ಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸುತ್ತಿರುವ ದೀಪಿಕಾ, ಮಹಿಳೆಯರ ವೈಯಕ್ತಿಕ ವಿಭಾಗ ಹಾಗೂ ಮೃನಾಲ್ ಚೌಹಾಣ್ ಜೊತೆ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಮಹಿಳೆಯರ ತಂಡ ವಿಭಾಗದಲ್ಲಿ ದೀಪಿಕಾ ಅವರನ್ನೊಳಗೊಂಡ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.
ಪಣಜಿ(ಗೋವಾ): ಮಾಜಿ ವಿಶ್ವ ನಂ.1 ಆರ್ಚರಿ ಪಟು ದೀಪಿಕಾ ಕುಮಾರಿ ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 2 ಚಿನ್ನ, 1 ಬೆಳ್ಳಿ ಪದಕ ಗೆದ್ದಿದ್ದಾರೆ. ಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸುತ್ತಿರುವ ದೀಪಿಕಾ, ಮಹಿಳೆಯರ ವೈಯಕ್ತಿಕ ವಿಭಾಗ ಹಾಗೂ ಮೃನಾಲ್ ಚೌಹಾಣ್ ಜೊತೆ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಮಹಿಳೆಯರ ತಂಡ ವಿಭಾಗದಲ್ಲಿ ದೀಪಿಕಾ ಅವರನ್ನೊಳಗೊಂಡ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.
ಇದೇ ವೇಳೆ ಕರ್ನಾಟಕ 28 ಚಿನ್ನ, 23 ಬೆಳ್ಳಿ, 26 ಕಂಚು ಸೇರಿ ಒಟ್ಟು 77 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. 68 ಚಿನ್ನ, 63 ಬೆಳ್ಳಿ, 68 ಕಂಚು ಸೇರಿ ಒಟ್ಟು 199 ಪದಕ ಗೆದ್ದಿರುವ ಮಹಾರಾಷ್ಟ್ರ ಅಗ್ರಸ್ಥಾನದಲ್ಲೇ ಉಳಿದಿದೆ.
ಡಿ.16ಕ್ಕೆ ಬೆಂಗಳೂರು ಮಧ್ಯರಾತ್ರಿ ಮ್ಯಾರಥಾನ್
ಬೆಂಗಳೂರು: 16ನೇ ಆವೃತ್ತಿಯ ಬೆಂಗಳೂರು ಮಧ್ಯರಾತ್ರಿ ಮ್ಯಾರಥಾನ್ ಓಟ ಡಿ.16ರಂದು ನಡೆಯಲಿದೆ. ನಗರದ ವೈಟ್‌ಫೀಲ್ಡ್‌ನ ಕರ್ನಾಟಕ ವಾಣಿಜ್ಯ ಪ್ರಚಾರ ಸಂಸ್ಥೆ(ಕೆಟಿಪಿಒ) ಆವರಣದಿಂದ ಪ್ರಾರಂಭವಾಗಲಿದೆ. 42.195 ಕಿ.ಮೀ. ಪೂರ್ಣ ಮ್ಯಾರಥಾನ್, 21.0975 ಕಿ.ಮೀ. ಹಾಫ್ ಮ್ಯಾರಥಾನ್, 10ಕೆ ಹಾಗೂ 5ಕೆ ಓಟಗಳನ್ನೂ ಆಯೋಜಿಸಲಾಗಿದೆ. ಆಸಕ್ತರು www.midnightmarathon.inಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮಹಿಳಾ ತಂಡ ಚಾಂಪಿಯನ್
ರಾಂಚಿ: 7ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2016ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ಭಾರತ, ಈಗ 2ನೇ ಸಲ ಟ್ರೋಫಿ ಎತ್ತಿಹಿಡಿದಿದೆ.
ಅಜೇಯವಾಗಿ ಫೈನಲ್‌ಗೇರಿದ್ದ ಭಾರತ, ಭಾನುವಾರ ಜಪಾನ್ ವಿರುದ್ಧ 4-0 ಗೋಲುಗಳ ಗೆಲುವು ಸಾಧಿಸಿ, ಪ್ರಶಸ್ತಿ ಎತ್ತಿಹಿಡಿಯಿತು. ಫ್ಲಡ್‌ಲೈಟ್ಸ್ ಸಮಸ್ಯೆಯಿಂದಾಗಿ ಪಂದ್ಯ 45 ನಿಮಿಷ ತಡವಾಗಿ ಆರಂಭಗೊಂಡಿತು. 17ನೇ ನಿಮಿಷದಲ್ಲಿ ಸಂಗೀತಾ ತಂಡದ ಪರ ಖಾತೆ ತೆರೆದರು. 46ನೇ ನಿಮಿಷದಲ್ಲಿ ನೇಹಾ, 57ನೇ ನಿಮಿಷದಲ್ಲಿ ಲಾಲ್ರೆಮ್ಸಯಾಮಿ, 60ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಗೋಲು ಬಾರಿಸಿ ಗೆಲುವಿಗೆ ನೆರವಾದರು.
ಭಾರತ ಮಹಿಳಾ ಹಾಕಿ ತಂಡವನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ಮಹಿಳಾ ಹಾಕಿ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಟ್ವೀಟರಲ್ಲಿ ತಂಡದ ಪ್ರದರ್ಶನವನ್ನು ಕೊಂಡಾಡಿರುವ ಮೋದಿ, ‘ಭಾರತದ ನಾರಿ ಶಕ್ತಿ ಮತ್ತೊಮ್ಮೆ ಪ್ರಜ್ವಲಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ’ ಎಂದು ಆಟಗಾರ್ತಿಯನ್ನು ಶ್ಲಾಘಿಸಿದ್ದಾರೆ.