ಥ್ರೋ, ರಿಲೇಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಪದಕ ಸಿಗುವ ಭರವಸೆ ಇದೆ.
ಪದಕ ಫೇವರಿಟ್ ಎನಿಸಿಕೊಳ್ಳುವ ಕ್ರೀಡೆಗಳ ಹೊರತಾಗಿ, ಏಷ್ಯಾ ಮಟ್ಟದಲ್ಲಿ ಕಠಿಣ ಸ್ಪರ್ಧೆ ಎದುರಾಗುವ ಬಾಕ್ಸಿಂಗ್, ಕುಸ್ತಿಯಲ್ಲೂ ಭಾರತ ಈ ಬಾರಿ ಚಿನ್ನದ ಸಾಧನೆ ಮಾಡಿದೆ. ಈ ಎರಡೂ ಕ್ರೀಡೆಗಳಲ್ಲಿ ಭಾರತ 2022ರ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದಿರಲಿಲ್ಲ. ಈ ಬಾರಿ ಬಾಕ್ಸಿಂಗ್‌ನಲ್ಲಿ ಲವ್ಲೀನಾ, ಪರ್ವೀನ್ ಹೂಡಾ, ಅಂಕುಶ್, ಕುಸ್ತಿಯಲ್ಲಿ ಅಮನ್, ಸುಜೀತ್ ಚಿನ್ನ ಗೆದ್ದಿದ್ದಾರೆ.
ಈ ಏಷ್ಯಾಡ್‌ನಲ್ಲಿ ಭಾರತದ ಮಹತ್ವದ ಸಾಧನೆಗಳಲ್ಲಿ ಮಹಿಳಾ ಹಾಕಿ ಹಾಗೂ ಆರ್ಚರಿ ಕ್ರೀಡೆಗಳ ಪ್ರದರ್ಶನ ಪ್ರಮುಖವಾದದ್ದು. ಹಾಕಿ ಫೈನಲ್‌ನಲ್ಲಿ ಭಾರತ ಮಹಿಳಾ ತಂಡ ಚೀನಾ ವಿರುದ್ಧ ಗೆದ್ದು 42 ವರ್ಷಗಳ ಬಳಿಕ ಚಾಂಪಿಯನ್ ಆಯಿತು. ಇನ್ನು, ಆರ್ಚರಿಯಲ್ಲಿ ಅದರಲ್ಲೂ ರೀಕರ್ವ್ ವಿಭಾಗಗಳಲ್ಲಿ ದಕ್ಷಿಣ ಕೊರಿಯಾದ ಅಥ್ಲೀಟ್‌ಗಳನ್ನು ಭಾರತದ ಯುವ ಪ್ರತಿಭೆಗಳು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು. ದ.ಕೊರಿಯಾ, ಚೀನಾದಂತಹ ಪದಕ ಫ್ಯಾಕ್ಟರಿಗಳ ವಿರುದ್ಧವೇ ಗೆದ್ದಿದ್ದು ಸಹಜವಾಗಿಯೇ ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಕಳೆದ ಏಷ್ಯಾಡ್‌ನಲ್ಲಿ ಭಾರತ 28 ಚಿನ್ನ ಗೆದ್ದಿತ್ತು. ಈ ಪೈಕಿ ಕಬಡ್ಡಿ, ಕ್ರಿಕೆಟ್, ಪುರುಷರ ಹಾಕಿ ಸೇರಿ 8 ವಿಭಾಗಗಳಲ್ಲಿ ಮಾತ್ರ ಈ ಬಾರಿಯೂ ಬಂಗಾರದ ಸಾಧನೆ ಮಾಡಿದೆ. ಉಳಿದಂತೆ 13 ಚಿನ್ನದ ಪದಕಗಳು ಕಳೆದ ಬಾರಿ ಗೆಲ್ಲಲಾಗದ ಕ್ರೀಡಾ ವಿಭಾಗಗಳಲ್ಲಿ ಬಂದಿರುವುದು ವಿಶೇಷ. ಇದರಲ್ಲಿ ಶೂಟಿಂಗ್‌ನ 3 ವಿಭಾಗ, ಬಾಕ್ಸಿಂಗ್‌ನ 3 ವಿಭಾಗ, ಕುಸ್ತಿಯ 2 ವಿಭಾಗ, ಅಥ್ಲೆಟಿಕ್ಸ್‌ನ 4*400 ಮಹಿಳಾ ರಿಲೇ, ಆರ್ಚರಿ ರೀಕರ್ವ್‌ನ ಮಹಿಳಾ ತಂಡ ಹಾಗೂ ವೈಯಕ್ತಿಕ ವಿಭಾಗ, ಮಹಿಳಾ ಹಾಕಿ, ಮಹಿಳಾ ವೈಯಕ್ತಿಕ ಗಾಲ್ಫ್ ಸೇರಿವೆ. ಈ ಮೇಲಿನ 13 ವಿಭಾಗಗಳ ಪೈಕಿ ಕೆಲ ವಿಭಾಗದಲ್ಲಿ ಕಳೆದ ಏಷ್ಯಾಡ್‌ನಲ್ಲಿ ಬೆಳ್ಳಿ, ಕಂಚು ಲಭಿಸಿದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.