Asian Games 2023: ವಿಶ್ವ ನಂ.1 ಜೋಡಿ ಸಾತ್ವಿಕ್‌-ಚಿರಾಗ್‌ಗೆ ಐತಿಹಾಸಿಕ ಚಿನ್ನ!

By Kannadaprabha News  |  First Published Oct 8, 2023, 10:54 AM IST

ಸಾತ್ವಿಕ್-ಚಿರಾಗ್‌ರ ಚಿನ್ನ ಭಾರತಕ್ಕೆ ಈ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಸಿಕ್ಕ 3ನೇ ಪದಕ. ಪುರುಷರ ತಂಡ ಬೆಳ್ಳಿ ಗೆದ್ದರೆ, ಪ್ರಣಯ್‌ ಕಂಚು ಪಡೆದಿದ್ದರು. ಇದು ಏಷ್ಯಾಡ್‌ನಲ್ಲಿ ಭಾರತದ ಶಟ್ಲರ್‌ಗಳ ಶ್ರೇಷ್ಠ ಪ್ರದರ್ಶನ. 2018ರಲ್ಲಿ 1 ಬೆಳ್ಳಿ, 1 ಕಂಚು ಗೆದ್ದಿದ್ದರೆ, 1982ರಲ್ಲಿ 5 ಕಂಚಿನ ಪದಕ ಲಭಿಸಿತ್ತು.


ಹಾಂಗ್‌ಝೋ(ಅ.08): ಇತ್ತೀಚಿನ ವರ್ಷಗಳಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಭಾರತದ ತಾರಾ ಡಬಲ್ಸ್‌ ಜೋಡಿ, ವಿಶ್ವ ನಂ.1 ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರು ಏಷ್ಯಾಡ್‌ ಇತಿಹಾಸದಲ್ಲೇ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಶನಿವಾರ ಫೈನಲ್‌ನಲ್ಲಿ ದ.ಕೊರಿಯಾ ಚೊಯು ಸೊಲ್ಯು-ಕಿಮ್‌ ವೊನ್ಹೊ ಜೋಡಿ ವಿರುದ್ಧ 21-18, 21-16ರಲ್ಲಿ ಭಾರತೀಯ ಜೋಡಿಗೆ ಗೆಲುವು ಲಭಿಸಿತು. ಇದರೊಂದಿಗೆ 41 ವರ್ಷಗಳ ಬಳಿಕ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ಲಭಿಸಿತು.

ಶ್ರೇಷ್ಠ ಶೋ: ಸಾತ್ವಿಕ್-ಚಿರಾಗ್‌ರ ಚಿನ್ನ ಭಾರತಕ್ಕೆ ಈ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಸಿಕ್ಕ 3ನೇ ಪದಕ. ಪುರುಷರ ತಂಡ ಬೆಳ್ಳಿ ಗೆದ್ದರೆ, ಪ್ರಣಯ್‌ ಕಂಚು ಪಡೆದಿದ್ದರು. ಇದು ಏಷ್ಯಾಡ್‌ನಲ್ಲಿ ಭಾರತದ ಶಟ್ಲರ್‌ಗಳ ಶ್ರೇಷ್ಠ ಪ್ರದರ್ಶನ. 2018ರಲ್ಲಿ 1 ಬೆಳ್ಳಿ, 1 ಕಂಚು ಗೆದ್ದಿದ್ದರೆ, 1982ರಲ್ಲಿ 5 ಕಂಚಿನ ಪದಕ ಲಭಿಸಿತ್ತು.

Latest Videos

undefined

ಸಾತ್ವಿಕ್‌-ಚಿರಾಗ್‌ ಓಟಕ್ಕಿಲ್ಲ ಬ್ರೇಕ್‌!

ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ ವಿಶ್ವದ ಬಹುತೇಕ ಎಲ್ಲಾ ಪ್ರಮುಖ ಟೂರ್ನಿಗಳಲ್ಲೂ ಪದಕ ಸಾಧನೆ ಮಾಡಿದೆ. ಈ ಮೊದಲು ಕಾಮನ್‌ವೆಲ್ತ್‌ ಗೇಮ್ಸ್‌, ಥಾಮಸ್‌ ಕಪ್‌ನಲ್ಲಿ ಚಿನ್ನ, 2022ರ ವಿಶ್ವ ಚಾಂಪಿಯನ್‌ಶಿಪ್‌ ಕಂಚು ಪಡೆದಿದ್ದರು. ಅಲ್ಲದೇ ಏಷ್ಯನ್ ಚಾಂಪಿಯನ್‌ಶಿಪ್‌ ಚಿನ್ನ, ಇಂಡೋನೇಷ್ಯಾ ಸೂಪರ್‌ 1000, ಕೊರಿಯಾ ಸೂಪರ್‌ 500, ಸ್ವಿಸ್‌ ಓಪನ್‌ 300 ಟೂರ್ನಿಯಲ್ಲೂ ಗೆದ್ದಿದ್ದಾರೆ. ಮಂಗಳವಾರ (ಅ.10) ಪ್ರಕಟಗೊಳ್ಳಲಿರುವ ನೂತನ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಈ ಜೋಡಿ ನಂ.1 ಸ್ಥಾನಕ್ಕೇರಲಿದೆ.

ಆರ್ಚರಿಯಲ್ಲಿ ಭಾರತದ ಅಧಿಪತ್ಯ!

ಈ ಬಾರಿ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ ಭಾರತದ ಆರ್ಚರಿ ಪಟುಗಳು, ಸಾರ್ವಕಾಲಿಕ ಶ್ರೇಷ್ಠ 9 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. 2018ರಲ್ಲಿ ಕೇವಲ 2 ಬೆಳ್ಳಿ ಪಡೆದಿದ್ದರು. ಕೊನೆ ದಿನವಾದ ಶನಿವಾರ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು ಭಾರತದ ಖಾತೆಗೆ ಸೇರ್ಪಡೆಗೊಂಡಿತು. ಕೂಟದ ಕಾಂಪೌಂಡ್ ವಿಭಾಗಗಳಲ್ಲಿ ಲಭ್ಯವಿದ್ದ ಎಲ್ಲಾ 5 ಚಿನ್ನ ಭಾರತೀಯರ ಪಾಲಾಗಿದ್ದು ವಿಶೇಷ.

Asian Games 2023: ಕಬಡ್ಡಿಯಲ್ಲಿ ಭಾರತೀಯರ ಸ್ವರ್ಣ ಸಾಧನೆ.! ರಣರಂಗವಾದ ಕಬಡ್ಡಿ ಅಂಕಣ! ನಿಯಮದಲ್ಲಿ ಏನಿದೆ?

ಶನಿವಾರ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಜ್ಯೋತಿ ಸುರೇಖಾ ವೆನ್ನಂ, ದ.ಕೊರಿಯಾದ ಸೊ ಚಿವೊನ್‌ ವಿರುದ್ಧ 149-145 ಅಂಕಗಳಿಂದ ಗೆದ್ದು ಚಿನ್ನ ಕೊರಳಿಗೇರಿಸಿಕೊಂಡರು. ಇದೇ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಅದಿತಿ ಸ್ವಾಮಿ ಇಂಡೋನೇಷ್ಯಾದ ರಾತಿಹ್‌ ಫಾಧ್ಲಿ ವಿರುದ್ಧ ಗೆದ್ದು ಕಂಚು ಪಡೆದರು. ಇನ್ನು ಭಾರತೀಯರೇ ಇದ್ದ ಕಾಂಪೌಂಡ್‌ ಪುರುಷರ ವೈಯಕ್ತಿಕ ವಿಭಾಗದಲ್ಲಿ 149-147 ಅಂಕಗಳ ಅಂತರದಲ್ಲಿ ಓಜಸ್‌ ಪ್ರವೀಣ್‌ ಚಿನ್ನ ಜಯಿಸಿದರೆ, ಅಭಿಷೇಕ್‌ ವರ್ಮಾ ಬೆಳ್ಳಿಗೆ ತೃಪ್ತಿಪಟ್ಟರು.

ಜ್ಯೋತಿ, ಓಜಸ್‌ಗೆ ಹ್ಯಾಟ್ರಿಕ್‌ ಬಂಗಾರ!

ಕೂಟದಲ್ಲಿ ಜ್ಯೋತಿ ಹಾಗೂ ಓಜಸ್‌ ಹ್ಯಾಟ್ರಿಕ್‌ ಬಂಗಾರ ಸಾಧನೆ ಮಾಡಿದರು. ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಇವರಿಬ್ಬರು ಒಟ್ಟಿಗೆ ಸ್ಪರ್ಧಿಸಿ ಚಿನ್ನ ಗೆದ್ದಿದ್ದರು. ಬಳಿಕ ಜ್ಯೋತಿ ಮಹಿಳೆಯರ, ಓಜಸ್‌ ಪುರುಷರ ತಂಡ ವಿಭಾಗದಲ್ಲಿ ಬಂಗಾರ ಪಡೆದಿದ್ದರು. ಈಗ ವೈಯಕ್ತಿಕ ವಿಭಾಗಗಳಲ್ಲೂ ಕೂಡಾ ಇವರಿಬ್ಬರು ಚಿನ್ನ ಸಂಪಾದಿಸಿದ್ದಾರೆ.

ಕುಸ್ತಿ ಬೆಳ್ಳಿ ಗೆದ್ದ ದೀಪಕ್‌

ಏಷ್ಯನ್‌ ಗೇಮ್ಸ್‌ ಕುಸ್ತಿಯಲ್ಲಿ ಈ ಬಾರಿ ಭಾರತ 6 ಪದಕಗಳನ್ನು ತನ್ನದಾಗಿಸಿಕೊಂಡಿದೆ. 2018ರಲ್ಲಿ ಭಾರತ 2 ಚಿನ್ನ ಸೇರಿದಂತೆ 3 ಪದಕ ಪಡೆದಿತ್ತು. ಕುಸ್ತಿಯ ಕೊನೆ ದಿನವಾದ ಶನಿವಾರ ಪುರುಷರ 86 ಕೆ.ಜಿ. ವಿಭಾಗದಲ್ಲಿ ದೀಪಕ್‌ ಪೂನಿಯಾ ಬೆಳ್ಳಿ ಪದಕ ಪಡೆದರು. ಕೂಟದಲ್ಲಿ ಫೈನಲ್‌ಗೇರಿದ ಭಾರತದ ಏಕೈಕ ಕುಸ್ತಿಪಟು ಎನಿಸಿಕೊಂಡ ದೀಪಕ್‌, ಚಿನ್ನಕ್ಕಾಗಿ ನಡೆದ ಸೆಣಸಾಟದಲ್ಲಿ ತಮ್ಮ ರೋಲ್‌ ಮಾಡೆಲ್‌, ಇರಾನ್‌ನ ಹಸನ್‌ ಯಜ್ದಾನಿ ವಿರುದ್ಧ ಸೋಲನುಭವಿಸಿದರು. ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ, ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಒಡೆಯ ದೀಪಕ್‌ಗೆ, 2 ಬಾರಿ ಒಲಿಂಪಿಕ್ಸ್‌, 8 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಹಸನ್‌ ಗೆಲುವು ನಿರಾಕರಿಸಿ, ಚಿನ್ನ ತಪ್ಪಿಸಿದರು. ದೀಪಕ್‌ಗೂ ಮುನ್ನ ಈ ಕೂಟದಲ್ಲಿ ಭಾರತದ ಐವರು ಕಂಚು ಗೆದ್ದಿದ್ದರು.

ಚೆಸ್‌ನಲ್ಲಿ ಭಾರತ ವನಿತಾ, ಪುರುಷರ ತಂಡಕ್ಕೆ ರಜತ

ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಏಷ್ಯನ್‌ ಗೇಮ್ಸ್‌ ಚೆಸ್‌ನಲ್ಲಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿವೆ. ಶನಿವಾರ 9ನೇ ಹಾಗೂ ಕೊನೆ ಸುತ್ತಿನ ಪಂದ್ಯದಲ್ಲಿ ಪುರುಷರ ತಂಡ ಫಿಲಿಪ್ಪೀನ್ಸ್‌ ವಿರುದ್ಧ 3.5-0.5 ಅಂಕಗಳಲ್ಲಿ ಜಯಗಳಿಸಿದರೆ, ಮಹಿಳಾ ತಂಡ ದ.ಕೊರಿಯಾವನ್ನು 4-0 ಅಂತರದಲ್ಲಿ ಸೋಲಿಸಿತು. ಮೊದಲ ಕೆಲ ಸುತ್ತುಗಳ ಬಳಿಕ 2ನೇ ಸ್ಥಾನಕ್ಕೇರಿದ್ದ ಭಾರತದ ತಂಡಗಳು ಕೊನೆವರೆಗೂ ಮುನ್ನಡೆ ಕಾಯ್ದುಕೊಂಡು ಬೆಳ್ಳಿ ಪದಕ ಪಡೆಯಿತು. ಪುರುಷರ ವಿಭಾಗದಲ್ಲಿ ಇರಾನ್‌, ಮಹಿಳಾ ವಿಭಾಗದಲ್ಲಿ ಚೀನಾ ಚಾಂಪಿಯನ್‌ ಎನಿಸಿಕೊಂಡಿತು.

ಕೂಟದ ಭಾರತದ ಪುರುಷರ ತಂಡದಲ್ಲಿ ಅರ್ಜುನ್‌ ಎರಿಗೈಸಿ, ಡಿ.ಗುಕೇಶ್‌, ವಿದಿತ್‌ ಗುಜರಾತಿ, ಆರ್‌.ಪ್ರಜ್ಞಾನಂದ ಹಾಗೂ ಹರಿಕೃಷ್ಣ ಇದ್ದರು. ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ವಂತಿಕಾ ಅಗರ್‌ವಾಲ್‌, ವೈಶಾಲಿ, ಸವಿತಾ ಭಾರತವನ್ನು ಪ್ರತಿನಿಧಿಸಿದ್ದರು.

ಮಹಿಳಾ ಹಾಕಿಗೆ ಕಂಚಿನ ಗರಿ

ಚಿನ್ನದ ಪದಕ ನಿರೀಕ್ಷೆ ಹುಸಿಗೊಳಿಸಿದ್ದ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕದೊಂದಿಗೆ ತವರಿಗೆ ಮರಳಲಿದೆ. ಶನಿವಾರ ಕಂಚಿನ ಪದಕದ ಪಂದ್ಯದಲ್ಲಿ ಭಾರತ, ಹಾಲಿ ಚಾಂಪಿಯನ್‌ ಜಪಾನ್‌ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು. ಕಳೆದ ಬಾರಿ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಸೋತು ರನ್ನರ್‌-ಅಪ್‌ ಆಗಿದ್ದ ಭಾರತ ಈ ಬಾರಿ ಸೇಡು ತೀರಿಸಿಕೊಂಡಿತು. ಈ ಮೊದಲು ಭಾರತ ತಂಡ 1982ರಲ್ಲಿ ಮೊದಲ ಬಾರಿ ಮಹಿಳಾ ಹಾಕಿಯನ್ನು ಏಷ್ಯಾಡ್‌ನಲ್ಲಿ ಪರಿಚಯಿಸಿದಾಗ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಬಳಿಕ 1998 ಹಾಗೂ 2018ರಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿತ್ತು. ಈ ಬಾರಿಯದ್ದು ಸೇರಿ ಒಟ್ಟು 4 ಸಲ ಕಂಚು ಪಡೆದಿದೆ.
 

click me!