ಏಷ್ಯಾಕಪ್ 2018 ಎಬಿ ಡಿವಿಲಿಯರ್ಸ್ ದಾಖಲೆ ಉಡೀಸ್ ಮಾಡಿದ ಧವನ್

By Web DeskFirst Published Sep 18, 2018, 8:46 PM IST
Highlights

ಈ ಶತಕದೊಂದಿಗೆ ಧವನ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. 

ದುಬೈ[ಸೆ.18]: ಏಷ್ಯಾಕಪ್ ಟೂರ್ನಿಯನ್ನು ಶಿಖರ್ ಧವನ್ ಶತಕದೊಂದಿಗೆ ಆರಂಭಿಸಿದ್ದಾರೆ. ಹಾಂಕಾಂಗ್ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್, ಅನುಭವಿ ಬ್ಯಾಟ್ಸ್’ಮನ್ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಶತಕದೊಂದಿಗೆ ಧವನ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಹೌದು, ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ 14 ಶತಕ ಪೂರೈಸಿದ ಜಗತ್ತಿನ 4ನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಧವನ್ ಪಾತ್ರರಾಗಿದ್ದಾರೆ. ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಕೇವಲ 105 ಇನ್ನಿಂಗ್ಸ್’ಗಳಲ್ಲಿ 14 ಶತಕ ಪೂರೈಸುವ ಮೂಲಕ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಎಬಿಡಿ 131 ಇನ್ನಿಂಗ್ಸ್’ಗಳಲ್ಲಿ 14 ಶತಕ ಸಿಡಿಸಿದ್ದರು.

ಇನ್ನು ಅತಿವೇಗವಾಗಿ 14 ಶತಕ ಪೂರೈಸಿದವರ ಪಟ್ಟಿಯಲ್ಲಿ ಹಾಶೀಂ ಆಮ್ಲಾ[84 ಇನ್ನಿಂಗ್ಸ್] ಮೊದಲ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್[98] ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ[103] ಮೊದಲ ಮೂರು ಸ್ಥಾನದಲ್ಲಿದ್ದಾರೆ.
ಇನ್ನು ಈ ಶತಕದೊಂದಿಗೆ ಭಾರತ ಪರ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಆರನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡುಲ್ಕರ್[49 ಶತಕ], ವಿರಾಟ್ ಕೊಹ್ಲಿ[35], ಸೌರವ್ ಗಂಗೂಲಿ[22], ರೋಹಿತ್ ಶರ್ಮಾ[18] ಹಾಗೂ ವಿರೇಂದ್ರ ಸೆಹ್ವಾಗ್[15] ಮೊದಲ 5 ಸ್ಥಾನಗಳಲ್ಲಿದ್ದಾರೆ.

ಇದರ ಜತೆಗೆ ಅತಿಹೆಚ್ಚು ಶತಕ ಸಿಡಿಸಿದ ಭಾರತೀಯ ಎಡಗೈ ಬ್ಯಾಟ್ಸ್’ಮನ್’ಗಳ ಪೈಕಿ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ[22 ಶತಕ] ಭದ್ರವಾಗಿದ್ದರೆ, ಎರಡನೇ ಸ್ಥಾನದಲ್ಲಿ ಯುವರಾಜ್ ಸಿಂಗ್ ಹಾಗೂ ಶಿಖರ್ ಧವನ್ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.   

click me!