
ಸದ್ಯ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಸರಣಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಮುಳುಗಿಹೋಗಿದೆ. ಆದ್ರೆ ಒಬ್ಬ ಆಟಗಾರ ಮಾತ್ರ ಕಣ್ಣೀರು ಹಾಕುತ್ತಿದ್ದಾನೆ. ಬಿಕ್ಕಿಬಿಕ್ಕಿ ಅಳುತ್ತಿದ್ದಾನೆ. ಒಂದು ಕಡೆ ತಂಡದಲ್ಲಿದ್ರೂ ಆಡುವ 11ರ ಬಳಗದಲ್ಲಿಲ್ಲ ಅನ್ನೋ ಕೊರಗು. ಇನ್ನೊಂದೆಡೆ ನಾನು ಕಪ್ಪಾಗಿ ಹುಟ್ಟಿದ್ದೇ ತಪ್ಪ ಅಂತ ಪರಿತಪಿಸುತ್ತಿದ್ದಾನೆ. ಆತ ಬೇರಾರು ಅಲ್ಲ ಓಪನಿಂಗ್ ಬ್ಯಾಟ್ಸ್ಮನ್ ಅಭಿನವ್ ಮುಕುಂದ್.
ಓಪನಿಂಗ್ ಬ್ಯಾಟ್ಸ್ಮನ್ಗೆ ಏನಾಯ್ತು..?: ಕೆಟ್ಟ ಸಮಾಜಕ್ಕೆ ಬರೆದ ಪತ್ರದಲ್ಲಿ ಏನಿದೆ..?
ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಸದ್ಯ ವರ್ಣಬೇಧದ ಪಿಡುಗುವಿಗೆ ತುತ್ತಾಗಿದ್ದಾರೆ. ಮುಕುಂದ್ರ ಕಪ್ಪು ಮೈಬಣ್ಣವನ್ನ ವಿಷ್ಯವನ್ನಾಗಿಟ್ಟುಕೊಂಡು ಅವರನ್ನ ಹೀಯ್ಯಾಳಿಸುತ್ತಿದ್ದಾರೆ ಎಂದು ಸ್ವತಃ ಮುಕುಂದ್ ಅವರೇ ತಮ್ಮ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ.
ತಮಗಾಗಿರುವ ಅವಮಾನಗಳನ್ನ ಕುರಿತು ಅಭಿನವ್ ಮುಕುಂದ್ ಹೀಗೆ ಬರೆದಿದ್ದಾರೆ.
‘ಪ್ರಿಯ ಗೆಳೆಯರೇ, ನಾನು 10 ವರ್ಷ ಇದ್ದಾಗಿನಿಂದ ಕ್ರಿಕೆಟ್ ಆಡುತ್ತಿದ್ದೇನೆ. ನನ್ನ ಪರಿಶ್ರಮದಿಂದ ಇಂದು ನಾನು ನನ್ನ ದೇಶಕ್ಕಾಗಿ ಆಡುತ್ತಿದ್ದೇನೆ. ಆದರೆ ನಾನು ಇಂದು ಹೀಗೆ ಬರೆಯಲು ಕಾರಣ ಕೆಲ ಜನರು ತಮ್ಮ ಯೋಚನಾ ಶಕ್ತಿಯನ್ನ ಬದಲಿಸಿಕೊಳ್ಳಬಹುದೇನೋ ಎಂಬ ನಂಬಿಕೆ ಯಿಂದ. ನಾನು 15 ವರ್ಷ ಇದ್ದಾಗಿನಿಂದ ದೇಶ ಮತ್ತು ವಿದೇಶಗಳನ್ನೆಲ್ಲಾ ಸುತ್ತುತ್ತಿದ್ದೇನೆ. ನಾನು ಹೋದ ಕಡೆಯಲ್ಲಾ ನನ್ನ ಮೈಬಣ್ಣದ ಬಗ್ಗೆ ಜನರು ಕೀಳಾಗಿ ಕಾಣುತ್ತಿದ್ದಾರೆ. ನಾನು ಬಾಲ್ಯದಿಂದಲೂ ಮೈದಾನದಲ್ಲೇ ಕಾಲ ಕಳೆದಿದ್ದೇನೆ. ಸೂರ್ಯನ ಶಾಖದಲ್ಲಿ ಬೆಂದಿದ್ದೇನೆ. ನಾನು ಚೆನ್ನೈನವನು. ದೇಶದ ಅತೀ ಗರಿಷ್ಠ ತಾಪಮಾನವಿರುವ ಸ್ಥಳ. ಹೀಗಾಗಿ ನನ್ನ ಬಣ್ಣ ಕೊಂಚ ಕುಗ್ಗಿರಬಹುದು. ಆದರೆ ನನ್ನ ಬಣ್ಣವನ್ನೇ ವಿಷಯವನ್ನಾಗಿಟ್ಟುಕೊಂಡು ನನ್ನನ್ನು ಹಲವು ಹೆಸರುಗಳಿಂದ ಕರೆದಿದ್ದಾರೆ. ಆದ್ರೆ ಅದಕ್ಕೆಲ್ಲಾ ನಕ್ಕಿದ್ದೇನೆ. ಕಾರಣ ನನ್ನ ಮುಂದೆ ಅದಕ್ಕಿಂತ ದೊಡ್ಡ ಗುರಿಯೇ ಇತ್ತು. ಆದ್ರೆ ಇಂದು ನಾನು ಮಾತನಾಡುತ್ತಿದ್ದೇನೆ. ಕಾರಣ ನಾನಲ್ಲ ಬದಲಿಗೆ ನನ್ನಂತೆ ನಮ್ಮ ದೇಶದಲ್ಲಿ ತುಂಬಾ ಮಂದಿ ಇಂತಹುದ್ದೇ ಅವಮಾನಗಳನ್ನ ಅನುಭವಿಸಿದ್ದಾರೆ. ಆದ್ರೆ ನಮ್ಮ ಬಣ್ಣದ ಬಗ್ಗೆ ನಮಗೆ ಹೆಮ್ಮೆ ಇದೆ’
ಎಂದು ಭಾವನಾತ್ಮಕವಾಗಿ ತಮ್ಮ ಟ್ವಿಟ್ಟರ್'ನಲ್ಲಿ ಮುಕುಂದ್ ಬರೆದುಕೊಂಡಿದ್ದಾರೆ.
ಕೊಹ್ಲಿ ಹುಡುಗರು ಮುಕುಂದ್ರನ್ನ ಹೀಯ್ಯಾಳಿಸಿದ್ರಾ..?
ಅಭಿನವ್ ಮುಕುಂದ್ರ ಈ ಎಮೋಷನಲ್ ಲೆಟರ್ ಓದಿದ್ರೆ ಎಂಥವರಿಗಾದ್ರೂ ಟೀಂ ಇಂಡಿಯಾ ಆಟಗಾರರ ಮೇಲೆ ಅನುಮಾನ ಮೂಡುತ್ತೆ. ಉಳಿದ ಆಟಗಾರರು ಡ್ರೆಸ್ಸಿಂಗ್ ರೂಮಿನಲ್ಲಿ ಮುಕುಂದ್ಗೆ ವರ್ಣಬೇಧ ಮಾಡಿದ್ರಾ ಅನಿಸುತ್ತೆ. ಮುಕುಂದ್ ಟ್ವಿಟ್ಟರ್ನಲ್ಲಿ ಈ ಪತ್ರ ಹಾಕುತ್ತಿದಂತೆ ಇದೇ ರೀತಿಯ ವದಂತಿ ಹಬ್ಬಿತ್ತು. ಆದರೆ ಅದು ಸುಳ್ಳು. ಟೀಂ ಇಂಡಿಯಾದ ಯಾವೊಬ್ಬ ಆಟಗಾರನೂ ಅವರ ಬಣ್ಣದ ಬಗ್ಗೆ ಮಾತನ್ನಾಡೇ ಇಲ್ಲ ಎಂದು ಸ್ವತಃ ಮುಕುಂದ್ ಹೇಳಿಕೊಂಡಿದ್ದಾರೆ.
ಇದಿಷ್ಟೇ ಅಲ್ಲ ಮುಕುಂದ್ ನನ್ನನ್ನ ಕೀಳಾಗಿ ಕಂಡು ನನ್ನ ಬಣ್ಣದ ಬಗ್ಗೆ ಮಾತನ್ನಾಡಿದ ಹಲವು ಜನರು ನನ್ನ ಬದುಕಿನಲ್ಲಿ ಇದ್ದಾರೆ. ಅವರಿಗೆ ನಾನು ಹೇಳಿದ್ದು ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಏನೇ ಆದ್ರೂ, ಕೇವಲ ದಕ್ಷಿಣ ಆಫ್ರಿಕಾ, ಯೂರೋಪ್ನಂತಹ ದೇಶದಲ್ಲಿ ಹೆಚ್ಚು ಇದ್ದ ವರ್ಣಭೇದದ ಪಿಡುಗು ನಮ್ಮ ದೇಶದಲ್ಲಿ ಇನ್ನೂ ಇದೆ ಎಂಬುದು ನಿಜಕ್ಕೂ ದುರಂತ. ಆದ್ರೆ ಇಂತಹ ಹತ್ತು ಹಲವು ಅಡೆತಡೆಗಳನ್ನ ಮೆಟ್ಟಿನಿಂತು ಇಂದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಅಭಿನವ್ ಮುಕುಂದ್ ಸಾಧನೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.