ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 4-1 ಜಯ

By Web DeskFirst Published Jan 7, 2019, 11:01 AM IST
Highlights

2ನೇ ಬಾರಿಗೆ ಏಷ್ಯನ್‌ ಕಪ್‌ನಲ್ಲಿ ಆಡುತ್ತಿರುವ ಚೆಟ್ರಿ, ಭಾರತ ಪರ ತಮ್ಮ 105ನೇ ಪಂದ್ಯದಲ್ಲಿ 2 ಗೋಲು ಬಾರಿಸಿದರು. 27ನೇ ನಿಮಿಷದಲ್ಲಿ ಪೆನಾಲ್ಟಿಮೂಲಕ ಗೋಲಿನ ಖಾತೆ ತೆರೆದ ಚೆಟ್ರಿ, 46ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿದರು.

ಅಬುಧಾಬಿ(ಜ.07): ಗೋಲ್‌ ಮಷಿನ್‌ ಸುನಿಲ್‌ ಚೆಟ್ರಿಯ ಆಕರ್ಷಕ ಪ್ರದರ್ಶನದ ನೆರವಿನಿಂದ ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಭಾನುವಾರ ಥಾಯ್ಲೆಂಡ್‌ ವಿರುದ್ಧ 4-1 ಗೋಲುಗಳ ಗೆಲುವು ಸಾಧಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 1964ರ ಬಳಿಕ ಪಂದ್ಯಾವಳಿಯಲ್ಲಿ ಭಾರತಕ್ಕೆ ಒಲಿದ ಮೊದಲ ಗೆಲುವು ಇದಾಗಿದೆ.

2ನೇ ಬಾರಿಗೆ ಏಷ್ಯನ್‌ ಕಪ್‌ನಲ್ಲಿ ಆಡುತ್ತಿರುವ ಚೆಟ್ರಿ, ಭಾರತ ಪರ ತಮ್ಮ 105ನೇ ಪಂದ್ಯದಲ್ಲಿ 2 ಗೋಲು ಬಾರಿಸಿದರು. 27ನೇ ನಿಮಿಷದಲ್ಲಿ ಪೆನಾಲ್ಟಿಮೂಲಕ ಗೋಲಿನ ಖಾತೆ ತೆರೆದ ಚೆಟ್ರಿ, 46ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿದರು.

ಭಾರತ ತಂಡದ ಅತ್ಯಂತ ಯುವ ಆಟಗಾರ ಅನಿರುದ್ಧ ತಾಪಾ 68ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, 80ನೇ ನಿಮಿಷದಲ್ಲಿ ಜೆಜೆ ಲಾಲ್‌ಪೆಕ್ಲುವಾ ಭಾರತದ ಮುನ್ನಡೆಯನ್ನು 4-1ಕ್ಕೇರಿಸಿದರು. 33ನೇ ನಿಮಿಷದಲ್ಲಿ ನಾಯಕ ತೀರಾಸಿಲ್‌ ದಾಂಗ್ಡಾ ಥಾಯ್ಲೆಂಡ್‌ ಪರ ಏಕೈಕ ಗೋಲು ಬಾರಿಸಿದರು. ಲೀಗ್‌ ಹಂತದಲ್ಲಿ ಭಾರತಕ್ಕೆ ಇನ್ನೆರಡು ಪಂದ್ಯ ಬಾಕಿ ಇದೆ. ಯುಎಇ ಹಾಗೂ ಬಹ್ರೇನ್‌ ವಿರುದ್ಧದ ಪಂದ್ಯಗಳಲ್ಲಿ ಒಂದನ್ನು ಡ್ರಾಮಾಡಿಕೊಂಡರೂ ಭಾರತ, ನಾಕೌಟ್‌ ಹಂತಕ್ಕೇರಲಿದೆ.

4ನೇ ಬಾರಿಗೆ ಏಷ್ಯನ್‌ ಕಪ್‌ನಲ್ಲಿ ಆಡುತ್ತಿರುವ ಭಾರತ, 11 ಪಂದ್ಯಗಳಲ್ಲಿ ಕೇವಲ 3ನೇ ಗೆಲುವು ದಾಖಲಿಸಿದೆ. 1964ರಲ್ಲಿ ಇಸ್ರೇಲ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 2 ಗೆಲುವು, 1 ಸೋಲು ಕಂಡಿತ್ತು. ಟೂರ್ನಿಯಲ್ಲಿ ಕೇವಲ 4 ತಂಡಗಳು ಪಾಲ್ಗೊಂಡಿದ್ದವು. 1984, 2011ರಲ್ಲಿ ಭಾರತ ಒಂದೂ ಗೆಲುವು ಪಡೆದಿರಲಿಲ್ಲ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ, ಜೋರ್ಡನ್‌ ವಿರುದ್ಧ 0-1 ಗೋಲಿನಲ್ಲಿ ಸೋತು ಆಘಾತ ಅನುಭವಿಸಿತು.

click me!