
ಮುಂಬೈ(ಜ.12): ನಾಯಕ ಅಜಿಂಕ್ಯ ರಹಾನೆ (91), ಶೆಲ್ಡಾನ್ ಜಾಕ್ಸನ್ (59) ಹಾಗೂ ಯುವ ಆಟಗಾರ ರಿಷಭ್ ಪಂತ್ (59) ದಾಖಲಿಸಿದ ಅರ್ಧಶತಕಗಳ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ 6 ವಿಕೆಟ್'ಗಳ ಭರ್ಜರಿ ಜಯ ಪಡೆಯಿತು.
ಇದೇ ಬ್ರೆಬೋರ್ನ್ ಮೈದಾನದಲ್ಲಿ ಮಂಗಳವಾರ ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ ಧೋನಿ ಸಾರಥ್ಯದ ಭಾರತ ‘ಎ’ ತಂಡ 3 ವಿಕೆಟ್'ಗಳ ವೀರೋಚಿತ ಸೋಲನುಭವಿಸಿತ್ತು.
ಗೆಲ್ಲಲು ಆಂಗ್ಲರು ನೀಡಿದ್ದ 283 ರನ್ ಗುರಿಯನ್ನು ರಹಾನೆ ಪಡೆ ಇನ್ನೂ 62 ಎಸೆತಗಳು ಬಾಕಿ ಇರುವಂತೆಯೇ ಅಂದರೆ, 39.4 ಓವರ್'ಗಳಲ್ಲಿಯೇ ಕೇವಲ 4 ವಿಕೆಟ್ ಕಳೆದುಕೊಂಡು ಮುಟ್ಟಿತು. ಅಂದಹಾಗೆ ಇಂಡೋ-ಆಂಗ್ಲೋ ನಡುವಣದ ಮೂರು ಏಕದಿನ ಸರಣಿಗೆ ಭಾನುವಾರ ಪುಣೆಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದೊಂದಿಗೆ ಚಾಲನೆ ಸಿಗಲಿದೆ.
ಶತಕದ ಜತೆಯಾಟ
ಯುವ ಆಟಗಾರ ಶೆಲ್ಡಾನ್ ಜಾಕ್ಸನ್ ಜತೆಗೆ ಇನ್ನಿಂಗ್ಸ್ ಆರಂಭಿಸಿದ ರಹಾನೆ, ಇಂಗ್ಲೆಂಡ್ ಬೌಲರ್‌ಗಳನ್ನು ಆರಂಭದಿಂದಲೇ ಪರಿಣಾಮಕಾರಿಯಾಗಿ ಎದುರಿಸಿದರು. ನಾಯಕನಿಗೆ ಮತ್ತೊಂದು ಬದಿಯಲ್ಲಿ ಅದ್ವಿತೀಯ ಸಾಥ್ ನೀಡಿದ ಜಾಕ್ಸನ್, ತಂಡ ಸರಿದಿಸೆಯಲ್ಲಿ ಹೆಜ್ಜೆ ಹಾಕಲು ನೆರವಾದರು. ಈ ಜೋಡಿ ಮೊದಲ ವಿಕೆಟ್‌ಗೆ 119 ರನ್ ಕಲೆಹಾಕುವುದರೊಂದಿಗೆ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಆಕ್ರಮಣಕಾರಿ ಆಟದಿಂದ ಸಾಗುತ್ತಿದ್ದ ಈ ಜೋಡಿಯನ್ನು ಇನ್ನಿಂಗ್ಸ್'ನ 19ನೇ ಓವರ್'ನ ಐದನೇ ಎಸೆತದಲ್ಲಿ ಸ್ಪಿನ್ನರ್ ಮೊಯೀನ್ ಅಲಿ ಬೇರ್ಪಡಿಸಿದರು. ಜಾನಿ ಬೇರ್'ಸ್ಟೋಗೆ ಕ್ಯಾಚಿತ್ತ ಜಾಕ್ಸನ್ ಕ್ರೀಸ್ ತೊರೆದರೆ, ಬಳಿಕ ಬಂದ ಯುವ ಆಟಗಾರ ರಿಷಭ್ ಪಂತ್ ಬಿಡುಬೀಸಿನ ಬ್ಯಾಟಿಂಗ್'ನಿಂದ ತಂಡದ ರನ್'ರೇಟ್ ಅನ್ನು ಇನ್ನಷ್ಟು ಹಿಗ್ಗಿಸಿದರು. ಬಿರುಸಿನ ಅರ್ಧಶತಕ ಪೂರೈಸಿದ ಅವರು ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್'ನಲ್ಲಿ ಅಲೆಕ್ಸ್ ಹೇಲ್ಸ್‌ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ತುಳಿದರು. ಅವರ ನಿರ್ಗಮನದ ನಂತರ ರಹಾನೆಯನ್ನು ಡೇವಿಡ್ ವಿಲ್ಲೆ ಬೌಲ್ಡ್ ಮಾಡಿದರೆ, ತದನಂತರ ಆಡಲಿಳಿದ ಎಡಗೈ ಆಟಗಾರ ಸುರೇಶ್ ರೈನಾ (45) ಕೂಡ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ರೈನಾ ವಿಕೆಟ್ ಪತನವಾದ ಬಳಿಕ ದೀಪಕ್ ಹೂಡಾ (23) ಮತ್ತು ಇಶನ್ ಕಿಶಾನ್ 5 ರನ್ ಗಳಿಸಿ ಅಜೇಯರಾಗುಳಿದರು.
ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಭಾರತೀಯ ಬೌಲರ್‌ಗಳ ಸಂಘಟನಾತ್ಮಕ ಬೌಲಿಂಗ್ ಮಧ್ಯದಲ್ಲಿಯೂ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಆರಂಭಿಕ ಜೇಸನ್ ರಾಯ್ 25 ರನ್ ಗಳಿಸಿ ಔಟಾದರೆ, ಅಲೆಕ್ಸ್ ಹೇಲ್ಸ್ (51) ಹಾಗೂ ಜಾನಿ ಬೇರ್‌ಸ್ಟೋ (64) ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು. ಆದರೆ, ನಾಯಕ ಇಯಾನ್ ಮಾರ್ಗನ್ ಶೂನ್ಯಕ್ಕೆ ಔಟಾಗಿ ಮತ್ತೊಮ್ಮೆ ವೈಫಲ್ಯ ಕಂಡರು. ಇತ್ತ ಜೋಸ್ ಬಟ್ಲರ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ತಂಡವನ್ನು ಸಂಕಷ್ಟಕ್ಕೆ ಗುರಿಮಾಡಿತು. ಆದರೆ, ಬೆನ್ ಸ್ಟೋಕ್ಸ್ (38) ಮತ್ತು ಕೊನೆಯ ಆಟಗಾರನಾಗಿ ಅಜೇಯ 38 ರನ್ ಮಾಡಿದ ಡೇವಿಡ್ ವಿಲ್ಲೆ ತಂಡದ ಮೊತ್ತವನ್ನು ಸ್ಪರ್ಧಾತ್ಮಕವಾಗಿಸುವಲ್ಲಿ ಸಹಕಾರಿಯಾದರು.
ಆತಿಥೇಯ ತಂಡದ ಪರ ಪರ್ವೇಜ್ ರಸೂಲ್ 38ಕ್ಕೆ 3 ವಿಕೆಟ್ ಪಡೆದರೆ, ಅಶೋಕ್ ದಿಂಡಾ, ಶಾಬಾಜ್ ನದೀಮ್ ಹಾಗೂ ಪ್ರದೀಪ್ ಸಂಗ್ವಾನ್ ತಲಾ 2 ವಿಕೆಟ್ ಗಳಿಸಿದರು. ಸಿದ್ಧಾರ್ಥ್ ಕೌಲ್ 1 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 48.5 ಓವರ್‌ಗಳಲ್ಲಿ 282/10
ಭಾರತ ಎ: 39.4 ಓವರ್‌ಗಳಲ್ಲಿ 4 ವಿಕೆಟ್‌ಗೆ 282
ಫಲಿತಾಂಶ: ಭಾರತ ಎ ತಂಡಕ್ಕೆ 6 ವಿಕೆಟ್ ಜಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.