ಏಷ್ಯಾಡ್ ಪದಕ ಗೆದ್ರೂ ಟೀ ಮಾರಾಟ ತಪ್ಪಲಿಲ್ಲ.!

By Web DeskFirst Published Sep 8, 2018, 4:12 PM IST
Highlights

ಇದು ಇತ್ತೀಚೆಗಷ್ಟೇ ಮುಕ್ತಾಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಸೆಪೆಕ್ ತಾಕ್ರಾದಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯನಾದ ಹರೀಶ್ ಕುಮಾರ್ ಕತೆ. ದೆಹಲಿಯ ಮಜ್ನು-ಕ-ಟಿಲ್ಲಾ ಪ್ರದೇಶದ ನಿವಾಸಿಯಾದ ಹರೀಶ್ ಕುಮಾರ್, ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮ ತಂದೆಯ ಅಂಗಡಿಯಲ್ಲಿ ಟೀ ಮಾರಾಟ ಮಾಡುತ್ತಿದ್ದಾರೆ.

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದರೂ, ಆ ಕ್ರೀಡಾಪಟುವಿನ ಬವಣೆ ಕೊನೆಗೊಂಡಿಲ್ಲ. ಜೀವನ ನಿರ್ವಹಣೆಗೆ ಇಂದಿಗೂ ಟೀ ಮಾರುವುದು ತಪ್ಪಲಿಲ್ಲ... 
ಇದು ಇತ್ತೀಚೆಗಷ್ಟೇ ಮುಕ್ತಾಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಸೆಪೆಕ್ ತಾಕ್ರಾದಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯನಾದ ಹರೀಶ್ ಕುಮಾರ್ ಕತೆ. ದೆಹಲಿಯ ಮಜ್ನು-ಕ-ಟಿಲ್ಲಾ ಪ್ರದೇಶದ ನಿವಾಸಿಯಾದ ಹರೀಶ್ ಕುಮಾರ್, ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮ ತಂದೆಯ ಅಂಗಡಿಯಲ್ಲಿ ಟೀ ಮಾರಾಟ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಹರೀಶ್, ‘ನಮ್ಮದು ದೊಡ್ಡ ಕುಟುಂಬ, ಸದಸ್ಯರ ಸಂಖ್ಯೆ ದೊಡ್ಡದು. ಆದ ಕಾರಣ ಟೀ ಶಾಪ್ ನಲ್ಲಿ ನಮ್ಮ ತಂದೆಗೆ ಸಹಾಯ ಮಾಡುತ್ತೇನೆ. ಇದರ ನಡುವೆ ಪ್ರತಿದಿನ 2ರಿಂದ 6 ತಾಸುಗಳ ಕಾಲ ಅಭ್ಯಾಸ ನಡೆಸಲು ತೀರ್ಮಾನಿಸಿದ್ದೇನೆ. ಭವಿಷ್ಯದ ದೃಷ್ಟಿಯಿಂದ ಹಾಗೂ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ನನಗೆ ಒಳ್ಳೆಯ ಕೆಲಸದ ಅವಶ್ಯವಿದೆ’ ಎಂದು ಹರೀಶ್ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

‘2011ರಿಂದ ಸೆಪೆಕ್ ತಕ್ರಾ ಅಭ್ಯಾಸ ಶುರು ಮಾಡಿದೆ. ನನ್ನ ಕೋಚ್ ಹೇಮ್ ರಾಜ್ ಅವರು ನನ್ನನ್ನು ಈ ಕ್ರೀಡೆಗೆ ಪರಿಚಯಿಸಿದರು. ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಕ್ಕೆ ಸೇರಲು ಹೇಮ್ ರಾಜ್ ನೆರವು ನೀಡಿದರು. ಇದರ ನಂತರ ಜೀವನದಲ್ಲಿ ಹೊಸ ಆಶಾಕಿರಣ ಮೂಡಿತು. ಸಾಯ್‌ನಿಂದ ಪ್ರತಿ ತಿಂಗಳು ಭತ್ಯೆ ಹಾಗೂ ಕಿಟ್ ಲಭಿಸಿತು. ಇದರಿಂದ ಏಷ್ಯಾಡ್ ವೇಳೆ
ಅಭ್ಯಾಸ ನಡೆಸಲು ನೆರವಾಯಿತು’ ಎಂದು ತಾವು ನಡೆಸಿದ ಹೋರಾಟ ನೆನಪಿಸಿಕೊಳ್ಳುತ್ತಾರೆ ಹರೀಶ್.

‘ಎಷ್ಟೇ ಕಷ್ಟಬಂದರೂ ಪ್ರತಿದಿನ ಅಭ್ಯಾಸ ನಡೆಸುತ್ತೇನೆ ಹಾಗೂ ದೇಶಕ್ಕೆ ಮತ್ತಷ್ಟು ಪದಕಗಳನ್ನು ತಂದು ಕೊಡುತ್ತೇನೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಹರೀಶ್. ‘ಏಷ್ಯನ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುವ ವೇಳೆ ಸೂಕ್ತ ಆಹಾರ ಹಾಗೂ ವಸತಿ ಕಲ್ಪಿಸಿದ ಸರ್ಕಾರಕ್ಕೆ ನನ್ನ ಅಭಿನಂದನೆಗಳು’ ಎಂದು ಹರೀಶ್ ಅವರ ತಾಯಿ ಧನ್ಯವಾದ ಸಲ್ಲಿಸಿದ್ದಾರೆ. ‘ಅಭ್ಯಾಸಕ್ಕೆ ನೆರವು ನೀಡಿದ ಹಾಗೂ ಪ್ರತಿ ತಿಂಗಳು ಆರ್ಥಿಕ ನೆರವು ನೀಡಿದ ಸಾಯ್‌ಗೆ ನಾವು ಚಿರಋಣಿಗಳಾಗಿರುತ್ತೇವೆ’ ಎಂದು ಭಾವುಕರಾಗುತ್ತಾರೆ ಹರೀಶ್ ಸಹೋದರ ಧವನ್.

click me!