ಭಾರತ 650ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಹಾಂಗ್ಝೂ ಏಷ್ಯಾಡ್‌ಗೆ ಕಳುಹಿಸಿದ್ದು, ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆಯುವುದು ಬಹುತೇಕ ನಿಶ್ಚಿತ. ಆದರೆ ಅಗ್ರ-3ರಲ್ಲಿ ಸ್ಥಾನ ಪಡೆಯುವುದು ಭಾರತದ ಗುರಿಯಾಗಿದೆ. ಚೀನಾ, ಜಪಾನ್, ಕೊರಿಯಾದ ಜೊತೆ ಇರಾನ್, ಕಜಕಸ್ತಾನಗಳಿಂದಲೂ ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ.
ಹಾಂಗ್ಝೂ(ಸೆ.23): 2018ರಲ್ಲಿ ಭಾರತ 70 ಪದಕ ಜಯಿಸಿ, ಏಷ್ಯನ್ ಗೇಮ್ಸ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದಾಖಲೆಯ 7 ಪದಕಗಳೊಂದಿಗೆ ಕೆಲ ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾದ ಭಾರತದಿಂದ ಈ ಬಾರಿ ಸುಧಾರಿತ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ.
ಭಾರತ 650ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಹಾಂಗ್ಝೂ ಏಷ್ಯಾಡ್‌ಗೆ ಕಳುಹಿಸಿದ್ದು, ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆಯುವುದು ಬಹುತೇಕ ನಿಶ್ಚಿತ. ಆದರೆ ಅಗ್ರ-3ರಲ್ಲಿ ಸ್ಥಾನ ಪಡೆಯುವುದು ಭಾರತದ ಗುರಿಯಾಗಿದೆ. ಚೀನಾ, ಜಪಾನ್, ಕೊರಿಯಾದ ಜೊತೆ ಇರಾನ್, ಕಜಕಸ್ತಾನಗಳಿಂದಲೂ ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ.
ಏಷ್ಯನ್ ಗೇಮ್ಸ್ ಅನಾವರಣಕ್ಕೆ ಕ್ಷಣಗಣನೆ! ಮೈನವಿರೇಳಿಸಲಿದೆ ಉದ್ಘಾಟನಾ ಸಮಾರಂಭ!
ಅಥ್ಲೆಟಿಕ್ಸ್ ಭಾರತದ ಫೇವರಿಟ್!
ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್‌ಗಳ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಇನ್ನಷ್ಟೇ ಗಣನೀಯ ಪ್ರಮಾಣದಲ್ಲಿ ಮಿಂಚಬೇಕಿದ್ದರೂ, ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳ ಪ್ರದರ್ಶನ ಉತ್ತಮವಾಗೇ ಇದೆ. ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ಅತಿಹೆಚ್ಚು ಪದಕ ಅಥ್ಲೆಟಿಕ್ಸ್‌ನಿಂದಲೇ ಬಂದಿದೆ. 1951ರಿಂದ 2018ರ ವರೆಗೂ 79 ಚಿನ್ನ, 88 ಬೆಳ್ಳಿ, 87 ಕಂಚು ಸೇರಿ 254 ಪದಕಗಳನ್ನು ಭಾರತೀಯ ಅಥ್ಲೀಟ್‌ಗಳು ಗೆದ್ದಿದ್ದಾರೆ.
ಭಾರತದ ಟಾಪ್-10 ಭರವಸೆಯ ಕ್ರೀಡೆಗಳು
1. ಅಥ್ಲೆಟಿಕ್ಸ್: ಭಾರತದ ಫೇವರಿಟ್ ಕ್ರೀಡಾ ವಿಭಾಗ ಇದು. ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಅಥ್ಲೆಟಿಕ್ಸ್‌ನಲ್ಲಿ 254 ಪದಕ ಗೆದ್ದಿದೆ. ಈ ಸಲ ನೀರಜ್ ಚೋಪ್ರಾ ಸೇರಿ ಹಲವರ ಮೇಲೆ ನಿರೀಕ್ಷೆ ಇದೆ.
2. ಕುಸ್ತಿ: ಭಾರತೀಯ ಕುಸ್ತಿಪಟುಗಳು ಏಷ್ಯಾಡ್‌ನಲ್ಲಿ ಭಜರಿ ಯಶಸ್ಸು ಕಂಡಿದ್ದಾರೆ. ಒಟ್ಟು 59 ಪದಕ ಗೆದ್ದಿದ್ದಾರೆ. ಭಜರಂಗ್, ಅಂತಿಮ್ ಸೇರಿ ಹಲವರು ಈ ಸಲ ಪದಕ ಫೇವರಿಟ್.
3. ಶೂಟಿಂಗ್: ಭಾರತೀಯ ಶೂಟರ್‌ಗಳು ಈ ವರೆಗೂ 9 ಚಿನ್ನ ಸೇರಿ 58 ಪದಕ ಜಯಿಸಿದ್ದಾರೆ. ಈ ಸಲವೂ ಶೂಟರ್‌ಗಳ ಮೇಲೆ ಭಾರಿ ನಿರೀಕ್ಷೆ ಇದೆ. ಮನು ಭಾಕರ್, ಇಳವೆನಿಲ್ ಭರವಸೆಯ ಶೂಟರ್‌ಗಳು.
4. ಬಾಕ್ಸಿಂಗ್: ಭಾರತೀಯ ಬಾಕ್ಸರ್‌ಗಳೂ ಸಹ ಪದಕ ಬೇಟೆಯಲ್ಲಿ ಮುಂದಿದ್ದಾರೆ. ಈ ವರೆಗೂ 57 ಪದಕ ಗೆದ್ದಿರುವ ಬಾಕ್ಸರ್‌ಗಳಿಂದ ಈ ಸಲವೂ ನಿರೀಕ್ಷೆ ಇದೆ. ಲವ್ಲೀನಾ, ದೀಪಕ್, ಶಿವ ಥಾಪ ಫೇವರಿಟ್ಸ್.
5. ಟೆನಿಸ್: ಭಾರತೀಯ ಟೆನಿಸಿಗರು ಉತ್ತಮ ಲಯದಲ್ಲಿದ್ದು, ಇತ್ತೀಚೆಗೆ ಡೇವಿಸ್ ಕಪ್ ಪಂದ್ಯದಲ್ಲೂ ಜಯಿಸಿದ್ದಾರೆ. ಟೆನಿಸ್‌ನಲ್ಲಿ ಒಟ್ಟು 32 ಪದಕ ಲಭಿಸಿದೆ. ಡಬಲ್ಸ್, ಸಿಂಗಲ್ಸ್, ಮಿಶ್ರ ಡಬಲ್ಸ್ ಮೂರರಲ್ಲೂ ಪದಕ ನಿರೀಕ್ಷೆ ಇದೆ.
6. ಕಬಡ್ಡಿ: ಭಾರತ ಪುರುಷರ ತಂಡ 7 ಬಾರಿ ಚಿನ್ನ ಗೆದ್ದಿದೆ. ಮಹಿಳಾ ತಂಡ 2 ಬಾರಿ ಸ್ವರ್ಣ ಹೆಕ್ಕಿದೆ. ಕಳೆದ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿದ್ದ ಕಬಡ್ಡಿ ತಂಡಗಳು ಈ ಬಾರಿ ಚಿನ್ನದ ಮೇಲೆ ಕಣ್ಣಿಟ್ಟಿವೆ.
7. ಕ್ರಿಕೆಟ್: ಈ ಬಾರಿ ಬಿಸಿಸಿಐ ತನ್ನ ಕ್ರಿಕೆಟ್ ತಂಡಗಳನ್ನು ಏಷ್ಯಾಡ್‌ಗೆ ಕಳುಹಿಸಿರುವ ಕಾರಣ ಭಾರತ ಮತ್ತೆರಡು ಹೆಚ್ಚುವರಿ ಪದಕ ನಿರೀಕ್ಷೆ ಮಾಡುತ್ತಿದೆ. ಮಹಿಳಾ, ಪುರುಷ ತಂಡಗಳು ಚಿನ್ನ ಗೆಲ್ಲುವ ಫೇವರಿಟ್ಸ್.
8. ಹಾಕಿ: ಏಷ್ಯಾಡ್‌ನಲ್ಲಿ ಭಾರತ ಹಾಕಿ ತಂಡಗಳು ಒಟ್ಟು 21 ಪದಕ ಜಯಿಸಿವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಪುರುಷರ ತಂಡ, 4ನೇ ಸ್ಥಾನ ಪಡೆದಿದ್ದ ಮಹಿಳಾ ತಂಡ ಏಷ್ಯಾಡ್‌ನಲ್ಲಿ ಪದಕ ಭರವಸೆ ಮೂಡಿಸಿವೆ.
9. ಆರ್ಚರಿ: ಭಾರತೀಯ ಆರ್ಚರ್‌ಗಳು ಇತ್ತೀಚಿಗೆ ಅತ್ಯುತ್ತಮ ಲಯದಲ್ಲಿದ್ದು, ವಿಶ್ವಕಪ್‌ಗಳಲ್ಲಿ ಭರ್ಜರಿ ಪದಕ ಬೇಟೆ ನಡೆಸಿದ್ದಾರೆ. ಏಷ್ಯಾಡ್‌ನಲ್ಲಿ ಈ ವರೆಗೂ 10 ಪದಕ ಗೆದ್ದಿರುವ ಆರ್ಚರ್‌ಗಳು ಈ ಸಲ ಮತ್ತಷ್ಟು ಪದಕ ನಿರೀಕ್ಷೆಯಲ್ಲಿದ್ದಾರೆ.
10. ವೇಟ್‌ಲಿಫ್ಟಿಂಗ್: ಭಾರತೀಯ ವೇಟ್‌ಲಿಫ್ಟರ್‌ಗಳು ಕೂಟದ ಫೇವರಿಟ್ಸ್‌ಗಳಲ್ಲಿ ಪ್ರಮುಖರು. ಮೀರಾಬಾಯಿ ಸೇರಿ ಹಲವರ ಮೇಲೆ ನಿರೀಕ್ಷೆ ಇದೆ. ಕೂಟದ ಇತಿಹಾಸದಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು 14 ಪದಕ ಗೆದ್ದಿದೆ.